16. ಒಡಲ ಬೆಂಕಿ – ಕನ್ನಡ ಕವಿಗಳು ಕಂಡಂತೆ ಹಸಿವು


gss namana

ಎಲ್ಲರೂ ಹೇಳುತ್ತಿದ್ದಾರೆ ಇಂದು ಜಿ.ಎಸ್.ಎಸ್.ಗೆ ಅಂತಿಮ ನಮನ ಸಲ್ಲಿಸೋಣ! ಇಲ್ಲ, ನಾನು ಇಂದು ಅವರಿಗೆ ಅಂತಿಮ ನಮನ ಸಲ್ಲಿಸುವುದಿಲ್ಲ!

ಅವರು ನನ್ನ ಪಾಲಿಗೆ  ದಿನ ನಿತ್ಯ ನಮನ ಸಲ್ಲಿಬೇಕಾಗಿರುವವರ ಪಟ್ಟಿಯಲ್ಲಿರುವವರು.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮಾಡಿದ ವ್ಯಕ್ತಿತ್ವದ ಒಂದು ಮುಖ ನಮ್ಮ ಪ್ರಕಾಶನಕ್ಕೆ ಉತ್ತರವಾಗಿ ಬರೆದ ಪತ್ರದಲ್ಲಿ ಕಂಡರೆ ಅವರ ನೂರಾರು ಮುಖಗಳು ಅವರ ಕವನಗಳಲ್ಲಿ ಹೊರಹೊಮ್ಮಿವೆ.

ನನ್ನ ಮನಸ್ಸು ಮಿಡಿಯುವಂತಹ ವಿಷಯಗಳಾದ ತನ್ನ ಒಬ್ಬ ಶಿಷ್ಯನಿಗೆ ಪ್ರತಿದ್ವಂದಿಗಳಿರಬಾರದು ಅನ್ನೋ ಒಂದೇ ಕಾರಣಕ್ಕಾಗಿ ತನ್ನ ಪರಿಸರದ ರಕ್ಷಣೆಗಾಗಿ ಕಲಿತ ತಮ್ಮ ಇನ್ನೊಬ್ಬ ಶಿಷ್ಯ ಏಕಲವ್ಯನ ವಿದ್ಯೆ, ಜೀವನದ ಗುರಿ, ಅವನ ಸರ್ವಸ್ವವನ್ನೂ ಹೀರಿದ ಗುರುದ್ರೋಣರ ಪರಂಪರೆ ಇಂದಿಗೂ ಇದೆ ಅನ್ನುವ ‘ಚಕ್ರಗತಿ’, ಇತ್ತೀಚೆಗಷ್ಟೇ ನಿರ್ಭಯ ಎಂದು ಭಾರತದ ಜನತೆಯಿಂದ ಕರೆಯಿಸಿಕೊಂಡ ಹೆಣ್ಣಿನ ಅಸಹಾಯಕತೆಯ ಕಾರಣವನ್ನು ಹೇಳುತ್ತಾ ಆ ಕಾರಣಗಳನ್ನು ಇಲ್ಲದಂತಾಗಿಸು ಎನ್ನುವ ದಿಟ್ಟ ನಿಲುವಿನ ಕವನ ‘ದಾಟಿ ಬಾ ನಿರ್ಭಯ ನಿಲುವಿಗೆ’, ಬರಿ ಮಾತುಗಳ ಕಡ್ಡಿ ಗೀಚುವೆಯಲ್ಲ ನಿನಗೆ ನಾಚಿಕೆಯಿಲ್ಲ? ಎಂದು ಕೇಳುವ ಕವನ ‘ಸಾಕು ನಿಲ್ಲಿಸು ನಿನ್ನ ಸಾಮಗಾನ’,  ಒಟ್ಟಿನಲ್ಲಿ ನಾವು ಈಗ ಸಮಾಜದಲ್ಲಿ ಕಾಣುವ ಶೋಷಣೆಯ ವಿವಿಧ ಮಗ್ಗುಲುಗಳಲ್ಲಿ ಪ್ರತಿಯೊಂದನ್ನೂ ಕುರಿತು ಕವನ ಬರೆದಿರುವ ಪ್ರೊ.ಜಿ.ಎಸ್.ಶಿವರುದ್ರಪ್ಪ ಎಲ್ಲರಂತಲ್ಲ ಈ ಕವಿ ನಮ್ಮ ರಾಷ್ಟ್ರಕವಿ ಎಂದು ಹೊಗಳುವಂತೆ ಮಾಡುತ್ತಿದೆ.

ಚಕ್ರಗತಿ

ಹೆಬ್ಬೆರಳಿಲ್ಲದ ಹಸ್ತವನ್ನು ನೋಡುತ್ತಾ
ನಿಶ್ಯಬ್ದವಾಗಿ ಕೂತಿದ್ದಾನೆ ಏಕಲವ್ಯ
ಧನ್ಯತೆಯೊ ವಿಷಾದವೊ ಬಲಿದಾನವೊ
ಅದೆಲ್ಲ ಕವಿ ಕಲ್ಪನೆಯ ಸಂಭಾವ್ಯ

ಹರಿಯುತ್ತಲೇ ಇದೆ ಬೆಟ್ಟದ ಹೊಳೆ
ಘಟ್ಟವನ್ನಿಳಿದು ದೂರದ ಕಡಲಿಗೆ,
ವಸಂತದಲ್ಲಿ ಮರ ಚಿಗುರಿ ಸಮೃದ್ಧವಾಗಿ
ಮತ್ತೆ ಶಿಶಿರದಲ್ಲಿ ಬರೀ ತರಗೆಲೆ.

ಎಲೆಯುದುರಿ ಬಿದ್ದರೂ, ಮತ್ತೆ ಕೊಂಬೆಗೆ
ಚಿಗುರು ಮೂಡುವುದಂತೂ ನಿಶ್ಚಯ,
ಬೆರಳಿನ ವಿಚಾರ ಹಾಗಲ್ಲ; ಶೋಷಣೆಗೆ
ಎಷ್ಟು ಮುಖ? ಅದು ಚರಿತ್ರೆಯ ವಿಷಯ.

ಮತ್ತೆ ಮತ್ತೆ ಬರುತ್ತಾರೆ ಆಚಾರ್ಯ ದ್ರೋಣರು
ನಿಶ್ಶಬ್ದದಲ್ಲಿ ಕೂತ ಏಕಲವ್ಯನ ಬಳಿಗೆ,
ಆಮೇಲೇನಾಗುತ್ತದೆ? ನಿನಗೆ ಗೊತ್ತೇ ಇದೆ
ಈ ಚರಿತ್ರೆಯ ಚಕ್ರಗತಿಯೊಳಗೆ.

 ದಾಟಿ ಬಾ ನಿರ್ಭಯದ ನಿಲುವಿಗೆ

ದಾರಿಯುದ್ದಕ್ಕೂ ವನವಾಸ, ಅಗ್ನಿಪರೀಕ್ಷೆ,
ಹೇಗೆ ದಾಟುತ್ತೀಯೆ ನನ್ನ ಮಗಳೆ?
‘ನಸ್ತ್ರೀ ಸ್ವಾತಂತ್ರ‍್ಯಮರ್ಹತಿ’ – ಎಂದು ವಟಗುಟ್ಟು-
ತ್ತಲೇ ಇದೆ ಮನುಧರ್ಮಶಾಸ್ತ್ರದ ರಗಳೆ.

ಅಗ್ನಿ ಪರೀಕ್ಷೆ ಸೀತೆಗೆ ಮಾತ್ರ; ಶ್ರೀರಾಮ-
ನಾದರೋ ಅಕಳಂಕ ಪ್ರಶ್ನಾತೀತ!
ಚಂದ್ರಮತಿ ಹರಾಜಿಗೆ, ದ್ರೌಪದಿ ಜೂಜಿಗೆ
ವಸ್ತುವಾಗುಳಿದದ್ದು ಎಂಥ ವಿಪರೀತ!

ದ್ರೌಪದಿಯಂತೆ ಎಲ್ಲರಿಗು ಅಕ್ಷಯ ವಸ್ತ್ರ
ಲಭಿಸುವುದೆಂಬ ನಂಬಿಕೆಯಿಲ್ಲ;
ಇಂದಿಗೂ ಹೊಸ್ತಿಲ ಹೊರಗೆ ಲಕ್ಷಣರೇಖೆ,
ದಾಟಿ ನಡೆದೇನೆಂಬ ಧೈರ್ಯವಿಲ್ಲ.

ಎಲ್ಲ ಧರ್ಮಗಳ ನಿಲುವು ಇಷ್ಟೆ; ಈಡನ್ನಿನ ತೋಟ-
ದಲ್ಲಿ ತಿನ್ನಬಾರದ ಹಣ್ಣ ತಿನ್ನಿಸಿದವಳು
ಈವ್; ಗಂಡಸಿನ ಪತನಕ್ಕೆ ಕಾರಣ ಹೆಣ್ಣು;
ಮಾಯೆ; ಋಷಿಗಳ ತಪಸ್ಸು ಕೆಡಿಸಿದವಳು.

ಬುದ್ಧ ಹೇಳಿದ್ದೇನು ಆನಂದನಿಗೆ? ಸದ್ಯಕ್ಕೆ
ಹೆಣ್ಣು ಸೇರುವುದು ಬೇಡ ನಮ್ಮ ಸಂಘಕ್ಕೆ;
ಅರ್ಹಂತ ಮತದಂತೆ ಗಂಡಾಗಿ ಹುಟ್ಟಿದರೆ
ಮಾತ್ರ ಅರ್ಹತೆಯುಂಟು ಮೋಕ್ಷಕ್ಕೆ!

ಹೇಳುತ್ತದೆ ಖುರಾನ್; ಹೆಣ್ಣೊಂದು ಬರಿಯ ಹೊಲ,
ನಿನ್ನ ಸ್ವತ್ತು; ಮೂರು ಸಲ ತಲಾಖ್ ಎಂದರೆ ಸಾಕು.
ಸ್ತ್ರೀ ಶೂದ್ರಾದಿಗಳಿಗೆಲ್ಲಿಯದೋ ವೇದಾಧಿಕಾರ?
ಇಂಥ ದಯವಿರದ ಧರ್ಮಗಳ ಆಚೆ ನೂಕು.

ಹೊಸ ತಿಳಿವಿನೆಚ್ಚರದಲ್ಲಿ ಲೋಕ ಸಾಗಿದೆ
ಮಗಳೆ. ದಾಟಿ ಬಾ ಮಹದೇವಿಯಕ್ಕನ ಹಾಗೆ
ನಿರ್ಭಯದ ನಿಲುವಿದೆ. ಆತ್ಮ ಗೌರವದ ಗಿರಿಶಿಖರ-
ದೆತ್ತರದಲ್ಲಿ ಅರಳಿಕೊಳ್ಳಲಿ ಬದುಕು ಹೊಸ ಬೆಳಕಿಗೆ.

Advertisements

G.S.S letterನಮ್ಮ ಪ್ರಕಾಶನದಿಂದ ವಿಷಯಾಧಾರಿತ ಕವನ ಸಂಗ್ರಹ ಪ್ರಕಟಿಸಬೇಕೆಂದು ಕವನಗಳನ್ನು ಆಯ್ಕೆ ಮಾಡಿದ ನಂತರದಲ್ಲಿ ಮಾಡಬೇಕಾದ ಕೆಲಸ ಕವಿಗಳ ಅನುಮತಿ ಕೇಳುವುದು. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ‘ಸಾಕು ನಿಲ್ಲಿಸು ನಿನ್ನ ಸಾಮಗಾನ’ ಕವನವನ್ನು ಸಂಕಲಕ್ಕೆ ಆರಿಸಿಕೊಂಡು ಅನುಮತಿಗಾಗಿ ಅವರಿಗೆ ಪತ್ರ ಬರೆಯುವಾಗ ನನ್ನಲ್ಲಿ ಏನೋ ರೋಮಾಂಚನ. ನನ್ನ ಇಷ್ಟದ ಕವನ ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ವನ್ನು ಬರೆದ ಕವಿಗೆ ಪತ್ರ ಬರೆಯುತ್ತಿದ್ದೇನೆ ಅನ್ನುವುದರಲ್ಲೇ ಖುಷಿಗೊಳ್ಳುತ್ತ, ಮರುಗಳಿಗೆಯಲ್ಲಿ ‘ಅಯ್ಯೋ ನನ್ನ ಪತ್ರ ಅವರು ಓದಲು ಹೇಗೆ ಸಾಧ್ಯ. ಅವರ ಸಹಾಯಕರು ಓದಿ ಉತ್ತರ ಬರೆಯುತ್ತಾರೆ ಅಷ್ಟೇ. ಅದಕ್ಕೆ ಯಾಕೆ ಇಷ್ಟು ಸಂಭ್ರಮ’ ಎಂದು ಕೊಳ್ಳುತ್ತಾ ನನಗೆ ನಾನೇ ನನ್ನ ಹುಚ್ಚು ಯೋಚನೆಯ ಬಗ್ಗೆ ನಗುತ್ತ ಪತ್ರ ಬರೆದು ಅಂಚೆಗೆ ಹಾಕಿದ್ದೆ.

ಆದರೆ ‘ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ತಮ್ಮ 83 ರ ವಯಸ್ಸಿನಲ್ಲಿ ತಮ್ಮ ಹಸ್ತಾಕ್ಷರದಿಂದ ಬರೆದ ಉತ್ತರ ಕೈಸೇರಿದಾಗ ಆದ ಅಚ್ಚರಿ ಅಷ್ಟಿಷ್ಟಲ್ಲ. ಪತ್ರವನ್ನು ಮತ್ತೆ ಮತ್ತೆ ನೋಡಿ ‘ಹೌದು ಇದು ಕವಿಗಳದ್ದೇ ಹಸ್ತಾಕ್ಷರ’. ಖುಷಿಯಲ್ಲಿ ಎಲ್ಲರಿಗೂ ತೋರಿಸಿ ಸಂಭ್ರಮ ಪಟ್ಟಿದ್ದೇ ಪಟ್ಟಿದ್ದು.

ಪತ್ರದ ಹೂರಣವೂ ಅಷ್ಟೆ. ಎಷ್ಟು ಸರಳ, ಎಷ್ಟು ನೇರ.

೮೭ ವರ್ಷದ ಸಾರ್ಥಕ ಬಾಳನ್ನು ಬಾಳಿ ಅಳಿದ ಎದೆ ತುಂಬಿ ಹಾಡಿದ ಕವಿ ಜಿ.ಎಸ್.ಶಿವರುದ್ರಪ್ಪ ಅವರಿಗೆ ಚಿಂತನ ಪುಸ್ತಕ ಬಳಗದ ಶ್ರದ್ಧಾಂಜಲಿ.

 

ಕವಿಗಳು ಕಂಡಂತೆ ಹಸಿವು

‘ಹಸಿವು’-ಜಗತ್ತನ್ನು ಕಾಡುತ್ತಿರುವುದು ಮನವರಿಕೆಯಾದರೂ ಮನುಷ್ಯ ಅದರತ್ತ ಅಷ್ಟು ಗಮನ ಕೊಡದೆ ಆಸೆಯ ಹಸಿವು ನೀಗಿಸಿಕೊಳ್ಳಲು ಮುಂದಾಗಿ ಮತ್ತಷ್ಟು ಹಸಿವಿನ ಕೂಪದಲ್ಲಿ ಆಳಕ್ಕೆ ಕುಸಿಯುತ್ತಿದ್ದಾನೆ. ಇಂತಹ ಹಸಿವಿನ ಬಗ್ಗೆ ಎಷ್ಟೋ ಬರಹಗಳು ಈಗಾಗಲೇ ಬಂದು ಹಳತಾಗಿವೆ. ಹಾಳೂ ಆಗಿವೆ. ಆದರೂ ಮನುಷ್ಯ ಅವುಗಳಿಂದ ಕಲಿತದ್ದು ಮಾತ್ರ ಕಡಿಮೆ. ಆದರೂ ಹಸಿವಿನ ಸ್ಥಿತಿ ಕಂಡು ಮಿಡಿಯುವವರು ಬರೆಯುತ್ತಲೇ ಇದ್ದಾರೆ. ಅದು ಕವಿತೆಯಾದರೂ ಸರಿಯೇ, ಲೇಖನವಾದರೂ ಸರಿಯೇ. ಹಸಿವಿನ ಸ್ಥಿತಿಯ ವಾಸ್ತವತೆಯನ್ನು ತೆರೆದಿಡುತ್ತವೆ. ಹಾಗೆ ತೆರೆದಿಡುವ ಹಲವು ಕವಿತೆಗಳನ್ನು ‘ಒಡಲ ಬೆಂಕಿ’ ಎಂಬ ಪುಸ್ತಕದಲ್ಲಿ ಕಾಣಬಹುದು. ಕನ್ನಡ ಕವಿಗಳು ಕಂಡ ಹಸಿವು ಇಲ್ಲಿರುವ ಕವಿತೆಗಳಲ್ಲಿ ಅನಾವರಣಗೊಂಡಿದೆ.

ಇಲ್ಲಿರುವ ಕವಿತೆಗಳನ್ನು ಸಂಪಾದಿಸಿರುವ ವಿಠ್ಠಲ ಭಂಡಾರಿ. ಕವಿತೆಗಳನ್ನು ಓದುವುದಕ್ಕೂ ಮುನ್ನ ಓದುಗರಿಗೆ ಎಸ್. ಜಿ. ಸಿದ್ದರಾಮಯ್ಯನವರು ಬರೆದಿರುವ ಮುನ್ನುಡಿ ಕೃತಿಯ ಬಗ್ಗೆ ರುಚಿ ಹತ್ತಿಸುತ್ತದೆ. ಆನಂತರ ವಿಸ್ತಾರವಾಗಿರುವ ಸಂಪಾದಕರ ಮಾತು ಕವಿತೆಗಳನ್ನು ಓದುತ್ತಾ ಹೋದಂತೆ ಆಗಾಗ ಪ್ರಸ್ತುತವಾಗುತ್ತದೆ. ಎಲ್ಲಾ ಕವಿತೆಗಳ ಸಾರವನ್ನು ಸಂಪಾದಕರ ಮಾತುವಿನಲ್ಲಿ ವಿಠ್ಠಲ ಭಂಡಾರಿಯವರು ಹಿಡಿದಿಟ್ಟಿದ್ದಾರೆ. ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡು ಮರುಗಿದ್ದಾರೆ. ವಿಠ್ಠಲ ಭಂಡಾರಿ ಹಸಿವಿನ ಬಗ್ಗೆ ಇರುವ ಎಲ್ಲಾ ಕನ್ನಡ ಕವಿತೆಗಳನ್ನು ಇಲ್ಲಿ ಸೇರಿಸಿರುವಂತೆಯೇ ಕೆಲವು ಜನಪದ ಗೀತೆಗಳನ್ನು ಸಂಗ್ರಹಿಸಿದ್ದಾರೆ. ಹಸಿವನ್ನು ಜನಪದರು ಸ್ವತ: ಅನುಭವಿಸಿ ಹಾಡಿರುವ ಈ ಹಸಿ ಗೀತೆಗಳು ಹಸಿವಾಸ್ತವವನ್ನು ಹೊರಗಿಡುತ್ತವೆ.

ಬಡವರು ಸತ್ತರೆ ಸುಡಲಿಕೆ ಸೌದಿಲ್ಲೋ,

ಒಡಲ ಬೆಂಕಿಲಿ ಹೆಣ ಬೆಂದೋ ದೇವರೆ,

ಬಡವರಿಗೆ ಸಾವ ಕೊಡಬ್ಯಾಡ ‘

 

ದೊಡ್ಡೋರ ಮಕ್ಳೋಗೆ ಬೆಲ್ಲ ಬಾಳೆಯ ಹಣ್ಣು

ಏನೂ ಇಲ್ಲದ ಬಡವೇಯ ಮಕ್ಳೋಗೆ

ಹೆತ್ತಬ್ಬೆ ಬತ್ತ ಮೊಲೆ ಹಾಲು’

 

ಈ ಕವಿತೆಗಳು ಹಸಿವಿನಲ್ಲಿ ನರಳುತ್ತಿರುವವರೆಲ್ಲರ ಧ್ವನಿಯನ್ನು ಪ್ರತಿಧ್ವನಿಸುತ್ತದೆ. ಅಲ್ಲಮ ಪ್ರಭು, ಜೇಡರ ದಾಸಿಮಯ್ಯ, ಸರ್ವಜ್ಞ, ಬಸವಣ್ಣ, ಅಂಬಿಗರ ಚೌಡಯ್ಯ, ಕಡಕೋಳ ಮಡಿವಾಲಪ್ಪ, ರಂಶ್ರೀ ಮುಗಳಿ, ಬಿ.ಎಚ್. ಶ್ರೀಧರ, ದಿನಕರ ದೇಸಾಯಿ, ಕೆಯ್ಯಾರ ಕಿಂಞ್ಞಣ್ಣ ರೈ, ಎಂ. ವಿ. ಸೀತಾರಾಮಯ್ಯ, ವಿ.ಜಿ. ಭಟ್, ಸು.ರಂ. ಎಕ್ಕುಂಡಿ, ಜಿ.ಎಸ್. ಶಿವರುದ್ರಪ್ಪ, ಚನ್ನವೀರ ಕಣವಿ, ಡಾ. ಆರ್. ವಿ.ಭಂಡಾರಿ, ಡಾ. ಸಿದ್ದಲಿಂಗಯ್ಯ, ಪ್ರೊ. ಡಿ.ಬಿ. ಬಡಿಗೇರ, ಸಿ. ವೀರಣ್ಣ, ಅಶೋಕ ಶೆಟ್ಟರ್, ದೊಡ್ಡರಂಗೇಗೌಡ, ಶ್ಯಾಮಸುಂದರ ಬಿದರಕುಂದಿ, ಬರಗೂರು ರಾಮಚಂದ್ರಪ್ಪ, ಬೇಂದ್ರೆ, ಟಿ. ಮಲ್ಲಪ್ಪ, ಮುಂತಾದವರು ಬರೆದಿರುವ 56 ಕವಿತೆಗಳು ಓದುಗರಿಗೆ ಹಸಿವಿನ ದರ್ಶನ ಮಾಡಿಸುತ್ತದೆ. ಕನ್ನಡ ಸಾಹಿತ್ಯ ಎಷ್ಟರ ಮಟ್ಟಿಗೆ ಜನರ ಹಸಿವಿಗೆ ಸ್ಪಂದಿಸಿದೆ ಎಂಬುದು ಈ ಕವಿತೆಗಲ ಮೂಲಕ ತಿಳಿಯುತ್ತದೆ. ಕವಿತೆ ಮೂಲಕವೇ ಅಲ್ಲದೇ ಕಥಾ ರೂಪದಲ್ಲಿ ಜನರು ಹಸಿವಿಗೆ ಸ್ಪಂದಿಸಲಾಗಿದೆ.

ಇಲ್ಲಿ ಬಳಸಿರುವ ಪದಗಳು ಹಸಿವಿನ ನೋವನ್ನು ಓದುಗನ ಮನಸಿಗೆ ತಾಗಿಸುತ್ತವೆ. ಹಸಿದವರ ಸ್ಥಿತಿಗೆ ಮರಗುವ ಮನಸ್ಸಿರುವ ಈ ಕವಿತೆಗಳಲ್ಲಿ ಶೋಷಿತರ ವಿರುದ್ಧ ಸಿಡಿಯುವ ರೋಷನೂ ಅರಿವಿಗೆ ಬರುತ್ತದೆ. ಇಲ್ಲಿರುವ ಕವಿತೆಗಳು ಬೇರೆಬೇರೆ ಸಂದರ್ಭಗಳಲ್ಲಿ ರಚಿತವಾದವುಗಳಾದರೂ ಅವು ಹಸಿವನ್ನು ಹೊಮ್ಮಿಸುವ ರೀತಿ ನೋಡಿದರೆ ಹಸಿವೆಂಬ ಕರಾಳತೆ ಜನರನ್ನೂ ಕಾಲದಿಂದ ಕಾಲಕ್ಕೆ ಬಿಡುವು ಕೊಡದೆ ಬಾಧಿಸುತ್ತಿರುವ ರೀತಿ ಕಣ್ಣಿಗೆ ಕಟ್ಟುತ್ತದೆ. ಎಲ್ಲಾ ಕವಿತೆಗಳೂ ಇದು ಹಾಡಲ್ಲ ಒಡಲ ಉರಿ ಎಂಬುದನ್ನು ವ್ಯಕ್ತಗೊಳಿಸುತ್ತವೆ.

-ಎನ್.ಎಸ್ ಗೌಡ

ಲಂಕೇಶ್ ಪತ್ರಿಕೆ /13 ಮೇ 2010

 

“ಒಲೆಯೊಳಗೆ ಬೆಕ್ಕು, ಒಡಲೊಳಗೆ ಬೆಂಕಿ” ಇದು ಹಸಿದ ಬಡವನ ಮನೆಯ ದಾರುಣ ಚಿತ್ರ ನೀಡುವ, ಆರ‍್. ವಿ. ಭಂಡಾರಿಯವರ ಕವನದ ಒಂದು ಸಾಲು. ಹಸಿವಿನ ತೀವ್ರತೆಯನ್ನು ಹೆಚ್ಚು ಬಡವರಿರುವ ನಮ್ಮ ದೇಶದಲ್ಲಿ ಹೊಸದಾಗಿ ಪರಿಚಯಿಸುವ ಮೊದಲೇ ಜನ ಅದನ್ನು ಅನುಭವಿಸಿದ್ದಾರೆ. ವರ್ಣನೆಗಿಂತಲೂ ಭೀಕರತೆ ಮತ್ತು ಆಳ ಹಸಿವಿಗಿದೆ. ಬಡವನಿಗೆ ಹೊಟ್ಟೆ ಹಸಿವು ಸಂಗಾತಿ ಹಾಗೂ ಶ್ರೀಮಂತನಿಗೆ ಅದು ಗೇಟಿನಾಚೆಯ ಅಪರಿಚಿತ ಅತಿಥಿ. `ಗರೀಬಿ ಹಟಾವ್’,`ರೋಟಿ, ಕಪಡಾ, ಮಕಾನ್’ ಇವೆಲ್ಲಾ ಘೋಷಣೆಗಳು ಸ್ವಾತಂತ್ಯ್ರಾ ನಂತರದ ಉತ್ಸಾಹದ ಸ್ಯಾಂಪಲ್ ಮಾತ್ರ. ಅದನ್ನೆಲ್ಲ ದಾಟಿ ಹಸಿವು ಈಗ ಜಾಗತಿಕ ಸಮಸ್ಯೆಯ ಸ್ವರೂಪ ಪಡೆದಿದ್ದು ಅನ್ನಕ್ಕಾಗಿ ಎಲ್ಲೆಡೆ ಹಾಹಾಕಾರವೆದ್ದಿದೆ. ಕೆಳವರ್ಗದ ಜನ ಹೊಟ್ಟೆಪಾಡಿಗೆ ಪಡುವ ಬವಣೆಯನ್ನು ಕೃತಿಯ ಸಂಪಾದಕ ಶ್ರೀ ವಿಠಲ್ ಭಂಡಾರಿ ಸ್ವತಃ ಕಣ್ಣಾರೆ ಕಂಡ ಘಟನೆಗಳ ಮೂಲಕ ಪ್ರಸ್ತಾಪಿಸಿದ್ದಾರೆ. ಇತರ ಕವಿ-ಸಾಹಿತಿಗಳಿಂದಲೂ ಈ ಬಗ್ಗೆ ಸಾಕಷ್ಟು ಸಾಹಿತ್ಯ ನಿರ್ಮಾಣವೂ ಆಗಿದೆ. ಕೆಲವು ಆಯ್ದ ಕವನಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ
-ಇಂದಿರಾಕುಮಾಋಇ
34/11, 2ನೇ ಕ್ರಾಸ್, ಬಾಂಬೆ ಡೈಯಿಂಗ್ ಸಮೀಪ
ಯಶವಂತಪುರ
ಬೆಂಗಳೂರು – 22

ಹಸಿವು ಜಾಗತಿಕ ಸಮಸ್ಯೆ. ಈ ಸಮಸ್ಯೆಗೆ ಎರಡು ಕಾರಣಗಳಿವೆ. ಒಂದು ಪ್ರಾಕೃತಿಕ. ಸಹಜವಾದ ಕ್ಷಾಮ ಡಾಮರಗಳಿಂದಾಗುವ ಆಹಾರದ ಕೊರತೆ. ಇನ್ನೊಂದು ಮನುಷ್ಯನೇ ನಿರ್ಮಾಣ ಮಾಡುವ ಆಹಾರದ ಕೃತಕ ಅಭಾವ. ಒಬ್ಬನ ಹೊಟ್ಟೆಯ ಮೇಲೆ ಹೊಡೆದು ತಾನು ಮಾತ್ರ, ತನ್ನವರು ಮಾತ್ರ ಸುಖವಾಗಿರಬೇಕು ಎಂಬ ಬಂಡವಳಿಗ ಬುದ್ಧಿ ಈ ಕೃತಕ ಬರಗಾಲದ ಹಿಂದಿನ ರಾಜಕಾರಣ. ಈ ಬಂಡವಳಿಗ ಬುದ್ಧಿ ವ್ಯಕ್ತಿ ನೆಲೆಯಿಂದ ಹಿಡಿದು ಜಾಗತಿಕ ವ್ಯಾಪ್ತಿಯವರೆಗೆ ವ್ಯವಸ್ಥಿತವಾಗಿ ಹಬ್ಬಿ ಬೆಳೆದ ಬೃಹತ್ ಜಾಲವಾಗಿದೆ. ಹೀಗಾಗಿಯೇ ಹಸಿವಿಗೂ ಲಾಭಕ್ಕೂ ಇರುವ ಸಂಬಂಧ ಕ್ರೂರವೂ ಅಮಾನವೀಯವೂ ಆದುದು.

ಈ ಕೃತಿಯಲ್ಲಿ ತೊಂಡಿ ಸಂಪ್ರದಾಯದ ಜನಪದ ಗೀತೆಗಳಿಂದ ಹಿಡಿದು ಚಳವಳಿಯ ಉಪವಸ್ತುವಿನಂತಿರುವ ವಚನ ಸಾಹಿತ್ಯವನ್ನೂ ಒಳಗೊಂಡು ಕನ್ನಡದ ಬಹುಮುಖ್ಯ ಹಿರಿಯ ಕಿರಿಯ ವಿಶಿಷ್ಟ ದನಿಗಳು ಇಲ್ಲಿ ಸೇರಿವೆ.

– ಎಸ್. ಜಿ. ಸಿದ್ಧರಾಮಯ್ಯ

1943 ರಲ್ಲಿ ಬಂಗಾಲದಲ್ಲಿ ಸಂಭವಿಸಿದ ಭೀಕರ ಬರದ ನೋವಿಗೆ ದೇಶದ ಸಾಹಿತ್ಯ, ಸಾಂಸ್ಕೃತಿಕ ವಲಯ ಅರ್ಥಪೂರ್ಣವಾಗಿ, ಮಾನವೀಯವಾಗಿ ಸ್ಪಂದಿಸಿದೆ. ಅತ್ಯಂತ ದೂರದ ಕನ್ನಡ ನೆಲದಲ್ಲಿ ಕೂಡ ಬಂಗಾಳದ ನೋವಿಗೆ ಸ್ಪಂದಿಸದೇ ಇರಲಿಲ್ಲ.

ಸಮಾಜ ಎದುರಿಸುವ ಇಂತಹ ಬಿಕ್ಕಟ್ಟು-ಸವಾಲುಗಳಿಗೆ ಕನ್ನಡ ಸಾಹಿತ್ಯ ಪ್ರತಿಸ್ಪಂದಿಸುತ್ತಲೇ ಬಂದಿದೆ. ಜಾನಪದ ಸಾಹಿತ್ಯ, ಚಂಪೂ ಸಾಹಿತ್ಯ, ವಚನ ಸಾಹಿತ್ಯವನ್ನೂ ಒಳಗೊಂಡು ದಲಿತ-ಬಂಡಾಯೋತ್ತರ ಸಾಹಿತ್ಯದ ಘಟ್ಟದವರೆಗೂ ಇದನ್ನು ನಾವು ನೋಡಬಹುದು.

ಶತಮಾನಗಳಿಂದ ಬಹುಸಂಖ್ಯಾತ ಸಮುದಾಯವನ್ನು ಕಾಡುತ್ತಿರುವ ಹಸಿವನ್ನು ಕನ್ನಡ ಕವಿಗಳು ಕಂಡ ಬಗೆ ಕೂಡ ವಿಶಿಷ್ಟವಾಗಿದೆ. ಹಸಿವಿನ ವಿವಿಧ ಮುಖಗಳನ್ನು ತೆರೆದಿಡುವುದರೊಂದಿಗೆ ಹಸಿವಿನ ಮೂಲ ಮತ್ತು ಪರಿಣಾಮಗಳನ್ನು ಕೂಡ ಸೂಕ್ಷ್ಮವಾಗಿ ಚಿತ್ರಿಸುತ್ತಾ ಹೋಗಿದ್ದಾರೆ. ಲೇಖಕರು ಕಟ್ಟಿಕೊಡುವ ಚಿತ್ರದ ಹಿಂದೆ ನೋವು, ಸಿಟ್ಟು, ಪ್ರತಿಭಟನೆಗಳು ಹಲವು ಬಾರಿ ಮೂರ್ತವಾಗಿ, ಕೆಲವು ಬಾರಿ ಅಮೂರ್ತವಾಗಿ ವ್ಯಕ್ತವಾಗಿವೆ.

– ವಿಠ್ಠಲ್ ಭಂಡಾರಿ