secularvaada front

secularvaada back
 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಸೆಕ್ಯುಲರ್ವಾದ ಕಳೆದ ಕೆಲವು ದಶಕಗಳಿಂದ ಬಹುಚರ್ಚಿತ ವಿಷಯ. ಸ್ವಾತಂತ್ರ್ಯ ಬಂದ ನಂತರದ ಕೆಲವು ದಶಕಗಳಲ್ಲಿ ಸೆಕ್ಯುಲರ್ವಾದ ಸರ್ವಸಮ್ಮತ ನೀತಿಯಾಗಿತ್ತು. ಆಗಲೂ ಸೆಕ್ಯುಲರ್ವಾದದ ಕಟು ವಿಮರ್ಶಕರು ಇದ್ದರು. ಈ ವಿಮರ್ಶಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದೇ ಇದ್ದ ಗುಂಪಿಗೆ ಸೇರಿದವರಾದ್ದರಿಂದ ಅವರ ಈ ಕಟುವಿಮರ್ಶೆಗೆ ಆಗ ಗಮನ ಕೊಡುವವರಿರಲಿಲ್ಲ.  ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಿರಂತರ ಪ್ರಯತ್ನದಿಂದ ದೇಶದ ಬಹುಪಾಲು ಜನತೆಯ ಮಧ್ಯೆ ಸೆಕ್ಯುಲರ್ವಾದದ ಬಗ್ಗೆ ನಿರ್ಲಕ್ಷ, ಆತಂಕ, ಅತೃಪ್ತಿ ಹರಡಲು ಅವರಿಗೆ ಸಾಧ್ಯವಾಗಿದೆ ಮಾತ್ರವಲ್ಲದೆ ಅವರೀಗ ರಾಜಕೀಯವಾಗಿ ಮೇಲುಗೈ ಸಾಧಿಸಿದ್ದಾರೆ. ಸೆಕ್ಯುಲರ್ವಾದದ ಮೇಲಿನ ಸತತ ಹಲ್ಲೆಗಳಿಂದ ಸೆಕ್ಯುಲರ್ವಾದವನ್ನು ಬೆಂಬಲಿಸುತ್ತಿದ್ದವರಲ್ಲೂ ಸಂಶಯಗಳು ಮೂಡುತ್ತಿವೆ.

ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಭಾರತರತ್ನ ಪುರಸ್ಕೃತ ಪ್ರೊ. ಅಮರ್ತ್ಯ ಸೇನ್ ಅವರ ಪ್ರಬಂಧ “ಸೆಕ್ಯುಲರಿಸಂ ಅಂಡ್ ಇಟ್ಸ್ ಡಿಸ್ಕಂಟೆಂಟ್ಸ್’ ನಮ್ಮ ಇಂದಿನ ಸನ್ನಿವೇಶದಲ್ಲಿ ಅತ್ಯಂತ ಪ್ರಸ್ತುತವಾದ ಪ್ರಮುಖ ಪ್ರಬಂಧ. ಈ ಪ್ರಬಂಧವನ್ನು 1992ರ ಬಾಬ್ರಿ ಮಸೀದಿ ಧ್ವಂಸವಾದ ನಂತರದಲ್ಲಿ ಅವರು ಬರೆದದ್ದು. ಬಾಬರಿ ಮಸೀದಿಯ ಧ್ವಂಸದ ಕರಾಳ ಘಟನೆಯಿಂದಾದ ಆಘಾತ ಮತ್ತು ಅದರಿಂದ ಎಲ್ಲ ಭಾರತೀಯರು ಚೇತರಿಸಿಕೊಳ್ಳುವ ಬಗೆ ಹೇಗೆ ಎಂಬ ಹುಡುಕಾಟದ ಒಂದು ಗಂಭೀರ ಪ್ರಯತ್ನವಾಗಿ ಈ ಪ್ರಬಂಧ ಮೂಡಿಬಂದಿದೆ.

ಪ್ರೊ. ಅಮರ್ತ್ಯಸೇನ್, ಈ ಪ್ರಬಂಧದಲ್ಲಿ ಮುಖ್ಯವಾಗಿ ಸೆಕ್ಯುಲರ್ವಾದದ ಕುರಿತಾಗಿ `ಅಸ್ತಿತ್ವ ರಾಹಿತ್ಯ’, `ಪಕ್ಷಪಾತ’, `ಪೂರ್ವ ಕುರುಹು’, `ಮುಸ್ಲಿಂ ಪಂಥೀಯತೆ’. `ಆಧುನಿಕ ವಿರೋಧಿ’ ಮತ್ತು `ಸಾಂಸ್ಕೃತಿಕ’ ಎನ್ನುವ ಆರು ಬಗೆಯ ಟೀಕೆಯ ಮಾದರಿಗಳನ್ನು ನಿರ್ದಿಷ್ಟವಾಗಿ ಗುರುತಿಸಿದ್ದಾರೆ.  ಈ ಟೀಕೆಗಳು ಮತ್ತು ಆಕ್ಷೇಪಣೆಗಳು ಸೆಕ್ಯುಲರ್ವಾದಕ್ಕೆ ಎದುರಾಗಿರುವ ಸವಾಲುಗಳು ಎಂದೇ ಅವರು ಪರಿಗಣಿಸುತ್ತಾರೆ. ಅಲ್ಲದೆ ಅವುಗಳಿಗೆ ತಕ್ಕ ಉತ್ತರ ಕೊಡುವುದಷ್ಟೇ ಸೇನ್ ಅವರ ಉದ್ದೇಶವಾಗಿರದೆ, ಅಂತಹ ಟೀಕೆ ಮತ್ತು ಆಕ್ಷೇಪಣೆಗಳನ್ನು ಸಾಮಾಜಿಕ, ಧಾರ್ಮಿಕ, ರಾಜಕೀಯ, ಚಾರಿತ್ರಿಕ ಹಾಗೂ ತಾತ್ವಿಕನೆಲೆಗಳಿಂದ ವಿಮರ್ಶೆಗೆ ಒಳಪಡಿಸುತ್ತಾರೆ.