04. ದಶರಥನ ವನವಾಸ


dasharathana-vanavaasa-vijaya-karnataka-vimarshe-1

ಅಂಕಲ್ . . . . ಓ ಅಂಕಲ್ . . . ., ಪ್ಲೀಸ್ ಇಲ್ಲಿ ಕೇಳಿ ಅಂಕಲ್. . . .

ಇಕ್ಕಟ್ಟಾದ ರಸ್ತೆಗೆ ಬಹುಮಟ್ಟಿಗೆ ಅಂಟಿಕೊಂಡೇ ಇದ್ದ ಬಂಗಲೆಯ ಫೇಸಿಂಗ್ ಕಡೆಯಿಂದ ಯಾವುದೋ ಹುಡುಗ ಅವರನ್ನು ಕರೆದ.

ಸಚದೇವಾ ನಿಂತರು, ಧ್ವನಿ ಎಲ್ಲಿಂದ ಬರುತ್ತಿದೆಯೆಂಬುದನ್ನು ತಿಳಿಯಲು. ಏನೂ ಗೊತ್ತಾಗಲಿಲ್ಲ. ಕಿವಿ ಹಾಗೂ ಕೂದಲು ಉದುರಿದ ಬೋಳುತಲೆಯನ್ನು ಸುತ್ತಿ ಬಿಗಿಯಾಗಿ ಬಿಗಿದಿದ್ದ ಮಫ್ಲರನ್ನು ಅವರು ಸ್ವಲ್ಪ ಸಡಿಲಗೊಳಿಸಿದರು. ಮಧುಮೇಹದ ನೇರ ಆಕ್ರಮಣ ಅವರ ಶ್ರವಣಶಕ್ತಿಯ ಮೇಲೆ ಆಗಿತ್ತು. ಹೇಳಿದ್ದು ಕೇಳಿಸದೇ ಇದ್ದಾಗ, ಎದುರಿನ ವ್ಯಕ್ತಿಯ ರೂಕ್ಷವಾದ ಮಾತುಗಳನ್ನು ಅದುಮಿಡಲು ಸಾಧ್ಯವಾಗದಿದ್ದಾಗ ಮನಸ್ಸಿಗೆ ಒಮ್ಮೊಮ್ಮೆ ನೋವಾಗುತ್ತಿತ್ತು. ಏಳೆಂಟು ತಿಂಗಳಿಗೂ ಹೆಚ್ಚಾಗಿರಬಹುದು. ತಮ್ಮ ಈ ಸಂಕಟವನ್ನು ವಿನಯನಿಗೆ ಅವರು ಬರೆದು ಕಳಿಸಿದ್ದರು. ಉತ್ತರವಾಗಿ ಅವನಿಂದ ಫೋನ್ ಬಂದಿತ್ತು. ಶ್ರವಣಯಂತ್ರಕ್ಕಾಗಿ ಹಣವನ್ನು ಅವರ ಹೆಸರಿಗೆ ಕಳಿಸುತ್ತಿದ್ದೇನೆ. ಆಶ್ರಮವಾಸಿಗಳ ನೆರವಿನಿಂದ ತಮ್ಮ ಈ ತೊಂದರೆಗೆ ಚಿಕಿತ್ಸೆ ಮಾಡಿಸಲಿ ಎಂದು. ತಮ್ಮ ಹೆಸರಿಗೆ ಬರುವ ಹಣಕ್ಕಾಗಿ ಬಹಳ ದಿನಗಳಿಂದ ಅವರು ಕಾಯುತ್ತಿದ್ದರು. ಸಿಟ್ಟಿಗೆದ್ದ ಅವರು ಅವನಿಗೆ ಮತ್ತೊಂದು ಪತ್ರವನ್ನೂ ಬರೆದಿದ್ದರು. ಉತ್ತರವಾಗಿ ಅವನಿಂದ ಮತ್ತೊಂದು ಫೋನ್ ಬಂದಿತ್ತು. ಏನೋ ಬಿಕ್ಕಟ್ಟಿನ ಕೆಲಸದಲ್ಲಿ ಸಿಕ್ಕಿಕೊಂಡಿದ್ದಾನೆ. ಹಾಗಾಗಿ ಅವರಿಗೆ ಹಣ ಕಳಿಸಲು ಸಾಧ್ಯವಾಗಿರಲಿಲ್ಲ. ಮುಂದಿನ ತಿಂಗಳು ಅವನ ಒಬ್ಬ ಭಾರತೀಯ ಮಿತ್ರ ಭಾರತಕ್ಕೆ ಬರುತ್ತಿದ್ದಾನೆ. ಅವನ ಮನೆ ಲಜಪತನಗರದಲ್ಲಿದೆ. ಅವನ ಮನೆಯ ಫೋನ್ ನಂಬರ್ ಬರೆದುಕೊಳ್ಳಿ. ಅವನ ಕೈಯಲ್ಲಿ ಪೌಂಡ್ಸ್ ಕಳಿಸುತ್ತಿದ್ದೇನೆ. ರೂಪಾಯಿಗಳನ್ನು ಅವನೇ ಆಶ್ರಮಕ್ಕೆ ಬಂದು ತಲುಪಿಸುತ್ತಾನೆ, ಅಥವಾ ಬೇರೆ ಯಾರದಾದರೂ ಕೈಯಲ್ಲಿ ಕಳಿಸುತ್ತಾನೆ. ಅವನ ಹೆಸರು ಡಾ|| ಮನೀಷ ಕುಶವಾಹಾ. ಅವನು ಹೇಳಿದಂತೆ ಡಾ|| ಮನೀಷ ಕುಶವಾಹಾ ಫೋನ್ ಬಂತು. ರಾಮೇಶ್ವರರು ಸೂಚನೆ ಕೊಟ್ಟಕೂಡಲೇ ಉತ್ಸಾಹದಿಂದ ಅವರು ಫೋನ್ ಆಲಿಸಲು ಹೋದರು. ಮನೀಷ ತುಂಬ ಆತ್ಮೀಯತೆಯಿಂದ ಅವರ ಕ್ಷೇಮ ಸಮಾಚಾರ ಕೇಳಿದ. ಏನೇನು ತೊಂದರೆ ಇದೆ, ಶುಗರ್ ಎಷ್ಟಿದೆ, ಬ್ಲಡ್ಪ್ರೆಶರ್ಗೆ ಯಾವ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ, ಎಷ್ಟು ತೆಗೆದುಕೊಳ್ಳುತ್ತಿದ್ದಾರೆ, ಮೂತ್ರ ಪರೀಕ್ಷೆ ಮಾಡಿಸಿದ್ದಾರಾ ಎಂದೆಲ್ಲ ತಿಳಿಯಬಯಸಿದ. ಹಾಗೆಯೇ ಯಾಕೆ ಇಲ್ಲಿ ಒಬ್ಬರೇ ಇದ್ದಾರೆ. ವಿನಯನ ಜೊತೆಗೆ ಲಂಡನ್ನಿಗೆ ಯಾಕೆ ಬರಬಾರದು? ಅವನ ಹೆಂಡತಿ . . . ಅಂದರೆ ಇವರ ಸೊಸೆ ಸ್ವಯಂ ಡಾಕ್ಟರ್ ಇದ್ದಾಳೆ . . . . ? ಇತ್ಯಾದಿ. ಆದರೆ ಅವನು ಹಣದ ಬಗೆಗೆ ಮಾತನ್ನೇ ಆಡುತ್ತಿಲ್ಲ. ಹಿಂಜರಿಯುತ್ತ ಅವರೇ ಸ್ವಯಂ ಕೇಳಿದರು – ಮಗ ವಿನಯ ನನ್ನ ಚಿಕಿತ್ಸೆಗಾಗಿ ಸ್ವಲ್ಪ ಹಣ ಕಳಿಸುವುದಾಗಿ ಹೇಳಿದ್ದ . . . .

Advertisements
ಶೀರ್ಷಿಕೆ : ದಶರಥನ ವನವಾಸ – ಚಿತ್ರಾ ಮುದ್ಗಲ್ ಅವರ ಹತ್ತು ಪ್ರತಿನಿಧಿ ಕತೆಗಳು
ಲೇಖಕರು : ಚಿತ್ರಾ ಮುದ್ಗಲ್
ಅನುವಾದ : ಆರ‍್. ಪಿ. ಹೆಗಡೆ
ಪುಟಗಳು : 204
ಬೆಲೆ : ರೂ.90/-