33. ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ


ಶಿಕ್ಷಣ, ವಿಜ್ಞಾನ ಹಾಗೂ ಕೃಷಿ- ಈ ಮೂರೂ ಕ್ಷೇತ್ರಗಳಲ್ಲಿ ಬೇರೆಬೇರೆ ರೂಪಗಳಲ್ಲಿ ಕಾರ್ಯ ನಿರ್ವಹಿಸಿರುವ ಉತ್ತರ ಕರ್ನಾಟಕದ ಬಿ.ಎಸ್.ಸೊಪ್ಪಿನ `ಕಟ್ಟುವ ಕೆಲಸ`ದಲ್ಲಿ ತಮ್ಮನ್ನು ಎಲ್ಲೆಡೆ ಗುರ್ತಿಸಿಕೊಂಡವರು. ಅವರ `ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ` ಕೃತಿ ಕೂಡ ಒಂದರ್ಥದಲ್ಲಿ ಕಟ್ಟುವ ಕೆಲಸವೇ.

ಅದು ರೈತ ಇತಿಹಾಸವನ್ನು ಪುನರ್ ರಚಿಸುವ ಕೆಲಸ. ಅನೇಕ ಚಳವಳಿಗಳ ಅಬ್ಬರದಲ್ಲಿ ಮಸುಕಾದ ಮಲಪ್ರಭೆ ತಡಿಯ ಮಣ್ಣಿನ ಮಕ್ಕಳ ಬಂಡಾಯದ ಕಥನವನ್ನು ಸೊಪ್ಪಿನ ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ.

ಅರವತ್ತರ ದಶಕದಲ್ಲಿ ಆರಂಭವಾದ ಮಲಪ್ರಭಾ ಜಲಾನಯನ ಪ್ರದೇಶದ ನೀರಾವರಿ ಯೋಜನೆ, ಒಂದೂವರೆ ದಶಕದ ನಂತರ ರೈತರ ಹೊಲಗಳಿಗೆ ನೀರು ಹರಿಯುವ ಮೂಲಕ ಕಾರ್ಯರೂಪಕ್ಕೆ ಬಂತು. ಆದರೆ, ನೀರು ಹರಿದ ಮಾತ್ರಕ್ಕೆ ರೈತರ ಬದುಕು ಹಸನಾಗಲಿಲ್ಲ.

ಸಾಂಪ್ರದಾಯಿಕ ಕೃಷಿಗೆ ಬದಲಾಗಿ ವಾಣಿಜ್ಯ ಬೆಳೆಗಳಿಗೆ ಹೊರಳಿಕೊಂಡ ರೈತರು ಆರಂಭದಲ್ಲಿ ಯಶಸ್ಸು ಕಂಡರಾದರೂ, ನಂತರದ ವರ್ಷಗಳಲ್ಲಿ ಹಲವು ಸಮಸ್ಯೆಗಳ ಸುಳಿಯಲ್ಲಿ ದಿಕ್ಕುಗೆಟ್ಟರು. ಅವರ ಹತಾಶೆಯ ಉರಿಯೇ 1981ರಲ್ಲಿ ರೂಪುಗೊಂಡ ನವಲಗುಂದ ನರಗುಂದದ ಬಂಡಾಯ.

ರೈತರ ಹಕ್ಕುಗಳ ಪ್ರತಿಪಾದನೆಗಾಗಿ ರೂಪುಗೊಂಡ `ಪ್ರಗತಿಪರ ಜನತಂತ್ರ ರಂಗ` ನರಗುಂದದಿಂದ ಬೆಂಗಳೂರಿನವರೆಗೆ ರೈತರ ಕಾಲ್ನಡಿಗೆ ಜಾಥಾ ಸಂಘಟಿಸಿತು. ರೈತರ ಕೆಲವು ನಿರ್ದಿಷ್ಟ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಈ ಜಾಥಾದ ಉದ್ದೇಶವಾಗಿತ್ತು. 1981ರ ಜನವರಿ 16ರಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನರಗುಂದದಲ್ಲಿ ಜಾಥಾಕ್ಕೆ ಹಸಿರುನಿಶಾನೆ ತೋರಿಸಿದರು.

ದಾರಿಯುದ್ದಕ್ಕೂ ಬೆಳೆಯುತ್ತಲೇ ಹೋದ ಜಾಥಾ, ಫೆ.5ರಂದು ಬೆಂಗಳೂರು ತಲುಪಿತು.
ರಾಜಧಾನಿಯಲ್ಲಿ ಎಲ್ಲಿ ನೋಡಿದರೂ ರೈತರು! ಕಬ್ಬನ್ ಉದ್ಯಾನದಲ್ಲಿ ಸೇರಿದ ಸಭೆಯಲ್ಲಿ ಸುಮಾರು 4 ಲಕ್ಷ ರೈತರು ಭಾಗವಹಿಸಿದ್ದರು.

ಬೆಂಗಳೂರಿನ ಜನತೆ, ಮುಖ್ಯವಾಗಿ ಕಾರ್ಮಿಕರು, ಚಳವಳಿ ನಿರತ ರೈತರಿಗೆ ಅಭೂತಪೂರ್ವ ಸ್ವಾಗತ ನೀಡಿದರು. ರೈತರಿಗೆ ಊಟದ ಪೊಟ್ಟಣಗಳನ್ನು ನೀಡಿದ ಕಾರ್ಮಿಕರು ಚಳವಳಿಗೆ ಬೆಂಬಲ ವ್ಯಕ್ತಪಡಿಸಿದರು.

ರೈತರ ಚಳವಳಿ ರಾಜ್ಯ ರಾಜಕಾರಣದ ಮೇಲೂ ಪರಿಣಾಮ ಬೀರಿತು. ಮುಂದಿನ ದಿನಗಳಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬರಲು ಈ ಚಳವಳಿ ಒಂದು ನೆಪವಾಗಿ ಪರಿಣಮಿಸಿತು. ಇದೆಲ್ಲದರ ನಂತರ ರೈತರ ಸಮಸ್ಯೆಗಳೂ ತೀರಿದವಾ? ಅದು ಯಕ್ಷಪ್ರಶ್ನೆ! ಈ ನೆಲದ ರೈತರ ಸಮಸ್ಯೆಗಳು ತೀರುವುದೆಂದರೆ ಅದೊಂದು ಆದರ್ಶ ಸಮಾಜದ ಸೃಷ್ಟಿಯೇ ಸರಿ.

`ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ` ಕೃತಿಯಲ್ಲಿ ಲೇಖಕರು ರೈತರ ಹಲವು ಸಮಸ್ಯೆಗಳನ್ನು ಚರ್ಚಿಸುತ್ತಾರೆ. ಅವು ಎಪ್ಪತ್ತು ಎಂಬತ್ತರ ದಶಕಕ್ಕಷ್ಟೇ ಮೀಸಲಾದ ಸಮಸ್ಯೆಗಳಲ್ಲ, ಇವತ್ತಿನ ರೈತರೂ ಅನುಭವಿಸುತ್ತಿರುವ ಸಮಸ್ಯೆಗಳು.

ಸೊಪ್ಪಿನ ಅವರ ಬರವಣಿಗೆಯಲ್ಲಿ ರೈತ ಕಾಳಜಿ ಎದ್ದುಕಾಣಿಸಿದರೂ, ಪುಸ್ತಕದುದ್ದಕ್ಕೂ ಅವರು ಸಮತೋಲನ ಬರವಣಿಗೆಯೊಂದನ್ನು ಸಾಧಿಸಿದ್ದಾರೆ. ಅಂಕಿಅಂಶಗಳ ನೆರವಿನಿಂದ ತಮ್ಮ ವಿಚಾರಗಳಿಗೆ ಪುಷ್ಟಿ ನೀಡಿದ್ದಾರೆ.

ಚಳವಳಿಯಲ್ಲಿ ಪಾಲ್ಗೊಂಡವರ ಸಂದರ್ಶನಗಳನ್ನು ಕಲೆಹಾಕಿದ್ದಾರೆ. ಮಲಪ್ರಭೆ ನೀರಾವರಿ ಯೋಜನೆ ಸಾಕಾರಗೊಂಡ ಸಂದರ್ಭದಲ್ಲಿ ಬದಲಾದ ಕೃಷಿ ಸ್ವರೂಪವನ್ನು ಅವರು ವಸ್ತುನಿಷ್ಠವಾಗಿ ಕಾಣಿಸಲು ಪ್ರಯತ್ನಿಸಿದ್ದಾರೆ.

ಚಳವಳಿಯ ನಂತರದ ದಿನಗಳಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತ ಸಂಘಟನೆ ಶಕ್ತಿಯುತವಾಗಿ ಬೆಳವಣಿಗೆ ಹೊಂದದ ವಿಪರ್ಯಾಸವನ್ನು ಲೇಖಕರು ದಾಖಲಿಸುತ್ತಾರೆ. ಆ ಕಾರಣದಿಂದಾಗಿಯೇ, ಈ ಪುಸ್ತಕವನ್ನು ಓದುವಾಗ ವ್ಯವಸ್ಥೆಯ ಬಗ್ಗೆ ರೊಚ್ಚು ಉಂಟಾಗುವಂತೆಯೇ ರೈತರ ಅಮಾಯಕತೆಯ ಬಗ್ಗೆ ಖೇದವೂ ಉಂಟಾಗುತ್ತದೆ.

ರೈತ ಚಳವಳಿಯೂ ಸೇರಿದಂತೆ ನಾಡಿನ ಎಲ್ಲ ಚಳವಳಿಗಳೂ ದಿಕ್ಕು ತಪ್ಪಿರುವ ಸಂದರ್ಭವಿದು. ಇಂಥ ಹೊತ್ತಿನಲ್ಲಿ ಪ್ರಕಟಗೊಂಡಿರುವ `ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ` ಕೃತಿ, ಚರಿತ್ರೆಯ ನೆನಪುಗಳೊಂದಿಗೆ ವರ್ತಮಾನದ ನಡಿಗೆಯ ಬಗ್ಗೆ ಒಂದು ತೋರುದೀಪದಂತೆಯೂ ಕಾಣಿಸುತ್ತದೆ.

ಇದನ್ನು ಪುಸ್ತಕದಲ್ಲಿ ಮುನ್ನುಡಿಯಲ್ಲಿ ಡಾ. ಎಂ. ಚಂದ್ರ ಪೂಜಾರಿ ಅವರು ಸರಿಯಾಗಿ ಗುರ್ತಿಸಿದ್ದಾರೆ: `ಪ್ರತಿಭಟನೆ, ಚಳವಳಿ, ಅನ್ಯಾಯದ ವಿರುದ್ಧದ ಹೋರಾಟ ಇತ್ಯಾದಿಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಯಾವುದೋ ಮೂಲೆಯಲ್ಲಿ ಹೇಳಹೆಸರಿಲ್ಲದ ರೈತರು ರಾಜ್ಯ ರಾಜಕೀಯದ ದಿಕ್ಕುದೆಶೆಯನ್ನು ಬದಲಾಯಿಸುವ ಚಳವಳಿಯನ್ನು ಸಂಘಟಿಸಿದ ಕಥನ ಇಂದಿನ ಅನಿವಾರ್ಯತೆ.

ಸೊಪ್ಪಿನ ಅವರ ನರಗುಂದ ನವಲಗುಂದ ರೈತ ಬಂಡಾಯದ ಕಥನ ರಾಜ್ಯ ಅಧಿಕಾರಶಾಹಿಯಿಂದ ಹಿಂಸೆ ಅನುಭವಿಸುವ ಬಹುತೇಕರಿಗೆ ಪ್ರತಿರೋಧಗಳನ್ನು ಕಟ್ಟಿಕೊಳ್ಳಲು ಪ್ರೇರಕ ಶಕ್ತಿಯಾಗಬಹುದು…`.

ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ
ಲೇ: ಬಿ.ಎಸ್.ಸೊಪ್ಪಿನ
ಪು: 108; ಬೆ: ರೂ. 70
ಪ್ರ: ಚಿಂತನ ಪುಸ್ತಕ, ನಂ. 405, 1ನೇ ಮುಖ್ಯರಸ್ತೆ, ಡಾಲರ್ಸ್‌ ಕಾಲೋನಿ, ಜೆ.ಪಿ.ನಗರ, ಬೆಂಗಳೂರು- 560 078.

Advertisements

ಧಾರವಾಡ : ಪುಸ್ತಕ ಬಿಡುಗಡೆ

ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ

1980 ರ ದಶಕದಲ್ಲಿ ರೈತ, ಕಾರ್ಮಿಕ, ದಲಿತ ಹಾಗೂ ಬಂಡಾಯ ಚಳುವಳಿಗೆ ಪ್ರೆರಣೆ ನೀಡಿದ, ಅಂದು ರಾಜಕೀಯ, ಆರ್ಥಿಕ, ಸಾಮಾಜಿಕ ಬದಲಾವಣೆಯಲ್ಲಿ ವಿಶಿಷ್ಠ ಪಾತ್ರವಹಿಸಿದ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಅವೈಜ್ಞಾನಿಕ ನೀರಿನ ಕರ ವಿರೋಧಿಸಿ ಆ ಪ್ರದೇಶದ ರೈತರು ನಡೆಸಿದ ನರಗುಂದ-ನವಲಗುಂದ ರೈತ ಬಂಡಾಯ ಕುರಿತು ಶಿಕ್ಷಕರಾಗಿದ್ದುಕೊಂಡು ಸ್ವತಃ ಈ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿ.ಎಸ್.ಸೊಪ್ಪಿನ ಬರೆದಿರುವ ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ ಪುಸ್ತಕ ಬಿಡುಗಡೆ ಹಾಗೂ ಕೃಷಿ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಉಪನ್ಯಾಸ-ಸಂವಾದ ಕಾರ್ಯಕ್ರಮ ಜನೇವರಿ-13 ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಚಿಂತನ ಪುಸ್ತಕ ಬೆಂಗಳೂರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ, ಧಾರವಾಡ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆಯಿತು.
ಜನ ಚಳುವಳಿಯಿಂದ ಮಾತ್ರ ಸಾಧ್ಯ:
ಖ್ಯಾತ ಅಂಕಣಕಾರ, ಪ್ರಜಾವಾಣಿ ಸಹ ಸಂಪಾದಕ ದಿನೇಶ್ ಅಮಿನಮಟ್ಟು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, 80ರ ದಶಕದ ಚಳುವಳಿಯ ಪ್ರಖರತೆ ಇಂದು ಕಾಣುತ್ತಿಲ್ಲ. ಕಾರಣಗಳನ್ನು ರೈತ ಸಂಘಟನೆಗಳು ವಿಮರ್ಶೆಮಾಡಿಕೊಳ್ಳಬೇಕು. ನಮ್ಮನ್ನಾಳುವವರು ಬರೀ ಗುಲಾಮರು. ಅವರ ಮಾಲೀಕರು ಬೇರೆಯಾಗಿದ್ದಾರೆ. ಉದಾರೀಕರಣ ನೀತಿಗಳ ಪರಿಣಾಮವಾಗಿ ಇಂದು ಅತ್ಯಂತ ಗಂಭೀರವಾದ ಸಮಸ್ಯೆಗಳು ಉಲ್ಬಣಗೊಂಡಿವೆ. ರೈತರಿಗೆ ತಮ್ಮ ಶತ್ರುಗಳನ್ನು ಗುರುತಿಕೊಳ್ಳಲಾಗುತ್ತಿಲ್ಲ. ಗುರುತಿಸಿಕೊಳ್ಳಲು ಸಾಧ್ಯವಾಗಬೇಕು. ಅದರೊಂದಿಗೆ ಬದ್ದತೆಯ, ಸಂಘಟಿತ ವಿಶಾಲವಾದ ಜನ ಚಳುವಳಿ ಮುಖಾಂತರ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಅನ್ನದಾತ ಸಾವಿನ ದವಡೆಗೆ:

ದುಡಿಯುವ ಕೈಗಳಿಗೆ ಭೂಮಿ ಇಲ್ಲ. ಉದ್ಯಿಮೆದಾರರಿಗೆ ಸಾವಿರಾರು ಎಕರೆ ಭೂಮಿ ನೀಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಖಂಡಿತಾ ಆಹಾರ ಭದ್ರತೆ ಕಾಡದಿರದು. ಕೃಷಿ ಬಿಕ್ಕಟ್ಟಿನಿಂದ ಈವರೆಗೆ 2.5 ಲಕ್ಷಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಕಾರದ ರೈತ ವಿರೋಧಿ ನೀತಿಗಳಿಂದಾಗಿ ಅನ್ನದಾತ ಸಾವಿನ ದವಡೆಗೆ ತಳ್ಳಲ್ಪಡುತ್ತಿದ್ದಾನೆ.

ಕೃಷಿ ಕ್ಷೇತ್ರದಲ್ಲಿ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹಾಗೂ ಇತ್ತೀಚಿಗೆ ಕಾನೂನುಗಳಿಗೆ ತಿದ್ದುಪಡೆ ಮಾಡಲು ಹೊರಟಿರುವದು ರೈತರನ್ನು, ಕಾರ್ಮಿಕರನ್ನು, ಸಣ್ಣ ವರ್ತಕರನ್ನು ಬೀದಿಗೆ ತಳ್ಳುವ ಬಂಡವಾಳಶಾಹಿ ತಿಮಿಂಗಲಗಳ ಹುನ್ನಾರವಾಗಿದೆ. ಈ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುವಲ್ಲಿ ಕಾಂಗ್ರೆಸ್, ಬಿಜೆಪಿ ಪೈಪೋಟಿ ನಡೆಸಿವೆ. ಹೀಗಾಗಿ ಈ ನೀತಿಗಳನ್ನು ಹಿಮ್ಮೆಟ್ಟಿಸಲು ಮುಂದಾಗಬೇಕಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬೈಯ್ಯಾರೆಡ್ಡಿ  ಕೃಷಿ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಉಪನ್ಯಾಸ ನೀಡುತ್ತಾ ಮಾತನಾಡಿದರು. ನಂತರ ಸಂವಾದ ನಡೆಯಿತು.

ಪುಸ್ತಕ ಪರಿಚಯವನ್ನು ಸಾಹಿತಿ ಸತೀಶ ಕುಲಕರ್ಣಿ ಮಾಡಿದರು. ಅಂದಿನ ರೈತ ಚಳುವಳಿಯ ಮುಖಂಡತ್ವ ವಹಿಸಿದ್ದ ವಿ.ಎನ್.ಹಳಕಟ್ಟಿ, ಎಸ್.ಎಫ್.ಕಪ್ಪಣ್ಣವರ, ಶಿವದೇವಗೌಡ ಪಾಟೀಲ ಹಾಗೂ ನಿತ್ಯಾನಂದಸ್ವಾಮಿ ಉಪಸ್ಥಿತರಿದ್ದರು. ಹಿರಿಯ ರೈತ ಮುಖಂಡ ವಿ.ಪಿ.ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್.ಎಚ್.ಆಯಿ ಸ್ವಾಗತಿಸಿದರು, ಮಹೇಶ ಪತ್ತಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ|| ಲಿಂಗರಾಜ ಅಂಗಡಿ ವಂದಿಸಿದರು. ಸವದತ್ತಿ, ಅಳಗವಾಡಿ, ರಾಮದುರ್ಗ, ಬೆಳವಣಕಿ ನರಗುಂದ, ನವಲಗುಂದ ರೈತರು, ಕಾರ್ಮಿಕ, ವಿದ್ಯಾರ್ಥಿ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

-ಮಹೇಶ ಪತ್ತಾರ