17. ಅಳುವ ಯೋಗಿಯ ನೋಡಿಲ್ಲಿ


ಕಳೆದ 10 ವರ್ಷಗಳಿಂದ ಭಾರತದಾದ್ಯಂತ ಸುಮಾರು 2 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಪ್ರಮುಖ ವಿಷಯವು ಪ್ರಮುಖ ಮಾಧ್ಯಮಗಳಲ್ಲಿ ಬಿಂಬಿತವಾದದ್ದು ಅತ್ಯಂತ ಕಡಿಮೆ.

ಹಿಂದೂನ ಗ್ರಾಮೀಣ ವರದಿಗಾರ ಪಿ. ಸಾಯಿನಾಥ್ ಅವರ ರೈತರ ಬವಣೆಗಳ ಬಗೆಗಿನ ನಮ್ಮ ಪ್ರಕಾಶನ ಚಿಂತನ ಪುಸ್ತಕದ ಪ್ರಕಟಣೆ `ಬಿತ್ತಿದ್ದೀರಿ ಅದಕ್ಕೆ ಅಳುತ್ತೀರಿ’ ಶೀರ್ಷಿಕೆಯ ಪುಸ್ತಕದಲ್ಲಿ ಓದಿದ್ದೀರಿ.

ಈಗ ಗ್ರಾಮೀಣ ಭಾರತದ `ದಿ ಹಿಂದೂ’ ವರದಿಗಾರ ಪಿ.ಸಾಯಿನಾಥ್ ಅವರು ಕಂಡ ಭಾರತದ ಕೃಷಿ ಬಿಕ್ಕಟ್ಟು ಹಾಗೂ ಬೆಳೆಯುತ್ತಿರುವ ಅಸಮಾನತೆಯ ಕುರಿತಾದ ಚಲನಚಿತ್ರ ಪ್ರದರ್ಶನಕ್ಕೆ ತಯಾರಾಗಿದೆ. ಈ ಚಿತ್ರದ ಮೂಲಕ ಪಿ. ಸಾಯಿನಾಥ್ ಅವರು ನಾವು ನೋಡಲು ಇಚ್ಛಿಸದ ಭಾರತವನ್ನು ನಮ್ಮ ಮುಂದಿಟ್ಟಿದ್ದಾರೆ. ಆ ಮೂಲಕ ಈಗಿನ ಜಗತ್ತಿನ ನೀರೋನ ಅತಿಥಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಿದ್ದಾರೆ.

Advertisements

ಪಾಲಗುಮ್ಮಿ ಸಾಯನಾಥ್ (ಪಿ. ಸಾಯಿನಾಥ್), ೨೦೦೭ರ ಮ್ಯಾಗೆಸ್ಸೆ ಪ್ರಶಸ್ತಿಯನ್ನು ಪತ್ರಿಕೋದ್ಯಮ, ಬರಹ ಮತ್ತು ಸಂವಹನ ಕಲೆಯಲ್ಲಿನ ತಮ್ಮ ಅನನ್ಯ ಸಾಧನೆಗಾಗಿ ಪಡೆದುಕೊಂಡಿದ್ದಾರೆ. ಇಂದಿನ ಜಾಗತೀಕರಣ ಪೀಡಿತ ಮಾಧ್ಯಮಕ್ಷೇತ್ರದಲ್ಲೂ ಸಾಯಿನಾಥ್ ಬೇರೆಯದೇ ಸ್ಥರದಲ್ಲಿ ನಿಲ್ಲುತ್ತಾರೆ. ಕಾರಣ ಜಾಗತೀಕರಣದ ನಂತರ ಗ್ರಾಮೀಣ ಭಾರತದ ಜನರು ಮತ್ತು ರೈತರ ಬವಣೆಗಳ ಕುರತಿಉ ಅವರಿಗಿರುವ ಕಾಳಜಿ. ಭಾರತದ ಬಡತನ, ಸಾಮಾಜಿಕ ವೈರುಧ್ಯ ಇನ್ನಿತರ ಹಲವಾರು ಸಮಸ್ತಯೆಗಳ ಕುರಿತು ತಮ್ಮ ಬರಹಗಳ ಮೂಲಕ ಪ್ರಚುರಪಡಿಸುತ್ತಾ ಶೋಷಿತ ಜನರ ದನಿಯಾಗಿದ್ದಾರೆ.ಪ್ರತಿಸ್ಠಿತ `ದಿ ಹಿಂದೂ’ ಪತ್ರಿಕೆಯಲ್ಲಿ ಗ್ರಾಮೀಣ ವಿಷಯಗಳ ವಿಭಾಗದಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಸಾಯಿನಾಥ್, ವರ್ಷದ 365 ದಿನಗಳಲ್ಲಿ ಸುಮಾರು 270 ರಿಂದ 300 ದಿನಗಳನ್ನು ಗ್ರಾಮೀಣ ಪ್ರದೇಶಗಳಲ್ಲೇ ಕಳೆದಿದ್ದಾರೆ. ಇದು ಗ್ರಾಮೀಣ ಭಾರತದ ಕುರಿತು ಅವರಿಗಿರುವ ಕಾಳಜಿಯನ್ನು ತೋರಿಸಿಕೊಡುತ್ತದೆ. ನೋಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರು ಸಾಯಿನಾಥ್ ಅವರನ್ನು `ಪ್ರಪಂಚದ ಅತ್ಯುನ್ನತ ಗ್ರಾಮೀಣಪರ ಕಾಳಜಿಯುಳ್ಳ ಪತ್ರಕರ್ತ, ಬರಹಗಾರ’ ಎಂದು ಬಣ್ಣಿಸಿದ್ದಾರೆ.

ಸಾಯಿನಾಥ್ ಮೂಲತಹ ಆಂಧ್ರಪ್ರದೇಶದವರು. ಭಾರತದ ಮಾಜಿ ರಾಷ್ಟ್ರಪತಿ ವಿ.ವಿ.ಗಿರಿ ಯವರ ಮೊಮ್ಮಗ. ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. (ಪ್ರಸ್ತುತ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ). ಇತಿಹಾಸ ವಿಷಯದಲ್ಲಿ ಪದವಿ ಪಡೆದ ಸಾಯಿನಾಥ್ ಅವರು 1980ರಲ್ಲಿ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ ಸಂಸ್ಥೆಯ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿರುತ್ತಾರೆ. ಮುಂದೆ ಅದೇ ವರ್ಷದಲ್ಲಿ ಶ್ರೇಷ್ಠ ವೈಯಕ್ತಿಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಹೀಗೆ ಹತ್ತು ಹಲವು ಸುದ್ದಿ ಸಂಸ್ಥೆ, ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಾ, ಭಾರತದ ಉದ್ದಗಲಕ್ಕೂ ಸಂಚರಿಸುತ್ತಾರೆ. 1991ರಲ್ಲಿ ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಹೇರಿದ `ಐ.ಎಂ.ಎಫ್.’ ಬೆಂಬಲಿತ ವಾಣಿಜ್ಯ ನೀತಿಗಳು ಭಾರತೀಯ ಸಮಾಜದಲ್ಲಿ ಹಲವಾರು ರೀತಿಯ ವೈರುಧ್ಯಗಳನ್ನು ಹುಟ್ಟು ಹಾಕಿತು. ಆ ಸಮಯದಲ್ಲಿ ಭಾರತೀಯ ಮಾಧ್ಯಮಗಳು, ಪತ್ರಿಕೆಗಳೂ ಕೂಡ ಜಾಗತಿಕರಣ ರೋಗಪೀಡಿತರಾಗಿ ಕೇವಲ ಉಳ್ಳವರ, ಸಮಾಜದ ಉನ್ನತ ಸ್ಥರದ ಜನರ ಮುಖವಾಣಿಯಂತೆ ವರ್ತಿಸಲಾರಂಭಿಸಿದವು. ಆದರೆ ಈ ಸಂದರ್ಭದಲ್ಲಿ ಸಾಯಿನಾಥ್ ಶೋಷಿತರ, ದನಿಯಿಲ್ಲದವರ, ಮತ್ತು ಕಡಗಣಿಸಲ್ಪಟ್ಟವರ ಪರವಾಗಿ ದನಿಯೆತ್ತುವ ಕಾಯಕಕ್ಕೆ ತಮ್ಮನ್ನು ತೊಡಗಿಸಿಕೊಂಡರು.

ಈ ರೀತಿ ಗ್ರಾಮೀಣಪರ ಹೋರಾಟಗಳಲ್ಲಿ ತೊಡಗಿಸಿಕೊಂಡ ಸಾಯಿನಾಥ್ ಭಾರತದ ಉದ್ದಗಲಕ್ಕೂ ಸುಮಾರು 1,00,000 ಕಿ.ಮೀ. ದೂರದಷ್ಟು ಸಂಚರಿಸಿದ್ದರು. ಇದರಲ್ಲಿ ಸುಮಾರು 5,000 ಕಿ.ಮೀ. ನಷ್ಟು ದೂರವನ್ನು ಕಾಲ್ನಡಿಗೆಯಲ್ಲೆ ಕ್ರಮಿಸಿದ್ದರು.

ಈ ಸಮಯದಲ್ಲಿ ಭಾರತದ ಹಲವಾರು ಬರಪೀಡಿತ ಪ್ರದೇಶಗಳಲ್ಲಿ ಜನರು ಅನುಭವಿಸುತ್ತಿರುವ ಬವಣೆ ಮತ್ತು ಆ ಬವಣೆಯನ್ನು ನೀಗಿಸುವಲ್ಲಿ ಸರ್ಕಾರಗಳ ವೈಫಲ್ಯ, ಪರಿಹಾರ ಕಾರ್ಯಗಳಲ್ಲಿನ ಲೋಪ ಅಧಿಕಾರಿಗಳ ಭ್ರಷ್ಟಾಚಾರ, ಬರ ಪರಿಹಾರವನ್ನೆ ತಮ್ಮ ಆದಾಯದ ಮೂಲವನ್ನಾಗಿಸಿಕೊಂಡಿರುವ ಸಮಾಜದ ಕೆಲವು ವರ್ಗದ ಜನ ಇವೆಲ್ಲದರ ಕುರಿತು ಸೂಕ್ಷ್ಮವಾಗಿ ಗುರುತಿಸಿಕೊಂಡ ಸತ್ಯವನ್ನು ದೇಶದ ಹಲವಾರ ಪತ್ರಿಕೆಗಳಲ್ಲಿ ಲೇಖನಗಳ ಮೂಲಕ ಜನರಿಗೆ ತಲುಪಿಸಿದ್ದಾರೆ. ಈ ಕುರಿತು ರಚಿತವಾದ ಇವರ “Everybody loves a Good Draught : Stories from Indias Poorest District” ಎಂಬ ಕೃತಿ ಇಂದಿಗೂ ಅತ್ಯಂತ ಜನಪ್ರಿಯ ಎನ್ನಿಸಿಕೊಂಡಿದೆ. ಈ ಕೃತಿಯನ್ನ ಸರ್ಕಾರೇತರ ಸೇವಾ ಸಂಸ್ಥೆಗಳ ಸಲಹಾ ಕೈಪಿಡಿ ಎಂದು ಪರಿಗಣಿಸಲ್ಪಟ್ಟಿದೆ. ಸಾಯಿನಾಥ್ ಕುರಿತು ಕೆನಡಾದ `ಜೋಯಿ ಮೌಲಿನ್ಸ್’ ಎಂಬ ಕಿರುಚಿತ್ರ ನಿರ್ಮಾಪಕ ನಿರ್ಮಿಸಿದ ಸಾಕ್ಷ್ಯಚಿತ್ರ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಒಬ್ಬ ಪತ್ರಕರ್ತನಾಗಿ ಸಾಯಿನಾಥ್ ಪತ್ರಿಕೋದ್ಯಮಕ್ಕಿರುವ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ. ಹಲವಾರು ರಾಜ್ಯಗಳ ರಾಜಕಾರಣಿಗಳು, ಅಧಿಕಾರಿಗಳು ಸಾಯಿನಾಥ್ ರವರ ವರದಿಗಳಿಂದ ಪ್ರೇರಿತರಾಗಿ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳತ್ತ ಗಮನಹರಿಸಿದ್ದಾರೆ. ಭಾರತದಾದ್ಯಂತ ವರದಿಯಾಗುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ರಾಷ್ಟ್ರವ್ಯಾಪಿ ಪ್ರಚಾರ ದೊರಕುವಂತೆ ಮಾಡಿ, ಸರ್ಕಾರಗಳು ಆ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಸಾಯಿನಾಥ್ ಪಾತ್ರ ಅನನ್ಯ. ಇದಕ್ಕೂ ಮೊದಲು ರೈತರ ಆತ್ಮಹತ್ಯೆ ಪ್ರಕರಣಗಳನ್ನು ಕೌಟುಂಬಿಕ ಸಮಸ್ಯೆ, ವ್ಯವಹಾರಿಕ ಸಮಸ್ಯೆಯಿಂದಾದ ಸಾವು ಎಂದು ಮುಚ್ಚಿ ಹಾಕಲಾಗುತ್ತಿತ್ತು.

ಇದೇ ಸಮಯದಲ್ಲಿ ಸಾಯಿನಾಥ್ ರವರು ತೆಗೆದ ಛಾಯಾಚಿತ್ರಗಳು ಹಲವಾರು ಪ್ರದರ್ಶನಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ಸದ್ಯ ಸಾಯಿನಾಥ್ ರವರು ಭಾರತದ ಕೆಳವರ್ಗಗಳ ಶೋಷಿತ ಜನರ ಕುರಿತು ಕೃತಿಯೊಂದನ್ನು ರಚಿಸುತ್ತಿದ್ದು, ಅದಕ್ಕಾಗಿ ದೇಶದ ಸುಮಾರು 15ಕ್ಕೂ ಹೆಚ್ಚು ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಈ ಕೆಲಸಕ್ಕೆ ಸಾಯಿನಾಥ್ ಯಾವುದೇ ಖಾಸಗಿ ಸಂಸ್ಥೆಗಳ ಅನುದಾನಕ್ಕಾಗಿ ಅವಲಂಬಿತರಾಗದೆ ತಮ್ಮ ಸ್ವಂತ ಉಳಿತಾಯದ ಮತ್ತು ಸಂಬಳದ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಇದು ಇವರನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿಸಿದೆ.

ಸಾಯಿನಾಥ್ ರವರ ಹೇಳಿಕೆ – ಅನಿಸಿಕೆಗಳು: WTO ಮತ್ತು GATT ಮಾದರಿಯ ಒಪ್ಪಂದಗಳ ಕುರಿತು : ಒಪ್ಪಂದಗಳು ಬಂಡವಾಳಶಾಹಿಗಳಿಂದ ಹಿಂದುಳಿದ ದೇಶಗಳನ್ನು ಶೋಷಿಸುವ ಸಲುವಾಗಿಯೇ ತಯಾರು ಮಾಡಿದಂತಹವುಗಳು. ಇವುಗಳು ಯಾವುದೇ ಚುನಾಯಿತ ಜನ ಪ್ರತಿನಿಧಿಗಳಿಂದ ರಚಿತವಾದವುಗಳಲ್ಲ.

ಭಾರತದಲ್ಲಿ ಕಾನೂನು ಸುವ್ಯವಸ್ಥೆಯ ಕುರಿತು : ಸುಪ್ರೀಂ ಕೋರ್ಟಿನ ಎಲ್ಲಾ ನ್ಯಾಯಾಧೀಶರಿಗೆ ಕೇವಲ ಒಬ್ಬ ಪೋಲಿಸ್ ಪೇದೆಗಿರುವಷ್ಟು ಸಹ ಅಧಿಕಾರವಿಲ್ಲ. ಒಬ್ಬ ಪೋಲಿಸ್ ಪೇದೆ ತನ್ನ ವ್ಯಾಪ್ತಿಯಲ್ಲಿ ತನ್ನದೇ ಕಾನೂನು ಮಾಡಬಲ್ಲ ಮತ್ತು ಕಾನೂನು ಮುರಿಯಬಲ್ಲ ಆದರೆ ಒಬ್ಬ ನ್ಯಾಯಾಧೀಶ ಒಂದು ಕಾನೂನು ದೋಷಪೂರಿತ ಎಂದು ತಿಳಿದಿದ್ದರೂ ಬದಲಿಸಲಾರ.

ಸಾಯಿನಾಥ್ ರವರಿಗೆ ಸಂದ ಗೌರವಗಳು: ಇವರಿಗೆ 2007ರ ಸಾಲಿನ ಮ್ಯಾಗೆಸ್ಸೆ ಮತ್ತು ಸುಮಾರು 30 ರಾಷ್ಟ್ರೀಯ, ಅಂತರ‍್ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಕೃಪೆ – ಟೀಚರ‍್ ಶೈಕ್ಷಣಿಕ ಮಾಸಪತ್ರಿಕೆ.

aluva yogiya nodilli