ಹಸಿವು ಜಾಗತಿಕ ಸಮಸ್ಯೆ. ಈ ಸಮಸ್ಯೆಗೆ ಎರಡು ಕಾರಣಗಳಿವೆ. ಒಂದು ಪ್ರಾಕೃತಿಕ. ಸಹಜವಾದ ಕ್ಷಾಮ ಡಾಮರಗಳಿಂದಾಗುವ ಆಹಾರದ ಕೊರತೆ. ಇನ್ನೊಂದು ಮನುಷ್ಯನೇ ನಿರ್ಮಾಣ ಮಾಡುವ ಆಹಾರದ ಕೃತಕ ಅಭಾವ. ಒಬ್ಬನ ಹೊಟ್ಟೆಯ ಮೇಲೆ ಹೊಡೆದು ತಾನು ಮಾತ್ರ, ತನ್ನವರು ಮಾತ್ರ ಸುಖವಾಗಿರಬೇಕು ಎಂಬ ಬಂಡವಳಿಗ ಬುದ್ಧಿ ಈ ಕೃತಕ ಬರಗಾಲದ ಹಿಂದಿನ ರಾಜಕಾರಣ. ಈ ಬಂಡವಳಿಗ ಬುದ್ಧಿ ವ್ಯಕ್ತಿ ನೆಲೆಯಿಂದ ಹಿಡಿದು ಜಾಗತಿಕ ವ್ಯಾಪ್ತಿಯವರೆಗೆ ವ್ಯವಸ್ಥಿತವಾಗಿ ಹಬ್ಬಿ ಬೆಳೆದ ಬೃಹತ್ ಜಾಲವಾಗಿದೆ. ಹೀಗಾಗಿಯೇ ಹಸಿವಿಗೂ ಲಾಭಕ್ಕೂ ಇರುವ ಸಂಬಂಧ ಕ್ರೂರವೂ ಅಮಾನವೀಯವೂ ಆದುದು.

ಈ ಕೃತಿಯಲ್ಲಿ ತೊಂಡಿ ಸಂಪ್ರದಾಯದ ಜನಪದ ಗೀತೆಗಳಿಂದ ಹಿಡಿದು ಚಳವಳಿಯ ಉಪವಸ್ತುವಿನಂತಿರುವ ವಚನ ಸಾಹಿತ್ಯವನ್ನೂ ಒಳಗೊಂಡು ಕನ್ನಡದ ಬಹುಮುಖ್ಯ ಹಿರಿಯ ಕಿರಿಯ ವಿಶಿಷ್ಟ ದನಿಗಳು ಇಲ್ಲಿ ಸೇರಿವೆ.

– ಎಸ್. ಜಿ. ಸಿದ್ಧರಾಮಯ್ಯ

1943 ರಲ್ಲಿ ಬಂಗಾಲದಲ್ಲಿ ಸಂಭವಿಸಿದ ಭೀಕರ ಬರದ ನೋವಿಗೆ ದೇಶದ ಸಾಹಿತ್ಯ, ಸಾಂಸ್ಕೃತಿಕ ವಲಯ ಅರ್ಥಪೂರ್ಣವಾಗಿ, ಮಾನವೀಯವಾಗಿ ಸ್ಪಂದಿಸಿದೆ. ಅತ್ಯಂತ ದೂರದ ಕನ್ನಡ ನೆಲದಲ್ಲಿ ಕೂಡ ಬಂಗಾಳದ ನೋವಿಗೆ ಸ್ಪಂದಿಸದೇ ಇರಲಿಲ್ಲ.

ಸಮಾಜ ಎದುರಿಸುವ ಇಂತಹ ಬಿಕ್ಕಟ್ಟು-ಸವಾಲುಗಳಿಗೆ ಕನ್ನಡ ಸಾಹಿತ್ಯ ಪ್ರತಿಸ್ಪಂದಿಸುತ್ತಲೇ ಬಂದಿದೆ. ಜಾನಪದ ಸಾಹಿತ್ಯ, ಚಂಪೂ ಸಾಹಿತ್ಯ, ವಚನ ಸಾಹಿತ್ಯವನ್ನೂ ಒಳಗೊಂಡು ದಲಿತ-ಬಂಡಾಯೋತ್ತರ ಸಾಹಿತ್ಯದ ಘಟ್ಟದವರೆಗೂ ಇದನ್ನು ನಾವು ನೋಡಬಹುದು.

ಶತಮಾನಗಳಿಂದ ಬಹುಸಂಖ್ಯಾತ ಸಮುದಾಯವನ್ನು ಕಾಡುತ್ತಿರುವ ಹಸಿವನ್ನು ಕನ್ನಡ ಕವಿಗಳು ಕಂಡ ಬಗೆ ಕೂಡ ವಿಶಿಷ್ಟವಾಗಿದೆ. ಹಸಿವಿನ ವಿವಿಧ ಮುಖಗಳನ್ನು ತೆರೆದಿಡುವುದರೊಂದಿಗೆ ಹಸಿವಿನ ಮೂಲ ಮತ್ತು ಪರಿಣಾಮಗಳನ್ನು ಕೂಡ ಸೂಕ್ಷ್ಮವಾಗಿ ಚಿತ್ರಿಸುತ್ತಾ ಹೋಗಿದ್ದಾರೆ. ಲೇಖಕರು ಕಟ್ಟಿಕೊಡುವ ಚಿತ್ರದ ಹಿಂದೆ ನೋವು, ಸಿಟ್ಟು, ಪ್ರತಿಭಟನೆಗಳು ಹಲವು ಬಾರಿ ಮೂರ್ತವಾಗಿ, ಕೆಲವು ಬಾರಿ ಅಮೂರ್ತವಾಗಿ ವ್ಯಕ್ತವಾಗಿವೆ.

– ವಿಠ್ಠಲ್ ಭಂಡಾರಿ