57. ವೈದಿಕ ಯುಗ


Chinthana Invitation

Advertisements

 

book0001book0002book0003book0004book0005book0006

‘ಅಲಿಗರ್ ಹಿಸ್ಟೋರಿಯನ್ಸ್ ಸೊಸೈಟಿ’ ಹಲವು ವರ್ಷಗಳಿಂದ ಇತಿಹಾಸದ ಬಗ್ಗೆ ವೈಜ್ಞಾನಿಕ ಮತ್ತು ಜಾತ್ಯಾತೀತ ಕಣ್ಣೋಟವನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಕೋಮುವಾದಿ ಮತ್ತು ಸಂಕುಚಿತವಾದೀ ವ್ಯಾಖ್ಯೆಗಳನ್ನು ಪ್ರತಿರೋಧಿಸುತ್ತಿರುವ ಒಂದು ಸಂಸ್ಥೆ. ಅದು ಕೈಗೆತ್ತಿಕೊಂಡಿರುವ A People’s History of India ಸರಣಿಯಲ್ಲಿ ಭಾರತದ ಜನ ಇತಿಹಾಸವನ್ನು ಸಂಕಲಿಸುವ ಈ ಯೋಜನೆಯ ಅಡಿಯಲ್ಲಿ ಇದುವರೆಗೆ ಹತ್ತು ಕೃತಿಗಳು ಪ್ರಕಟವಾಗಿವೆ.

1. Prehistory 2. The Indus Civilization 3. The Vedic Age 4. The Age of Iron and the Religious Revolution 5. Mauryan India 6. Post-Mauryan India: A Political and Economic History 20. Technology in Medieval India, c. 650-1750 25. Indian Economy Under Early British Rule 1757-1857 28. Indian Economy, 1858-1914 36. Man and Environment : The Ecological History of India

ಕನ್ನಡದಲ್ಲಿ ಇದುವರೆಗೆ ಮೊದಲ ಎರಡು ಕೃತಿಗಳು ಬಂದಿದ್ದು ಈ ಮರುಮುದ್ರಣದ ಜತೆಗೆ ಮೇಲೆ ತಿಳಿಸಿರುವ 3,4,5 ಮತ್ತು 28 ಬಿಡುಗಡೆಗೆ ಸಿದ್ಧವಾಗಿವೆ.

ಈ ಪುಸ್ತಕ ಸರಣಿಯ ಪ್ರಧಾನ ಸಂಪಾದಕರಾದ ಇರ್ಫಾನ್ ಹಬೀಬ್ ಅವರು ಭಾರತದ ಪ್ರಖ್ಯಾತ ಇತಿಹಾಸಕಾರರು ಹಾಗೂ ಈ ಹಿಂದೆ ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾದ್ಯಾಪಕರಾಗಿದ್ದು ಹಲವು ಗ್ರಂಥಗಳನ್ನು ರಚಿಸಿದ್ದಾರೆ.

ಈ ಹತ್ತು ಕೃತಿಗಳಲ್ಲಿ ಇದುವರೆಗೆ ಆರು ಕೃತಿಗಳು ‘ಭಾರತದ ಜನ ಇತಿಹಾಸ’ ಮಾಲೆಯನ್ನಾಗಿಸಿ ‘ಚಿಂತನ ಪುಸ್ತಕ’ ಕನ್ನಡದ ಓದುಗರ ಕೈಗಿಟ್ಟಿದೆ. ಅವು ಹೀಗಿವೆ

೧. ಪೂರ್ವೇತಿಹಾಸ, ೨. ಸಿಂಧೂ ನಾಗರಿಕತೆ, ೩. ವೈದಿಕ ಯುಗ, ೪. ಕಬ್ಬಿಣದ ಯುಗ ಮತ್ತು ಧಾರ್ಮಿಕ ಕ್ರಾಂತಿ, ೫. ಮೌರ್ಯರ ಕಾಲದ ಭಾರತ ಹಾಗೂ ೨೮. ಭಾರತದ ಆರ್ಥಿಕತೆ 1858-1914

ಪೂರ್ವೇತಿಹಾಸ : ಈ ಕೃತಿ ಭಾರತದ ಪ್ರಾರಂಭಿಕ ಮಾನವನ ಜೀವನವನ್ನು ವಿವರಿಸುತ್ತದೆ. ಇಲ್ಲಿ ವಿವರಿಸುವ ಕಾಲವು ನೇರ ಅಥವಾ ಪರೋಕ್ಷವಾಗಿ ಲಿಖಿತ ದಾಖಲೆಗಳು ಬೆಳಕು ಚೆಲ್ಲದ ಕಾಲಕ್ಕಿಂತ ಬಹಳ ಹಿಂದಿನದು. ಇದು ‘ಭಾರತದ ಒಂದು ಜನ ಚರಿತ್ರೆ” ಎನ್ನುವ ವಿಶಾಲ ಯೋಜನೆಯ ಭಾಗವಾದರೂ, ಇದು ಸ್ವತಂತ್ರವಾಗಿಯೂ ಪ್ರಸ್ತುತವಾಗಬೇಕೆನ್ನುವ ಕೃತಿ. ಇಲ್ಲಿನ ಮೊದಲನೆಯ ಅಧ್ಯಾಯ ಭಾರತದ ಭೌಗೋಳಿಕ ರೂಪಗೊಳ್ಳುವಿಕೆಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಭಾರತೀಯ ಉಪಖಂಡದ ವಾತಾವರಣ ಹಾಗೂ ನೈಸರ್ಗಿಕ ಪರಿಸರ (ಸಸ್ಯವರ್ಗ ಮತ್ತು ಪ್ರಾಣಿವರ್ಗ) ಗಳಲ್ಲಿ ಹಲವು ಬದಲಾವಣೆಗಳಾದವು. ಪೂರ್ವೇತಿಹಾಸ ಹಾಗೂ ಇತಿಹಾಸವನ್ನು ಅರ್ಥೈಸಲು ಸಂಬಂಧ ಪಟ್ಟ ಇಂತಹ ಬದಲಾವಣೆಗಳನ್ನು ಈ ಅಧ್ಯಾಯದಲ್ಲಿ ದಾಖಲಿಸಲಾಗಿದೆ. ಎರಡನೆಯ ಅಧ್ಯಾಯ ಜಾಗತಿಕ ಸಂದರ್ಭದಲ್ಲಿ ಮಾನವ ವಿಕಾಸ ಹಾಗೂ ಭಾರತದಲ್ಲಿನ ಮಾನವನ ಕಥೆಯನ್ನು ವಿವರಿಸುತ್ತದೆ. ಅವನ ಉಪಕರಣಗಳ ಸಮೂಹಗಳನ್ನು, ಅವನ್ನು ತಯಾರಿಸುವವರ ಬಗೆಗೆ ಸಂಬಂಧಿಸಿ ವಿವರಿಸುತ್ತದೆ. ಹಾಗೂ ಮೂರನೆಯ ಅಧ್ಯಾಯ ಮುಖ್ಯವಾಗಿ ವ್ಯವಸಾಯದ ಉಗಮ ಹಾಗೂ ಶೋಷಣಾತ್ಮಕ ಸಂಬಂಧಗಳ ಪ್ರಾರಂಭವನ್ನು ವಿವರಿಸುತ್ತದೆ.

ಸಿಂಧೂ ನಾಗರಿಕತೆ : ಈ ಕಿರುಹೊತ್ತಿಗೆಯಲ್ಲಿ ‘ಪೂರ್ವೇತಿಹಾಸ’ ಬಿಟ್ಟಲ್ಲಿಂದ ಕತೆ ಮುಂದುವರಿದಿದೆ. ಇಲ್ಲಿಯ ಪ್ರಮುಖ ವಿಷಯ ಸಿಂಧೂ ನಾಗರೀಕತೆಯಾಗಿದ್ದು ಇದರೊಂದಿಗೆ, ಸಮಕಾಲೀನ ಹಾಗೂ ನಂತರ ಕ್ರಿ ಪೂ ೧೫೦೦ವರೆಗಿನ ಸಂಸ್ಕೃತಿಗಳೂ ಅಲ್ಲದೆ, ಇಂದಿನ ಪ್ರಮುಖ ಭಾರತೀಯ ಭಾಷಾ ಕುಟುಂಬಗಳ ರೂಪಗೊಳ್ಳುವಿಕೆಯ ಬಗೆಗೂ ವಿವರಿಸಲಾಗಿದೆ. ಇಲ್ಲಿ ವಿವರಿಸುವ ಕಾಲಮಾನಮಾನವನ್ನು ಆದಿಇತಿಹಾಸ ಅಥವಾ ಪ್ರೋಟೋಹಿಸ್ಟರಿ ಎಂದು ಕರೆಯಬಹುದು.

ವೈದಿಕ ಯುಗ : ಈ ಏಕ ವಿಷಯ ಗ್ರಂಥದ ಮೊದಲ ಎರಡು ಅಧ್ಯಾಯಗಳಲ್ಲಿ ಋಗ್ವೇದ ಮತ್ತು ಉತ್ತರ ವೈದಿಕ ಯುಗದ ಸಾಹಿತ್ಯಿಕ ಗ್ರಂಥಗಳು ಪರಿಚಯಿಸಿದ ಜಗತ್ತನ್ನು ಓದುಗನಿಗೆ ಪರಿಚಯ ಮಾಡಿಕೊಡಲಾಗಿದೆ. ಮೂರನೇ ಅಧ್ಯಾಯದಲ್ಲಿ ಕ್ರಿ.ಪೂ.೧೫೦೦-೭೦೦ ರವರೆಗಿನ ಕಾಲದ ಭಾರತದ ಉಪಖಂಡವನ್ನು ಪುರಾತತ್ವ ಶಾಸ್ತ್ರದ ಆಧಾರದ ಮೇಲೆ ಪರಿಚಯಿಸಲಾಗಿದೆ.

ಈ ಕೃತಿಯ ಮುಖ್ಯ ಅಂಶಗಳನ್ನು ಋಗ್ವೇದದ ನದಿ ಶ್ಲೋಕದಿಂದ ಪಡೆಯಲಾಗಿದೆ. ಏಕೆಂದರೆ ಆ ಶ್ಲೋಕದಿಂದಲೇ ಭಾರತದ ಐತಿಹಾಸಿಕ ಭೂಗೋಳದ ಅಧ್ಯಯನವು ಪ್ರಾರಂಭವಾಗುವುದು. ವೈದಿಕ ಗ್ರಂಥಗಳಲ್ಲಿ ಜಾತಿ ಪದ್ದತಿಯ ಆರಂಭದ ಮುನ್ಸೂಚನೆಯನ್ನು ಕಾಣಬಹುದು. ಜಾತಿ ಪದ್ದತಿಯು ಬೆಳೆದಂತೆಲ್ಲ ಅದರ ಇತರ ಪ್ರಮುಖ ಅಂಶಗಳನ್ನು ನಾವು ಉದಾರಿಸಲಾಗಿದೆ. ಮೂರನೇ ಅಧ್ಯಾಯದಲ್ಲಿ ಪೌರಾಣಿಕ ಪುರಾತತ್ವ ಶಾಸ್ತ್ರದಲ್ಲಿ ಕಂಡು ಬಂದಿರುವ ಕೆಲವು ವಿಷಯಗಳನ್ನು ಉದಾಹರಿಸಲಾಗಿದೆ.

ಕಬ್ಬಿಣದ ಯುಗ ಮತ್ತು ಧಾರ್ಮಿಕ ಕ್ರಾಂತಿ: ಮೌರ್ಯರ ಪೂರ್ವದ ಇತಿಹಾಸದ ಅವಧಿಯನ್ನು ಸಾಮಾನ್ಯವಾಗಿ ಬೌದ್ಧ ಯುಗ ಎಂದೇ ಪರಿಗಣಿಸಲಾಗುತ್ತದೆ. ಆದರೆ ಈ ಕೆಳಗಿನ ಎರಡು ಕಾರಣಗಳಿಗಾಗಿ ಈ ಕೃತಿಯ ಶೀರ್ಷಿಕೆಯನ್ನು ಬೌದ್ಧ ಯುಗ ಎನ್ನುವ ಬದಲಾಗಿ ಮೇಲಿನ ಶೀರ್ಷಿಕೆಯನ್ನು ನೀಡಲಾಗಿದೆ. ಮೊದಲನೆಯದಾಗಿ ಬೌದ್ಧ ಯುಗ ಎಂದ ಕೂಡಲೇ ಬುದ್ಧನ ಕಾಲಘಟ್ಟಕ್ಕೆ ಅಂದರೆ ಕ್ರಿ.ಪೂ.ಆರನೆಯ ಅಥವಾ ಐದನೆಯ ಶತಮಾನಕ್ಕೆ (ವಾಸ್ತವ ಕಾಲಾವಧಿಯ ಬಗ್ಗೆ ವಿವಾದವಿದೆ. ಇದನ್ನು ಗ್ರಂಥದಲ್ಲಿ ಚರ್ಚಿಸಲಾಗಿದೆ) ನಮ್ಮ ಗ್ರಂಥದ ಅಧ್ಯಯನ ವ್ಯಾಪ್ತಿ ಸೀಮಿತಗೊಳ್ಳುತ್ತದೆ. ಆದರೆ ಈ ಗ್ರಂಥದಲ್ಲಿ ನಾವು ಕ್ರಿ.ಪೂ.೭೦೦ರಿಂದ ಕ್ರಿ.ಪೂ.೩೫೦ರವರೆಗಿನ ಇತಿಹಾಸವನ್ನು ಅಧ್ಯಯನ ಮಾಡಿದ್ದೇವೆ. ಎರಡನೆಯ ಕಾರಣ ಎಂದರೆ ಬುದ್ಧ ಬಾಳಿದ ಮತ್ತು ತನ್ನ ಸಂದೇಶವನ್ನು ಸಾರಿದ ಕಾಲಾವಧಿಯಲ್ಲಿ ಕೇವಲ ಸಂಕಥನಗಳು ಮಾತ್ರ ಇರಲಿಲ್ಲ. ಇದೇ ಅವಧಿಯಲ್ಲಿ ಇತರ ಚಿಂತಕರ ಧಾರ್ಮಿಕ-ತಾತ್ವಿಕ ಕ್ರಿಯೆಗಳೂ ಪ್ರಚಲಿತವಾಗಿದ್ದವು. ಆದರೆ ಬುದ್ಧ ಮತ್ತು ಮಹಾವೀರ ನಮಗೆ ತಿಳಿದಿರುವ ಪ್ರಮುಖ ಚಿಂತಕರಾಗಿ ಕಾಣುತ್ತಾರೆ. ಜನರ ಜೀವನದಲ್ಲಿ ಉಂಟಾದ ಗುಣಾತ್ಮಕ ಬದಲಾವಣೆಗಳನ್ನೇ ಕೇಂದ್ರೀಕರಿಸಿ ತನ್ಮೂಲಕವೇ ಚಾರಿತ್ರಿಕ ಬದಲಾವಣೆಗಳ ಪ್ರಕ್ರಿಯೆಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದ್ದರೂ ವೈಯ್ಯಕ್ತಿಕವಾಗಿ ಕೆಲವು ವ್ಯಕ್ತಿಗಳ ಕೊಡುಗೆಯನ್ನು ನಿರಾಕರಿಸಲಾಗುವುದಿಲ್ಲ.

ಚಾರಿತ್ರಿಕ ಬದಲಾವಣೆಗಳನ್ನು ವ್ಯಾಪಕವಾಗಿ ಪರಿಗಣಿಸಿದಾಗ ಈ ಮುನ್ನೂರ ಐವತ್ತು ವರ್ಷಗಳಲ್ಲಿ ಮಹತ್ವವಾದ ಹಲವು ಬೆಳವಣಿಗೆಗಳು ಸಂಭವಿಸಿರುವುದನ್ನು ಕಾಣಬಹುದು. ಮೊದಲನೆಯದಾಗಿ ಈ ಕಾಲಾವಧಿ ಭಾರತದ ಕಬ್ಬಿಣದ ಯುಗ. ಸುದೀರ್ಘ ಪ್ರಕ್ರಿಯೆಯೇ ಆದರೂ ಕಬ್ಬಿಣದ ಬಳಕೆಯಿಂದ ಸಲಕರಣೆಗಳನ್ನು ಮಾರ್ಪಡಿಸಿ ಎಲ್ಲೆಡೆ ಹರಡುವಲ್ಲಿ ಈ ಅವಧಿ ಯಶಸ್ವಿಯಾಗಿತ್ತು. ತತ್ಪರಿಣಾಮವಾಗಿ ಕೃಷಿ ಚಟುವಟಿಕೆಗಳೂ ವಿಸ್ತರಣೆಗೊಂಡು ಕುಶಲ ಕಲಾ ಉತ್ಪಾದನೆಯೂ ಹೆಚ್ಚಾಗಿತ್ತು. ಸಿಂಧೂ ಬಯಲಿನ ನಾಗರಿಕತೆಯ ಒಂದು ಸಾವಿರ ವರ್ಷಗಳ ನಂತರ ಪಟ್ಟಣ ಮತ್ತು ನಗರಗಳು ಪುನಃ ಕಾಣಿಸಿಕೊಂಡ ದ್ವಿತೀಯ ನಗರೀಕರಣ ಪ್ರಕ್ರಿಯೆಗೆ ಇದು ಮೂಲ ಅಲ್ಲದಿದ್ದರೂ, ಈ ಪ್ರಕ್ರಿಯೆಯನ್ನು ಪ್ರತಿನಿಧಿಸಿತ್ತು. ಈ ಅವಧಿಯಿಂದಲೇ ಜಾತಿ ವ್ಯವಸ್ಥೆಯೂ ಒಂದು ಚೌಕಟ್ಟನ್ನು ನಿರ್ಮಿಸಿಕೊಂಡಿದ್ದೇ ಅಲ್ಲದೆ ಈ ಚೌಕಟ್ಟು ಶಾಶ್ವತವಾಗಿ ಜಾತಿ ವ್ಯವಸ್ಥೆಯೊಡನೆ ಸಮ್ಮಿಳಿತವಾಗಿತ್ತು. ರಾಜಕೀಯ ಸ್ತರದಲ್ಲಿ ಪ್ರಾಚೀನ ಭಾರತೀಯ ಪ್ರಭುತ್ವ ವ್ಯವಸ್ಥೆ ಆದಿವಾಸಿ ರಾಜಪ್ರಭುತ್ವ ಮತ್ತು ಗಣರಾಜ್ಯಗಳ ಮೂಲಕ ಉಗಮಿಸಿತ್ತು. ಅಂತಿಮವಾಗಿ ಬುದ್ಧ ಮತ್ತು ಮಹಾವೀರರ ಪ್ರೇರಣೆಯಿಂದ ಉಂಟಾದ ಧರ್ಮ ಕ್ರಾಂತಿ, ವೇದ ಕಾಲದ ಸಂಪ್ರದಾಯಗಳನ್ನು ಮತ್ತು ಬ್ರಾಹ್ಮಣ್ಯದ ಅಧಿಪತ್ಯವನ್ನು ನಿರಾಕರಿಸುವ ನವ ಧರ್ಮ ವ್ಯವಸ್ಥೆಯನ್ನು ಹುಟ್ಟುಹಾಕಿತ್ತು. ಮೂಲಭೂತವಾಗಿ ಒಂದು ಸ್ವತಂತ್ರ ಹಾಗೂ ಪರ್ಯಾಯ ವ್ಯವಸ್ಥೆಗಳಾಗಿ ಈ ಧರ್ಮಗಳ ಅಸ್ತಿತ್ವವನ್ನು ನಿರಾಕರಿಸುವ ಒಂದು ಪ್ರಯತ್ನವಾಗಿ ಈ ಚಳುವಳಿಗಳನ್ನು ಸಾಮಾನ್ಯವಾಗಿ ಅಸಾಂಪ್ರದಾಯಿಕ ಎಂದು ಬಣ್ಣಿಸಲಾಗುತ್ತದೆ. ಆದರೆ ಈ ರೀತಿಯ ಅಭಿಪ್ರಾಯಗಳು ಈ ಧರ್ಮಗಳು ಚಿಂತನೆ ಮತ್ತು ನಂಬಿಕೆಗಳಲ್ಲಿ ಉಂಟುಮಾಡಿದ ಪರಿವರ್ತನೆಯನ್ನು ಗ್ರಹಿಸುವ ನಮ್ಮ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತವೆ. ಈ ಗ್ರಂಥದ ಶೀರ್ಷಿಕೆಯೇ ತಂತ್ರಜ್ಞಾನದಿಂದ ಹಿಡಿದು ನಂಬಿಕೆಯವರೆಗೆ ಎಲ್ಲಾ ವೈವಿಧ್ಯಮಯ ಬದಲಾವಣೆಗಳ ತಿರುಳನ್ನು ಗ್ರಹಿಸಲು ಯತ್ನಿಸುತ್ತದೆ.

ಮೌರ್ಯರ ಕಾಲದ ಭಾರತ : ಇಲ್ಲಿ ಅಧ್ಯಯನಕ್ಕಾಗಿ ಆರಿಸಿಕೊಂಡಿರುವ ಒಂದೂವರೆ ಶತಮಾನಗಳ ಕಾಲದ ಬಗೆಗಿನ ಮಾಹಿತಿಯನ್ನು ಸಂಕ್ಷಿಪ್ತಗೊಳಿಸುವುದು ಕಷ್ಟ. ಹಲವು ಮೂಲ ಆಕರಗಳ ಭಾಗಗಳ ಅನುವಾದಗಳು ಇಲ್ಲಿ ಸೇರಿವೆ. ಉದಾಹರಣೆಗೆ ಅಶೋಕನ ಹತ್ತು ಶಾಸನಗಳನ್ನು ತರ್ಜುಮೆ ಮಾಡಲಾಗಿದೆ. ನಕ್ಷೆಗಳು ಮತ್ತು ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗಿದ್ದು ಕೃತಿಯಲ್ಲಿನ ಮಾಹಿತಿಗೆ ಅವುಗಳು ಪೂರಕವಾಗುತ್ತವೆ ಎನ್ನಬಹುದು. ಮೌರ್ಯರ ಕಾಲಾನುಕ್ರಮಣಿಕೆ, ಅರ್ಥಶಾಸ್ತ್ರದ ರಚನಾಕಾಲ, ಶಾಸನ ಶಾಸ್ತ್ರ ಮತ್ತು ಅಶೋಕನ ಕಾಲದ ಭಾಷಾ ಪ್ರಭೇದಗಳು ಬಹು ಚರ್ಚಿತ ವಿಷಯಗಳಾಗಿದ್ದು ಆ ವಿವರಗಳು ಸಹ ಕೃತಿಯ ಗಾತ್ರವನ್ನು ಹೆಚ್ಚಿಸಿವೆ.

ಭಾರತದ ಆರ್ಥಿಕತೆ 1858-1914 : ಈ ಕೃತಿಯೊಂದಿಗೆ ನಮ್ಮ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ ಮಾಲಿಕೆಯು ಆಧುನಿಕ ಇತಿಹಾಸಕ್ಕೆ ಪ್ರವೇಶ ಮಾಡುತ್ತದೆ. ೨೮ನೇ ಸ್ಥಾನದಲ್ಲಿರುವ ಪ್ರಸಕ್ತ ಕೃತಿಯಲ್ಲಿ ನಾವು ವಸಾಹತುಶಾಹಿಯ ಅತ್ಯುನ್ನತ ಹಂತ ಎಂದು ಪರಿಗಣಿಸಲ್ಪಡುವ ೧೮೫೮ರಿಂದ ೧೯೧೪ರವರೆಗಿನ ಅವಧಿಯಲ್ಲಿ ಅಂದರೆ ೧೮೫೭ರ ದಂಗೆಯ ಧಮನಿಸುವಿಕೆಯಿಂದ ಪ್ರಾರಂಭವಾಗಿ ಮೊದಲ ವಿಶ್ವಯುದ್ದವು ಆರಂಭವಾಗುವವರೆಗೆ ಭಾರತದ ಆರ್ಥಿಕತೆಯ ಇತಿಹಾಸ ಒಂದು ನಿರೂಪಣೆಯನ್ನು ನೀಡುತ್ತದೆ. ಈ ಕೃತಿಯ ವಿಷಯದ ಸ್ವರೂಪವು, ಪಠ್ಯದಲ್ಲಿ ಹಾಗೂ ಕೋಷ್ಟಕದಲ್ಲಿ ಅಂಕಿಅಂಶಗಳ ಆಪಾರ ಬಳಕೆಯನ್ನು ಬಯಸುತ್ತದೆ. ಇದು, ಒಂದು ಆಕರ್ಷಕ ವಿಷಯವು ನೀರಸವಾಗಿ ಕಾಣುವಂತೆ ಮಾಡುತ್ತದೆ; ಆದರೆ ಇಲ್ಲಿ ತೊಂದರೆ ತೆಗೆದುಕೊಳ್ಳಲೇಬೇಕಾಗುತ್ತದೆ; ಏಕೆಂದರೆ ಪ್ರಮಾಣಕ್ಕೆ ಸಂಬಂಧಿಸಿದ ಅಂಕಿಅಂಶ(ಕ್ವಾಂಟಿಟೇಟಿವ್ ಡಾಟಾ)ಗಳನ್ನು ಬಳಸದೇ ಇದ್ದರೆ, ಅವು ಅಷ್ಟರ ಮಟ್ಟಿಗೆ ಪಠ್ಯದಲ್ಲಿ ಮಾಡಲಾದ ಹೇಳಿಕೆಗಳ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತವೆ. ತಾಂತ್ರಿಕ ವಿಷಯಗಳ ಮೇಲೆ ಪ್ರತ್ಯೇಕ ಟಿಪ್ಪಣಿಗಳನ್ನು ನೀಡಲಾಗಿದ್ದು ಅವುಗಳು ರಾಷ್ಟ್ರೀಯ ವರಮಾನದ ಲೆಕ್ಕಾಚಾರದ ನಿಯಮಗಳು, ಬ್ರಿಟಿಷ್ ಕಾಲದ ತೂಕಗಳು ಹಾಗೂ ಮಾಪನಗಳು, ಮತ್ತು ಹಳೆಯ ಆಡಳಿತಾತ್ಮಕ ವಿಭಾಗಗಳನ್ನು ಒಳಗೊಂಡಿವೆ. ವಿವಾದಾತ್ಮಕ ವಿಷಯಗಳನ್ನು ಒಳಗೊಂಡಿರುವ ಎರಡು ವಿಷಯಗಳು ಅಂದರೆ, ಕೌಂಟರ್‌ಫ್ಯಾಕ್ಯುವಲ್ ಹಿಸ್ಟರಿ ಮತ್ತು ಕೃಷಿ ಉತ್ಪಾದನೆಯ ಅಂದಾಜುಗಳು ಮತ್ತು ಎರಡು ಇತರ ವಿಷಯಗಳಾದ- ಆರ್ಥಿಕ ಇತಿಹಾಸಕ್ಕೆ ನೇರವಾಗಿ ಸಂಬಂಧಿಸದಿದ್ದರೂ ಪ್ರಸ್ತುತವಾದದ್ದು, ತಾಂತ್ರಿಕ ಶಿಕ್ಷಣ ಹಾಗೂ ರಾಷ್ಟ್ರೀಯವಾದ. ಇವುಗಳನ್ನು ಕೂಡಾ ಪ್ರತ್ಯೇಕವಾದ ಟಿಪ್ಪಣಿಗಳಲ್ಲಿ ಚರ್ಚಿಸಲಾಗಿದೆ. ಪ್ರತೀ ಅಧ್ಯಾಯದಲ್ಲಿ ಆ ಕಾಲದ ಕೃತಿಗಳು ಹಾಗೂ ದಾಖಲೆಗಳಿಂದ ಉದ್ಧರಣಗಳನ್ನು ನೀಡಲಾಗಿದೆ. ಇವುಗಳನ್ನು, ಸಮಕಾಲೀನರು ಆ ಕಾಲದ ಪರಿಸ್ಥಿತಿಗಳನ್ನು ಹೇಗೆ ವರದಿ ಮಾಡಿದರು ಅಥವಾ ಆ ಬಗ್ಗೆ ಹೇಗೆ ಪ್ರತಿಕ್ರಿಯಿಸಿದರು ಎಂಬ ಕುರಿತು ಓದುಗನಿಗೆ ಒಂದು ಅನುಭವವನ್ನು ನೀಡುತ್ತದೆ.

ಈ ಐದು ಕೃತಿಗಳ ಮೂಲ ಲೇಖಕರಾದ ಇರ್ಫಾನ್ ಹಬೀಬ್ ರವರಂತೆಯೇ ವಿಜಯಕುಮಾರ್ ಠಾಕೂರ್, ವಿವೇಕಾನಂದ ಝಾ ಹಾಗೂ ಕೃಷ್ಣ ಮೋಹನ್ ಶ್ರೀಮಾಲಿ ಅವರು ಭಾರತದ ವಿವಿಧ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದವರು.

ಹಾಗೆಯೇ ಈ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ

ಪ್ರದೀಪ ಬೆಳಗಲ್ ಅವರು ಕೃಷಿ ಪದವೀಧರರಾಗಿದ್ದು ವೃತ್ತಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕಿನಲ್ಲಿ ಕೃಷಿ ಅಧಿಕಾರಿ ಹಾಗೂ ಇವರ ಆಸಕ್ತಿಗಳು ಇತಿಹಾಸ, ವಿಜ್ಞಾನ ಮತ್ತು ಜನಪರ ಕಲಾರಂಗ.

ಎಚ್.ಎಸ್.ಜೈಕುಮಾರ್ ಓದಿದ್ದು ಬಿ.ಇ. ಎಮ್.ಟೆಕ್. ಸರ್ಕಾರಿ ಅಧಿಕಾರಿಯಾಗಿರುವ ಇವರ ಆಸಕ್ತಿಗಳು ಸ್ವತಂತ್ರ ತಂತ್ರಾಂಶ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವ ಆಂದೋಲನ.

ಸಿ.ಚಂದ್ರಪ್ಪ ಅವರು ಸರ್ಕಾರಿ ಕಲಾ ಕಾಲೇಜಿನಲ್ಲಿ ಸಹ ಪ್ರಾದ್ಯಾಪಕರಾಗಿರುವ ಇವರು ಜನಪರ ಆಂದೋಲನಗಳಲಿ ತಮ್ಮನ್ನು ತೊಡಗಿಸಿಕೊಂಡಿರುವವರು

ನಾ ದಿವಾಕರ ಅವರು ಮೈಸೂರಿನಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು ಕಾರ್ಮಿಕ ಆಂದೋಲನದ ಒಡನಾಟದಿಂದ ಪ್ರಗತಿಪರ ವಿಚಾರಗಳನ್ನು ಹೊಂದಿದವರು

ನಗರಗೆರೆ ರಮೇಶ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಿವೃತ್ತ ಇಂಗ್ಲೀಷ್ ಪ್ರಾದ್ಯಾಪಕರಾಗಿದ್ದು ಮಾನವ ಹಕ್ಕು ಸಂಘಟನೆಯೊಂದರಲ್ಲಿ ಸಕ್ರಿಯವಾಗಿರುವವರು

ಕೆ.ಎಂ.ಲೋಕೇಶ್ ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಇವರ ಆಸಕ್ತಿ ಆಧುನಿಕ ಭಾರತದ ಇತಿಹಾಸವಾಗಿದೆ