ಚಿಂತನ ಪುಸ್ತಕಕ್ಕೆ ಇನ್ನೊಂದು ಪ್ರಶಸ್ತಿಯನ್ನು ತಂದು ಕೊಟ್ಟ ಚಂಪಾ ಜೈಪ್ರಕಾಶ್ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು

 

%e0%b2%9a%e0%b2%82%e0%b2%aa%e0%b2%be-%e0%b2%9c%e0%b3%88%e0%b2%aa%e0%b3%8d%e0%b2%b0%e0%b2%95%e0%b2%be%e0%b2%b6%e0%b3%8d

Cover_Design 04

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕೊಡಲ್ಪಡುವ ಮಧುರಚೆನ್ನ ದತ್ತಿನಿಧಿ ಬಹುಮಾನ* 2015 ನೇ ಸಾಲಿನಲ್ಲಿ ಚಿಂತನ ಪುಸ್ತಕ ಪ್ರಕಟಿಸಿರುವ ಚಂಪಾ ಜೈಪ್ರಕಾಶ್ ಬರೆದಿರುವ 21ನೇ ಕ್ರೋಮೋಜೋ಼ಮ್ ಮತ್ತು ಇತರೆ ಕಥನಗಳು' ಪುಸ್ತಕಕ್ಕೆ ದೊರಕಿದೆ. ಇದು `ಲೇಖಕರ ಮೊದಲ ಕೃತಿ’ ವಿಭಾಗದಲ್ಲಿ ಉತ್ತಮ ಪುಸ್ತಕವೆಂದು ಪರಿಗಣಿಸಿ ನೀಡಿದ ಬಹುಮಾನ.

ಶ್ರೀಮತಿ ಚಂಪರವರು, ಶಿಕ್ಷಣ ತಜ್ಞೆ, ವಿಶೇಷ ಮಕ್ಕಳ ಶಿಕ್ಷಣದಲ್ಲಿ ಅದರಲ್ಲೂ ವಿಶಿಷ್ಟವಾಗಿ ಮನೋವೈಕಲ್ಯವುಳ್ಳ ಮಕ್ಕಳ ಶಿಕ್ಷಣದಲ್ಲಿ ವಿಶೇಷ ಪರಿಣಿತಿ ಪಡೆದಿರುವರು. ಈ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿ, ಹಲವು ಹೆಸರಾಂತ ಸಂಸ್ಥೆಗಳಲ್ಲಿ ವೃತ್ತಿ ನಿರತರಾಗಿದ್ದು ತುಂಬಾ ಆಳವಾದ ಅನುಭವವನ್ನು ಉಳ್ಳವರು.
ಅವರು ತಮ್ಮ ದೀರ್ಘ ಅನುಭವದಲ್ಲಿ ಕಂಡ ಅನೇಕ ಮಕ್ಕಳಲ್ಲಿ ಕೆಲವರನ್ನು ಆಯ್ದು ಅವರ ಪಾಲನೆಯ ಬಗ್ಗೆ, ಸಾಧನೆ, ತರಬೇತಿಯ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಇಲ್ಲಿ ಆರಿಸಿಕೊಂಡಿರುವ ಮಕ್ಕಳು ವಿವಿಧ ಬಗೆಯ ಮನೋವೈಕಲ್ಯಗಳನ್ನು ಪ್ರತಿನಿಧಿಸುತ್ತಾರೆ. ಬುದ್ಧಿಮಾಂದ್ಯತೆ, ಸೆರೆಬ್ರಲ್ ಪಾಲ್ಸಿ ಅಥವಾ ಮೆದುಳಿನ ಆಘಾತದಿಂದ ಬರುವ ಸ್ನಾಯು ಬಿಗಿತ ಮತ್ತು ಸೆಳೆತ, ಡೌನ್ಸ್ ಸಿಂಡ್ರೋಮ್, ಸ್ವಲೀನತೆ ಮತ್ತು ಕಲಿಕಾ ನ್ಯೂನತೆ ಹೀಗೆ ವಿವಿಧ ರೀತಿಯ ಮನೋವೈಕಲ್ಯದ ಲಕ್ಷಣಗಳ ಮಕ್ಕಳನ್ನು ಇವರು ಇಲ್ಲಿ ಆರಿಸಿಕೊಂಡಿದ್ದಾರೆ. ಈ ಮಕ್ಕಳ ಕಥೆಗಳನ್ನು ಹೃದಯಂಗಮವಾಗಿ, ತುಂಬಾ ಸಹಾನುಭೂತಿಯಿಂದ ಚಂಪರವರು ನಿವೇದಿಸಿದ್ದಾರೆ.

ಜಾತಿ ಮತ್ತು ಸಾಮಾಜಿಕ ಅಂತಸ್ತುಗಳಿಗೂ, ವಿಕಲತೆಗೂ ಯಾವ ಸಂಬಂಧವೂ ಇಲ್ಲ. ವಿಕಲತೆಯು ಯಾರನ್ನು ಬೇಕಾದರೂ, ಯಾವಾಗ ಬೇಕಾದರೂ ಎಡತಾಕಬಹುದು. ಆದರೆ ಮಕ್ಕಳಲ್ಲಿ ಕಂಡಾಗ ಅದರ ಪರಿಣಾಮ ತೀವ್ರವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕುಟುಂಬದವರ ಜವಾಬ್ದಾರಿ ಅತಿ ಹೆಚ್ಚಿನದಾಗಿರುತ್ತದೆ.
ಎಲ್ಲರ ಮನೆಯಲ್ಲೂ ಮಗುವಿನ ಆಗಮನಕ್ಕಾಗಿ ಕಾಯುತ್ತಿರುವಾಗ ಆಗುವ ಆತಂಕ, ಸಂಭ್ರಮ, ನಿರೀಕ್ಷೆಗಳು ಮತ್ತು ಕನಸುಗಳು ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಆದರೆ ಯಾವುದೇ ಮಗು ಭಿನ್ನವಾಗಿ ಹುಟ್ಟಿದರೆ ಅಥವಾ ಅದರ ಬೆಳವಣಿಗೆ ಕುಂಠಿತಗೊಂಡಿದ್ದರೆ ಪೋಷಕರಲ್ಲಿ, ಸಂಬಂಧಿಕರಲ್ಲಿ ಉಂಟಾಗುವ ಸಂಕಟ, ತಲ್ಲಣಗಳು ಗಾಢವಾದುದ್ದು. ಇನ್ನು ಮಗುವಿನ ತಪಾಸಣೆಗಳಿಗಾಗಿ ಅನೇಕ ವೈದ್ಯರುಗಳ ಬಳಿಗೆ ಎಡತಾಕುವುದು, ಹಾಗೆಯೇ ಆ ಎಲ್ಲ ವೈದ್ಯರುಗಳು ಗುರುತಿಸಿ ತಿಳಿಸಿದ ಸಮಸ್ಯೆಯನ್ನು ಅರಗಿಸಿಕೊಳ್ಳುವ, ಸಮಸ್ಯೆಯ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅನುಭವಿಸುವ ಮಾನಸಿಕ ದುಗುಡ, ಆಘಾತ, ಅತ್ಯಂತ ಕಷ್ಟಕರ.
ಶ್ರೀಮತಿ ಚಂಪರವರು ಪ್ರತಿ ಕಥೆಯಲ್ಲೂ ಇವೆಲ್ಲ ಅನುಭವಗಳನ್ನು ಬಹಳ ಸಾಂದ್ರವಾಗಿ ಹಿಡಿದಿಟ್ಟಿದ್ದಾರೆ. ಮಗು ಮತ್ತು ಮಗುವಿನ ತಾಯಿ-ತಂದೆ ಮತ್ತು ಅವರ ಕುಟುಂಬದೊಡನೆ ಅವರ ಸಹಾನುಭೂತಿ ಎದ್ದು ಕಾಣುತ್ತದೆ. ಅಲ್ಲಿಂದ ಮುಂದೆ ಅವರು ಮಗುವಿನ ತೊಂದರೆಯನ್ನು ಅರ್ಥೈಸಿ ಅದರ ಕಾರಣಗಳನ್ನು, ವಿವರಗಳೊಂದಿಗೆ ಕೂಲಂಕುಷವಾಗಿ ವಿವರಿಸುತ್ತಾರೆ. ಮುಖ್ಯವಾಗಿ ಆ ಮಕ್ಕಳ ಚಿಕಿತ್ಸೆ, ತರಬೇತಿ ಮುಂತಾದವುಗಳನ್ನು ವಿವರಿಸಿ ಮಕ್ಕಳ ಸಾಧನೆಯನ್ನು ಎತ್ತಿ ತೋರಿಸಿ, ಮಕ್ಕಳ ಸಾಧನೆಯಲ್ಲಿ ತಾವೂ ಖುಷಿ ಪಡೆದು, ಬೇರೆಯವರಿಗೂ ಧೈರ್ಯ ತುಂಬುತ್ತಾರೆ. ಅಂತಹ ಸಾಧನೆಗಾಗಿ ಮಗು, ಪೋಷಕರು ಮತ್ತು ಶಿಕ್ಷಕರು ಪಡಬೇಕಾದ ಪರಿಶ್ರಮದ ಅಗಾಧತೆಯನ್ನು ತಿಳಿಸಿಕೊಡುತ್ತಾರೆ. ಮುಖ್ಯವಾಗಿ ಅಂಥ ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಮತ್ತು ಕುಟುಂಬದವರ ಶ್ರಮವನ್ನು ಗಮನಿಸಿ ಅದನ್ನು ಒತ್ತಿ ಹೇಳುತ್ತಾರೆ. ಚಿಕಿತ್ಸಾಲಯದಲ್ಲಿ, ಶಾಲೆಯಲ್ಲಿ ಕಲಿಯುವುದನ್ನು ಮನೆಯಲ್ಲಿ ಹೇಗೆ ಅಭ್ಯಾಸ ಮಾಡಿಸಿ, ಗಟ್ಟಿಮಾಡಬೇಕೆಂದು ತೋರಿಸುತ್ತಾರೆ. ಅದೇ ವೇಳೆ ಇಂತಹ ಮಕ್ಕಳ ಸಾಧನೆ ನಿಯಮಿತವಾಗಿರುತ್ತದೆಂದೂ ಜ್ಞಾಪಿಸುತ್ತಾರೆ. ಪ್ರತಿ ಮಗುವೂ ತನ್ನ ಶಕ್ತಿಯ ಪರಿಮಿತಿಯಲ್ಲಿ ಸಾಧ್ಯವಾದಷ್ಟು ವಿಕಸನಗೊಂಡು ಬೆಳೆದಾಗ ಪೋಷಕರು ಸಂತೋಷ ಪಡಬೇಕೆಂದು ತೋರಿಸಿದ್ದಾರೆ. ಈ ಸಾಧನೆಯಿಂದ ಮಕ್ಕಳಿಗೂ ಎಷ್ಟು ಹೆಮ್ಮೆ, ಪ್ರೋತ್ಸಾಹ ಸಿಗುತ್ತದೆ ಎಂಬುದನ್ನು ಗುರುತಿಸಿ ತೋರಿಸಿದ್ದಾರೆ. ಇದೆಲ್ಲವನ್ನು ಬಹು ಸ್ವಾರಸ್ಯಕರವಾಗಿ ಮನ ಕಲಕುವಂತೆ ವರ್ಣಿಸಿದ್ದಾರೆ.
– ನ ರತ್ನ (ಪುಸ್ತಕದ ಮುನ್ನುಡಿಯಿಂದ)

*ಡಾ. (ಶ್ರೀಮತಿ) ಉಮಾ ಬಿದರಿ ಹಾಗೂ ಮಧುರಚೆನ್ನರ ಶಿಷ್ಯರು ಒಟ್ಟಾಗಿ `ಮಧುರಚೆನ್ನರ ಜನ್ಮಶತಮಾನೋತ್ಸವ’ದ ಸಂದರ್ಭದ ನೆನಪಿಗಾಗಿ ಅವರ  ಹೆಸರಿನಲ್ಲಿ ಅಕಾಡೆಮಿಗೆ ರೂ 50,000 (ಐವತ್ತು ಸಾವಿರಗಳ) ಮೌಲ್ಯದ ದತ್ತಿನಿಧಿಯನ್ನು ನೀಡಿದ್ದಾರೆ. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ರೂ 5,000ದಷ್ಟು ಮೊಬಲಗನ್ನು `ಪುಸ್ತಕ ಬಹುಮಾನ ಯೋಜನೆ’ಯ ನಿಯಮಗಳ ಅನುಸಾರ ಪ್ರತಿವರ್ಷ `ಲೇಖಕರ ಮೊದಲ ಕೃತಿ’ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ, `ಪುಸ್ತಕ ಬಹುಮಾನ ಯೋಜನೆ’ಯಲ್ಲಿನ 17ನೇ ಸಾಹಿತ್ಯ ಪ್ರಕಾರವಾದ `ಲೇಖಕರ ಮೊದಲನೆ ಕೃತಿ’ಯೇ ಆಗಿರುತ್ತದೆ.  ಈ ಬಹುಮಾನವನ್ನು `ಮಧುರಚೆನ್ನ ದತ್ತಿನಿಧಿ ಬಹುಮಾನ’ ಎಂದು ಕರೆಯಲಾಗುವುದು.