37. ಅಮದಿಶಮಾ-3 ಮಹಿಳಾ ದಿನದ ರೂವಾರಿ ಕ್ಲಾರಾ ಜೆಟ್ಕಿನ್


Advertisements

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ದ್ವಿಮುಖ ನೆಲೆಯಲ್ಲಿ ಮಹಿಳಾ ಸಬಲೀಕರಣ ಪ್ರಕ್ರಿಯೆಯು ನಡೆಯುತಿದ್ದು ಪ್ರಸ್ತುತ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯದ ಜತೆಯಲ್ಲಿಯೇ ಹೊಸ ಸವಾಲುಗಳನ್ನು ಎದುರಿಸುತ್ತಿದಾರೆ’ ಎಂದು ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಹೇಳಿದರು. ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅಂತರರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ’
ಪುಸ್ತಕ ಮಾಲಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಹಿಳೆಯರು ಔದ್ಯೋಗಿಕ ಜಗತ್ತಿನ ವಿಭಿನ್ನ ಸವಾಲುಗಳೊಂದಿಗೆ, ಕೌಟುಂಬಿಕ ಜವಾಬ್ದಾರಿಗಳ ಚೌಕಟ್ಟು ವಿಸ್ತಾರಗೊಂಡಿದೆ. ಈ ಬಗ್ಗೆಯು ಹೊಸ ನೆಲೆಯಲ್ಲಿ ಚಿಂತನೆ ನಡೆಸಬೇಕು’ ಎಂದ ಅವರು, ‘ಹೆಣ್ಣು ಮತ್ತು ಸಂಸ್ಕೃತಿ ಪರಸ್ಪರ ಮಿಳಿತ ಗೊಂಡಿದ್ದು, ಮಹಿಳೆಯ ಸಬಲೀಕರಣಕ್ಕೆ ಸಂಸ್ಕೃತಿ ತೊಡಕಾದ ಉದಾಹರಣೆಯಿಲ್ಲ. ಆದರೆ ಉದ್ಯೋಗ ಮತ್ತು ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸಲು ಭಾವನಾತ್ಮಕ ತೊಳಲಾಟದಿಂದ ಹೊರಬರಬೇಕು’ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷೆ ವಸುಂಧಾರ ಭೂಪತಿ, ‘ ಮಹಿಳೆಯರು ಸಬಲೀಕರಣಗೊಂಡಿದ್ದಾರೆ ಎಂದು ಘೋಷಿಸುತ್ತಿರುವ ಪ್ರಸ್ತುತ ಸಂದರ್ಭದ್ಲಲೂ ಮಹಿಳಾ ಪ್ರಪಂಚಕ್ಕೆ ಸವಾಲಾಗಿರುವ ಹೆಣ್ಣು ಭ್ರೂಣ ಹತ್ಯೆಯಂತಹ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.
ಎಸ್.ಕೆ.ಗೀತಾ ಅವರ ಮಹಿಳಾ ವಿಮೋಚನೆ: ಹೋರಾಟದ ನೂರು ವರ್ಷಗಳು, ಡಾ.ಎನ್.ಗಾಯತ್ರಿ ಅವರ ‘ಮಹಿಳಾದಿನದ ರೂವಾರಿ – ಕ್ಲಾರಾ ಜೆಟ್‌ಕಿನ್’ ಮತ್ತು ಡಾ.ಮಾಧವಿ ಭಂಡಾರಿ ಅವರ ‘ನೀನುಂಟು ನಿನ್ನ ರಕ್ಕೆಗಳುಂಟು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಲೇಖಕಿ ಡಾ.ಕೆ.ಷರೀಫಾ, ಕೆ.ಎಸ್.ವಿಮಲಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯಕರ್ನಾಟಕ
ಮಹಿಳಾ ಸಬಲೀಕರಣವು ಸವಾಲುಗಳುಳ್ಳ ಒಂದೇ ನಾಣ್ಯದ ಎರಡು ಮುಖ ಎಂದು ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅಭಿಪ್ರಾಯಪಟ್ಟರು.

ಕರ್ನಾಟಕ ಲೇಖಕಿಯರ ಸಂಘ ಹಾಗೂ ಚಿಂತನ ಪುಸ್ತಕ ಪ್ರಕಾಶನವು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನದ ಶತಮಾನೋತ್ಸವ ಮಾಲಿಕೆ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

ಆರ್ಥಿಕ ಸ್ವಾತಂತ್ರ್ಯ ಭದ್ರತೆಯ ಹೆಬ್ಬಾಗಿಲು ಎಂದುಕೊಳ್ಳುವ ದುಡಿಯುವ ಮಹಿಳೆಗೆ ಕೌಟುಂಬಿಕ ಜವಾಬ್ದಾರಿಗಳ ಚೌಕಟ್ಟು ವಿಸ್ತರಣೆಯಾಗಿದೆ. ಹೀಗಾಗಿ ಅವಳಿಗೆ ಬಿಡುವಿಲ್ಲದ ದುಡಿಮೆಯಾಗಿದೆ. ಅವಳ ಮನಸ್ಸು, ದೇಹ ಎಲ್ಲವನ್ನೂ ಪಿತೃ ಸಂಸ್ಕೃತಿ ಪಡೆಯುತ್ತಿದೆ. ಹೆಣ್ಣಿಗೆ ಬಿಡುಗಡೆ ಬೇಕಾದುದು ಈ ಸಂಸ್ಕೃತಿಯಿಂದಲ್ಲ ಬದಲಿಗೆ ಭಾವನೆಗಳ ತೊಳಲಾಟದ ಬಂಧನದಿಂದ ಮುಕ್ತಿ ಪಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಡುಗಡೆಯಾದ ‘ಈ ದಶಕದ ಮಹಿಳಾ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು’ ಪುಸ್ತಕದ ಪರಿಚಯ ಮಾಡಿಕೊಟ್ಟರು.

ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ. ಇಂತಹ ಸಂಗತಿಗಳ ವಿರುದ್ಧ ಮಹಿಳಾ ಸಮುದಾಯ ಎಚ್ಚೆತ್ತು ಹೋರಾಟದ ಮೂಲಕ ಹೆಣ್ಣು ಸಂತತಿಯನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.

ಕೃತಿ ಬಿಡುಗಡೆ: ಕಾರ್ಯಕ್ರಮದಲ್ಲಿ ಎಸ್.ಕೆ. ಗೀತಾ ಅವರ ‘ಮಹಿಳಾ ವಿಮೋಚನೆ ಹೋರಾಟದ ನೂರು ವರ್ಷಗಳು’, ಡಾ. ಎನ್. ಗಾಯತ್ರಿಯವರ ‘ವಿಶ್ವ ಮಹಿಳಾ ದಿನದ ರೂವಾರಿ – ಕ್ಲಾರಾ ಜೆಟ್ಕಿನ್’, ಡಾ. ಮಾಧವಿ ಭಂಡಾರಿಯವರ ‘ನೀನುಂಟು ನಿನ್ನ ರೆಕ್ಕೆಗಳುಂಟು ಈ ದಶಕದ ಮಹಿಳಾ ಸಂವೇದನೆಯ ಕಾವ್ಯ ಸಂಕಲನ’ ಪುಸ್ತಕಗಳನ್ನು ಗಾರ್ಮೆಂಟ್ಸ್ ಮಹಿಳೆಯರಾದ ಚಂದ್ರಕಲಾ, ಅರ್ಚನಾ, ರೇಣುಕಾ ಮತ್ತು ಜಯಮ್ಮ ಅವರು ಬಿಡುಗಡೆ ಮಾಡಿದರು. ಹೋರಾಟಗಾರ್ತಿಯರಾದ ಜನವಾದಿ ಮಹಿಳಾ ಸಂಘಟನೆ ಕಾರ್ಯಾಧ್ಯಕ್ಷೆ ಗೌರಮ್ಮ, ಜಿಲ್ಲಾ ಕಾರ್ಯದರ್ಶಿ ಯಶೋದಾ, ಸಿಐಟಿಯು ಉಪಾಧ್ಯಕ್ಷೆ ಲೀಲಾವತಿಯವರಿಗೆ ಪುಸ್ತಕ ಗೌರವ ಸಲ್ಲಿಸಲಾಯಿತು. ಕೆ.ಎಸ್. ವಿಮಲಾ, ಎಸ್. ಸತ್ಯ, ಡಾ. ಕೆ. ಶರೀಫಾ, ಡಾ. ಎನ್. ಗಾಯತ್ರಿ, ಚಿಂತನ ಪುಸ್ತಕದ ಎನ್.ಕೆ.
ವಸಂತರಾಜು ಮತ್ತಿತರರು ಉಪಸ್ಥಿತರಿದ್ದರು.