ಮುನ್ನುಡಿ


ಹಸನ್ ನಯೀಮ್ ಸುರಕೋಡು ಸಾಹೇಬರ ಈ ಕೃತಿಗೆ ಮುನ್ನುಡಿ ಬರೆಯುವುದಕ್ಕಿಂತ ದೊಡ್ಡ ಕಿಡಿಗೇಡಿತನ ಮತ್ತೊಂದಿದ್ದರೆ ಅದು; ಈ ಪುಸ್ತಕಕ್ಕೆ ನಾನೇ ಮುನ್ನುಡಿ ಬರೆಯಬೇಕೆಂದು ಅವರು ಒತ್ತಾಯಿಸಿದ್ದು.

ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ, ವಿರೋಧ ಪಕ್ಷದಲ್ಲಿದ್ದಾಗಲೆಲ್ಲ, ಯುದ್ಧ ಘೋಷಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆರ್ಭಟಿಸುವ ನಾವು, ಅಕಾಸ್ಮಾತ್ ಆಡಳಿತ ಪಕ್ಷಕ್ಕೆ ಸೇರಿಬಿಟ್ಟಿದ್ದರೆ, ಯುದ್ಧವೊಂದೇ ಪರಿಹಾರವಲ್ಲ ಎಂಬ ಶಾಂತಿ ಮಂತ್ರ ಹಾಡುತ್ತೇವೆ. ನಮ್ಮ ಈ ಸಕಾಲಿಕ ಗೋಸುಂಬೆತನಕ್ಕೂ ಸಕಾರಣಗಳಿವೆ. ಈಗೆಲ್ಲ ಯುದ್ಧ ಬಲು ದುಬಾರಿ ಕಾರ್ಯಕ್ರಮ.

ಆಧುನಿಕ ಕಾಲದ ಯುದ್ಧಗಳಲ್ಲಿ ಹಳೆಯ ಸಿನೆಮಾಗಳಲ್ಲಿರುವಂತೆ ಆನೆ-ಕುದುರೆಗಳನ್ನೇರಿ ಖಡ್ಗ ಝಳಪಿಸುತ್ತಾ, ಕೊಂಬು ಕಹಳೆಗಳನ್ನೂದಿದರೆ ವೈರಿಗಳು ಶರಣಾಗುವುದಿಲ್ಲ. ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಸುಮಾರು ೨೦೦ ಲಕ್ಷ ಕೋಟಿ ರೂಪಾಯಿ [ರೂ.೨೦೦೦೦೦೦೦,೦೦,೦೦,೦೦೦] ವೆಚ್ಚದಲ್ಲಿ ಅಮೇರಿಕಾ ನಡೆಸಿದ/ನಡೆಸುತ್ತಿರುವ ಪ್ರಜಾಪ್ರಭುತ್ವಕ್ಕಾಗಿ ಯುದ್ಧಗಳು ಇದಕ್ಕೆ ಉದಾಹರಣೆಗಳು. ಯುದ್ಧದಿಂದ ಗೆಲ್ಲಲಾಗದ ಅದೆಷ್ಟೋ ಸಂಗತಿಗಳು ಸೌಹಾರ್ದ ಮಾತುಕತೆಗಳಿಂದ ಸಮಾಧಾನಕರ ಬಹುಮಾನ ಪಡೆದುಕೊಂಡದ್ದಕ್ಕೆ ಸಾಕ್ಷಿಗಳಿವೆ. ಇಂತಹ ದೇಶಪ್ರೇಮೀ ಸೂಕ್ಷ್ಮಗಳನ್ನು ಆರು ದಶಕಗಳಿಗೂ ಹಿಂದೆಯೇ ಗುರುತಿಸಿ, ಜನತಾ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ತಕರಾರುಗಳನ್ನು ಕಾಲದಿಂದ ಕಾಲಕ್ಕೆ ದಾಖಲಿಸುತ್ತಿದ್ದವರು ಸಾದತ್ ಹಸನ್ ಮಂಟೊ. ತಮ್ಮ ಕಣ್ಣೆದುರು ವಿತರಿಸಲಾಗುತ್ತಿದ್ದ ವಿಷದ ಬಾಟಲುಗಳು ಬೇರೆಯವರಿಗೆ ಸಿಗದಿರಲಿ ಎಂಬ ಹಟದಿಂದೆಂಬಂತೆ ಎಲ್ಲವನ್ನೂ ತನ್ನ ಗಂಟಲೊಳಗೇ ಸುರಿದುಕೊಂಡ ವಿಷಕಂಠ ಈ ಮಂಟೊ. ಹಿಂದೂಸ್ತಾನ ಮತ್ತು ಪಾಕಿಸ್ತಾನಗಳು ವಿಭಜನೆಯ ಭಜನೆಯಲ್ಲಿ ಮುಳುಗಿರುವಷ್ಟು ಕಾಲ ಸಾಹಿತ್ಯೇತರ ಕಾರಣಗಳಿಗೂ, ಮನುಷ್ಯನಿಗೆ ಓದು ಇನ್ನು ಸಾಕು ಅಂತ ಅನ್ನಿಸುವವರೆಗೆ ಸಾಹಿತ್ಯಿಕ ಕಾರಣಗಳಿಗೂ ನಿತ್ಯ ನೆನಪಾಗಬಲ್ಲ ಅಕ್ಷರ ಸಂತ ಇವರು.

ದೇವರಲ್ಲಿ ಗುಲಗುಂಜಿಯಷ್ಟೂ ನಂಬಿಕೆಯಿಲ್ಲದಿದ್ದರೂ ಖಾಲಿ ಬಿಳಿ ಹಾಳೆಯ ನೆತ್ತಿಯ ಮೇಲೆ, ಮುಸ್ಲಿಮರು ಪವಿತ್ರ ಎಂದು ನಂಬುತ್ತಾರೆನ್ನಲಾದ ೭೮೬ ನಮೂದಿಸಿಯೇ ಅದ್ಭುತವಾದ ಕತೆಗಳನ್ನು ಬರೆಯುತ್ತಿದ್ದ ಅವರನ್ನು ಮೊದಲ ದರ್ಜೆಯ ಫ್ರಾಡ್ ಎಂದವರಿದ್ದರು. ಕಳ್ಳ, ಸುಳ್ಳುಗಾರ, ಕುಡುಕ, ಮೋಸಗಾರ ಎಂದು ದೂಷಿಸಿದವರಿದ್ದರು. ತಮಾಶೆಯೆಂದರೆ ಹಾಗೆಲ್ಲ ಆಪಾದಿಸಿದವರಲ್ಲಿ ಸ್ವತಃ ಮಂಟೋ ಅವರೂ ಇದ್ದರು. ಬರೆದ ಮೊದಲ ಕತೆ ತಮಾಶಾವನ್ನು ಬೇರೆಯವರ ಹೆಸರಲ್ಲಿ ಪ್ರಕಟಿಸಿದ್ದ ಮಂಟೋ ಎಂದೂ ನೇರ ದಾರಿಯಲ್ಲಿ ಹೆಜ್ಜೆ ಹಾಕಿದವರಲ್ಲ. ಅವರದ್ದು ಯಾವಾಗಲೂ ಹಗ್ಗದ ಮೇಲಿನ ನಡಿಗೆ. ಯಾವುದೇ ಕ್ಷಣದಲ್ಲಿ ಮಂಟೋ ಕಾಲು ಜಾರಿ ಬಿದ್ದು ಬೀಳಬಹುದೆಂದು ಬಹಳಷ್ಟು ಮಂದಿ ನಿರೀಕ್ಷಿಸಿದ್ದರು; ಬಯಸಿದವರೂ ಇದ್ದರು.

ಮಂಟೊ ಬೇಜವಾಬ್ದಾರಿತನದಿಂದ ಎಚ್ಚರ ತಪ್ಪಿ ಬಿದ್ದದ್ದು ಒಮ್ಮೆ ಮಾತ್ರ; ಸಾಯುವುದಕ್ಕಿಂತ ಅರೆಕ್ಷಣ ಮೊದಲು.

ಅವರು ಮಾಡಿದ್ದಿರಬಹುದಾದ ಒಂದೇ ಒಂದು ಅತ್ಯಂತ ಬೇಜವಾಬ್ದಾರಿ ಕೆಲಸವೆಂದರೆ, ಅವರು ಸತ್ತುಹೋದದ್ದು.

ಈಗ ದೊಡ್ಡಣ್ಣ ಎನ್ನಿಸಿಕೊಂಡಿರುವ, ಹಿಂದೆಯೆಲ್ಲ ಅಂಕಲ್ ಸ್ಯಾಮ್ ಎಂದು ಕರೆಸಿಕೊಳ್ಳುತ್ತಿದ್ದ ಅಮೇರಿಕಾದ ಪ್ರಭುತ್ವದ ನಿಜ ಹೂರಣವನ್ನು, ಸ್ಯಾಮ್ ಅಂಕಲ್ ಗೆ ಪತ್ರಗಳು ಎಂಬ ಕಿಡಿಗೇಡಿ ಬರಹಗಳ ಮೂಲಕ ಅನಾವರಣಗೊಳಿಸಿದ್ದ ಮಂಟೊರದ್ದು ಅನನ್ಯ ಸೃಜನಶೀಲ ಪ್ರತಿಭೆ. ಆರು ದಶಕಗಳ ಹಿಂದೆ ಮಂಟೊ ಬರೆದ ಆ ಪತ್ರಗಳಲ್ಲಿ ತಮಾಷೆಯಾಗಿಯೇ ವ್ಯಕ್ತಪಡಿಸಿದ್ದ ಹಿಂದೂಸ್ತಾನ, ಪಾಕಿಸ್ತಾನ ಮತ್ತು ಅಮೇರಿಕಾ ನಡುವಣ ರಾಜ ತಾಂತ್ರಿಕ ಸಂಬಂಧಗಳ ಒಕ್ಕಣೆ-ವಿವರಣೆಗಳು ಇಂದು ಕೂಡಾ ಪ್ರಸ್ತುತವೆನ್ನಿಸತೊಡಗಿದಾಗ ಗಾಬರಿಯಾಗುತ್ತದೆ.

ಬರಹಗಾರನೊಬ್ಬನಿಂದ ಇಷ್ಟೊಂದು ಕರಾರುವಾಕ್ಕಾಗಿ ಕಣಿ ಹೇಳಲು ಸಾಧ್ಯವೇ? ನಂಬಲಾಗದ ಸತ್ಯ ಇದು.

ಬಾಯಿ ತೆರೆಯುವುದೇ ಶರಾಬು ಸುರಿದುಕೊಳ್ಳಲು ಎಂದು ನಂಬಿದ್ದ ಮಂಟೊರ ಬದುಕು ಬರಹಗಳನ್ನು ಸುರಕೋಡ ಸಾಹೇಬರು ಅದೆಷ್ಟು ಚೆನ್ನಾಗಿ ಅರೆದು ಕುಡಿದಿದ್ದಾರೆ ಎಂಬುದಕ್ಕೆ ಅವರು ಈ ಸಂಕಲನಕ್ಕೆ ಬರೆದಿರುವ ಸಂಕ್ಷಿಪ್ತ ಪ್ರಸ್ತಾವನೆಯೇ ಸಾಕ್ಷಿ. ಮಂಟೊ ಮತ್ತು ಮಂಟೊರ ಬಗ್ಗೆ ಬೇರೆ ಬೇರೆಯವರು ಬರೆದ ೨೩ರಷ್ಟು ಬರಹಗಳನ್ನು, ಧರ್ಮನಿಷ್ಟರ ಪ್ರಾರ್ಥನೆಯಿಂದಾರಂಭಿಸಿ, ಲೋಕಾವಲೋಕನ, ಆತ್ಮಾವಲೋಕನ, ಭರತವಾಕ್ಯ, ಅಂಕದ ಪರೆದೆ ಜಾರಿದ ಮೇಲೆ – ಹೀಗೆ ಐದು ವಿಭಾಗಗಳಲ್ಲಿ ಸಂಗ್ರಹಿಸಿ, ಅನುವಾದಿಸಿ ಈ ಸಂಕಲನದಲ್ಲಿ ದಾಖಲಿಸಿರುವ ಸುರಕೋಡು ಸಾಹೇಬರ ಶ್ರಮ ಮತ್ತು ಕ್ರಮ ಅಭಿನಂದನಾರ್ಹ. ಕೇವಲ ಈ ಬಗೆಯ ಕಿಡಿಗೇಡಿ ರಚನೆಗಳನ್ನಷ್ಟೇ ಸಂಕಲಿಸಿದರೆ, ಮಂಟೊರ ನಿಜವನ್ನು ಅರಿಯದ ಹೊಸ ಓದುಗರಿಗೆ ಅನ್ಯಾಯವಾದೀತೆಂಬ ಅಳುಕಿನಿಂದ, ಆ ಮಹಾನ್ ಸಾಹಿತಿಯು ಭಾರತೀಯ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳ ಬಗ್ಗೆಯೂ ಕೆಲವು ಅಪರೂಪದ, ಅಮೂಲ್ಯ ಬರಹಗಳನ್ನು ಅನುವಾದಿಸಿ ಸೇರಿಸಿಕೊಂಡ ಸುರಕೋಡು ಸಾಹೇಬರ ಎಚ್ಚರ ಹೊಸಬರಿಗೆ ಒಂದೊಳ್ಳೆಯ ಪಾಠ.

ಇಂತಹ ಅಪರೂಪದ ಸಂಕಲನವನ್ನು ಕನ್ನಡದ ಓದುಗರಿಗೆ ಒದಗಿಸುತ್ತಿರುವ ಚಿಂತನ ಪುಸ್ತಕದವರಿಗೆ ನಾನು ಕೃತಜ್ಞ.

ಬೊಳುವಾರು ಮಹಮದ್ ಕುಂಞಿ
ಎಪ್ರಿಲ್ ೧, ೨೦೧೩

ಶೀರ್ಷಿಕೆ: ಸ್ಯಾಮ್ ಅಂಕಲ್ ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು
ಅನುವಾದ : ಹಸನ್ ನಯೀಂ ಸುರಕೋಡ
ಬೆಲೆ : ರೂ.140/-

Advertisements

ಅದು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ಕೂಡಿಕೆ ಸರಕಾರ ನಡೆಯುತ್ತಿದ್ದ ಕಾಲ. ದಿನನಿತ್ಯ ವಿರೋಧಾಭಾಸಗಳು, ಪ್ರಹಸನಗಳು, ಸವತಿ ಮಾತ್ಸರ್ಯಗಳು ಹಾಗೂ ಮುನಿಸುಗಳ ಸಿಡಿಮಿಡಿ ಹರಿದಾಡುತ್ತಿದ್ದ ಆ ಕಾಲ ಪಿ.ಮಹಮ್ಮದರ ಕಾರ್ಟೂನ್ ನೋಟಕ್ಕೆ ಹೇಳಿ ಮಾಡಿಸಿದ ಕಾಲದಂತಿತ್ತು. ನಿಜವಾದ ವಿರೋಧಪಕ್ಷದ ಹಾಗೆ ಈ ಎಲ್ಲ ಬೆಳವಣಿಗೆಗಳನ್ನು ವ್ಯಂಗ್ಯದಲ್ಲಿ, ಸಿಟ್ಟಿನಲ್ಲಿ, ವಿನೋದದಲ್ಲಿ, ನೈತಿಕ ನಿಲುವಿನಲ್ಲಿ ನೋಡುತ್ತಿದ್ದ ಮಹಮ್ಮದ್ ಕರ್ನಾಟಕದ ಜನತೆಯ ಅವ್ಯಕ್ತ ಭಾವಗಳಿಗೆ ದಿನನಿತ್ಯ ಮಾತು ಕೊಡುತ್ತಿದ್ದರು. ಮಹಮ್ಮದರ ವ್ಯಂಗ್ಯನೋಟ ಕರ್ನಾಟಕದಲ್ಲಿ ದೈನಂದಿನ ಜಾನಪದವನ್ನು ಸೃಷ್ಟ್ಟಿಸತೊಡಗಿತ್ತು. `ಇವತ್ತು ಪ್ರಜಾವಾಣೀಲಿ ಮಹಮ್ಮದ್ದು…’ ಎಂದು ಜನ ಮಾತನಾಡಿಕೊಂಡು ಕರ್ನಾಟಕದ ರಾಜಕೀಯವನ್ನು ಕಂಡು ನಗುತ್ತಿದ್ದುದು, ರೇಗುತ್ತಿದ್ದುದು ಎಲ್ಲೆಡೆ ಕಾಣುತ್ತಿತ್ತು. ಅಷ್ಟು ಹೊತ್ತಿಗಾಗಲೇ ಪಿ.ಮಹಮ್ಮದ್ ಡೆಕ್ಕನ್ ಹೆರಾಲ್ಡ್ನಲ್ಲೂ ವ್ಯಂಗ್ಯಚಿತ್ರ ಬರೆಯುತ್ತಾ ಇಂಗ್ಲಿಷ್ ಓದುಗರ ನಡುವೆಯೂ ಜನಪ್ರಿಯವಾಗತೊಡಗಿದ್ದರು…ಮಹಮ್ಮದ್ ತಮ್ಮ ಕಾಟರ್ೂನ್ ವೃತ್ತಿಯಲ್ಲಿ ಮುಖ್ಯ ಘಟ್ಟ ತಲುಪಿದ್ದರು.
ಆ ಸಮಯದಲ್ಲೇ ಆ ದೃಶ್ಯ ನನ್ನ ಕಣ್ಣಿಗೆ ಬಿದ್ದದ್ದು: ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ನಗರದ ಗೇಟಿನ ಬಳಿ ಮಹಮ್ಮದರ ಕಾರ್ಟೂನುಗಳು ದೊಡ್ಡ ದೊಡ್ಡ ಪೋಸ್ಟರುಗಳ ರೂಪದಲ್ಲಿ ಹಾಗೂ ಪ್ಲೆಕಾರ್ಡ್ ಗಳ ರೂಪದಲ್ಲಿ ಸರ್ಕಲ್ಲಿಗೆ ಒರಗಿ ನಿಂತಿದ್ದನ್ನು ಕಂಡು ರೋಮಾಂಚನವಾಯಿತು. ಸುತ್ತ ನೋಡಿದರೆ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಪುಟಾಣಿ ಲೀಡರುಗಳು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರನ್ನು ಲೇವಡಿ ಮಾಡಿದ್ದ ಆ ಕಾರ್ಟೂನುಗಳನ್ನು ವಿಸ್ತಾರವಾಗಿ ಬ್ಲೋಅಪ್ ಮಾಡಿಸಿ ಬೆಂಗಳೂರಿನ ನಗರದ ಅನೇಕ ಕಡೆ ಪ್ರದರ್ಶಿಸಲು ಗೋಡೆಗಳ ಮೇಲೆ ಅಂಟಿಸಲು ಸಿದ್ಧರಾಗುತ್ತಿದ್ದರು. ಅದು ಪ್ರಾಯಶಃ ಕರ್ನಾಟಕದ ವ್ಯಂಗ್ಯಚಿತ್ರ ಇತಿಹಾಸದ ಒಂದು ಚಾರಿತ್ರಿಕ ದಿನ. ಅಂತಹ ಚಾರಿತ್ರಿಕ ದಿನಕ್ಕೆ ಕಾರಣರಾದ ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು.

ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧ ಪಕ್ಷಗಳಾಗುವ ಈ ಕೆಟ್ಟ ಕಾಲದಲ್ಲಿ ಮಹಮ್ಮದ್ ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ. `ಅದೇನಾದರೂ ಇರಲಿ; ನಾನು ಅದಕ್ಕೆ ವಿರುದ್ಧ!’ ಎಂಬ ಗ್ರೋಚೋ ಮಾರ್ಕ್ಸ್ ನ ಪ್ರಖ್ಯಾತ ಹೇಳಿಕೆಯೊಂದಿದೆ. ಈ ಮಾತಿನ  ಧ್ವನಿ ಬುದ್ಧಿಜೀವಿಗಳು, ರಾಜಕೀಯ ಚಿಂತಕರು, ಸಾಮಾಜಿಕ ಸಂಘಟನೆಗಳ ನಾಯಕರು, ಸೂಕ್ಷ್ಮ ರಾಜಕಾರಣಿಗಳು… ಮುಂತಾಗಿ ಎಲ್ಲರಿಗೂ ಯಾವುದೇ ವ್ಯವಸ್ಥೆಯನ್ನು ಸದಾ ವಿರೋಧದ ದೃಷ್ಟಿಯಿಂದ ನೋಡಬೇಕಾದ ರೀತಿಯನ್ನು ಕಲಿಸಲೆತ್ನಿಸುತ್ತದೆ. ಲಂಕೇಶ್ ಈ ಬಗೆಯ ನೈತಿಕ ವಿರೋಧದ ನೋಟಕ್ರಮದ ಸಮರ್ಥ ಪ್ರತಿನಿಧಿಯಾಗಿದ್ದರು. ಲಂಕೇಶರಿಲ್ಲದ ಈ ಕಾಲದಲ್ಲಿ ಮಹಮ್ಮದ್ ಅವರ ವ್ಯವಸ್ಥೆಯ ವಿರೋಧಿ ನೈತಿಕ ದನಿ ಅಂಥ ಜವಾಬ್ದಾರಿಯನ್ನು ಸದಾ ನಮಗೆ ಮನವರಿಕೆ ಮಾಡಿಕೊಡುತ್ತಿರುತ್ತದೆ.

ಹೀಗೆ ಒಬ್ಬ ಜವಾಬ್ದಾರಿಯುತ ಬುದ್ಧಿಜೀವಿಯ ಕೆಲಸವನ್ನು ಮಹಮ್ಮದ್ ತಮ್ಮ ಕಾರ್ಟೂನ್ ವೃತ್ತಿಯ ಆರಂಭದ ದಿನಗಳಿಂದಲೂ ನಿರ್ವಹಿಸುತ್ತಾ ಬಂದಿದ್ದಾರೆ. 90ರ ದಶಕದಲ್ಲಿ ಅಯೋಧ್ಯಾ ರಾಜಕಾರಣದ ಫಲವಾಗಿ ಹುಟ್ಟಿದ ಪೂರ್ವಗ್ರಹ, ಹಿಂಸೆ, ಕುಟಿಲತೆ ಸೃಷ್ಟಿಸಿದ ವಿಭಜನೆಗಳನ್ನು ಕುರಿತು ಮಹಮ್ಮದ್ `ಮುಂಗಾರು’  ಪತ್ರಿಕೆಯಲ್ಲಿ ಬರೆಯುತ್ತಿದ್ದ ತೀಕ್ಷ್ಣ ವ್ಯಂಗ್ಯಚಿತ್ರಗಳು ಮಂಗಳೂರಿನ ಆರ್ಟ್ ಗ್ಯಾಲರಿಯೊಂದರಲ್ಲಿ ಪ್ರದರ್ಶನಗೊಂಡು ಜಾತ್ಯತೀತ ಜನಾಭಿಪ್ರಾಯವನ್ನು ರೂಪಿಸಲು ಕೂಡ ನೆರವಾದವು.  ಹೀಗೆ `ಮುಂಗಾರು’ ಪತ್ರಿಕೆಯಿಂದ `ಪ್ರಜಾವಾಣಿ’ಯ ತನಕ ಮಹಮ್ಮದ್ ನಡೆದು ಬಂದ ಕತೆ ಕೂಡ ರೋಚಕವಾಗಿದೆ. ತಮ್ಮ ತಾರುಣ್ಯದ ಆರಂಭದಲ್ಲಿ ಪಡುಬಿದ್ರಿಯ ಗಡಿಯಾರದಂಗಡಿಯಲ್ಲಿ ಕೂತು ಗಡಿಯಾರದ ಅತಿ ಸೂಕ್ಷ್ಮ ಭಾಗಗಳಲ್ಲಿ ತಲ್ಲೀನರಾಗುತ್ತಿದ್ದ ಮಹಮ್ಮದ್ ತಮ್ಮ ನಿರಂತರ ಓದು ಹಾಗೂ ಪರಿಶ್ರಮದಿಂದ ಕರ್ನಾಟಕದ ಹಾಗೂ ಕ್ರಮೇಣ ಭಾರತದ ಮುಖ್ಯ ವ್ಯಂಗ್ಯಚಿತ್ರಕಾರರಾಗಿ, ಆ ಮೂಲಕ ಚಿಕಿತ್ಸಕ ಬುದ್ಧಿಜೀವಿಯಾಗಿ ಬೆಳೆದರು. ಕೇವಲ ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳಷ್ಟೇ ಅಲ್ಲದೆ, ಜಗತ್ತಿನ ವಿವಿಧ ಭಾಗಗಳ ರಾಜಕೀಯ, ಆರ್ಥಿಕ ಘಟನೆಗಳಿಗೆ ವ್ಯಾಖ್ಯಾನ ಹಾಗೂ ಪ್ರತಿಕ್ರಿಯೆಗಳನ್ನು ನೀಡುತ್ತಾ ಬಂದಿರುವ ಮಹಮ್ಮದರ ಜಾಗತಿಕ ಜ್ಞಾನ ಕೂಡ ವಿಶಿಷ್ಟವಾದದ್ದು. ಅವರು ಜಗತ್ತಿನ ಬಗೆಬಗೆಯ ವಿದ್ಯಮಾನಗಳ ಮಾಹಿತಿಗಳನ್ನು ಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ದಿನನಿತ್ಯದ ತುಣುಕುಗಳಿಂದ ಪಡೆದಿರಬಹುದು; ಆದರೆ ಅವಕ್ಕೆ ಅವರು ಕೊಡುವ ಚುರುಕಾದ, ನಿಷ್ಠುರವಾದ ಹಾಗೂ ಪ್ರಸ್ತುತವಾದ ಕಟು ವ್ಯಾಖ್ಯಾನಗಳು ಅವರ ಗ್ರಹಿಕೆಯ ಆಳ ಹಾಗೂ ವಿಸ್ತಾರಗಳೆರಡನ್ನೂ ಸೂಚಿಸುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಭಾರತದ ಮುಖ್ಯ ವ್ಯಂಗ್ಯಚಿತ್ರಕಾರರಾದ ಆರ್.ಕೆ.ಲಕ್ಷ್ಮಣ್, ಅಬು ಅಬ್ರಹಾಂ, ಮಾರಿಯೋ ಮಿರಾಂಡ, ಆರ್.ಮೂರ್ತಿ ಥರದ ವ್ಯಾಪಕ ಬೌದ್ಧಿಕ ಸಿದ್ಧತೆಯುಳ್ಳ ವ್ಯಂಗ್ಯಚಿತ್ರಕಾರರಾಗಿ ಮಹಮ್ಮದ್ ವಿಕಾಸಗೊಳ್ಳುತ್ತಿದ್ದಾರೆ. ಅಷ್ಟೇ ಮುಖ್ಯವಾಗಿ, ಖಚಿತ ಪ್ರಗತಿಪರ ದೃಷ್ಟ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗೂ ಏಕಕಾಲಕ್ಕೆ ಮೂಲಭೂತವಾದಿಗಳನ್ನೂ ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ.

ಮಹಮ್ಮದರ ಕಾಟರ್ೂನುಗಳಲ್ಲಿ ಕಾಣಿಸಿಕೊಳ್ಳುವ ಮನಮೋಹನಸಿಂಗರ ಪೇಟ ಮತ್ತು ಹರಕಲು ಗಡ್ಡ; ಸೋನಿಯಾಗಾಂಧಿಯವರ ಮೊದ್ದುವಿಸ್ಮಯ ಮತ್ತು ಮೋಟು ಜಡೆ; ಯಡಿಯೂರಪ್ಪನವರ ಉರಿ ಮುಖದ ಕಡ್ಡಿ ಮೀಸೆ; ಅದ್ವಾನಿಯವರ ಮೀಸೆ ಮರೆಯ ಕಪಟ; ದೇವೇಗೌಡರ ಮುಖದ ತಿರುಚು; ವಾಜಪೇಯಿಯವರ ಸಿನಿಕತೆ; ಮುರಳಿ ಮನೋಹರ ಜೋಷಿಯವರ ಕೊಂಕುಮುಖದ  ಕುಂಕುಮ…ಇವನ್ನೆಲ್ಲ ನೋಡನೋಡುತ್ತಾ ನಮಗೆ ಆಯಾ ವ್ಯಕ್ತಿಗಳ ಅಸಲಿ ಮುಖದ ಪರಿಚಯವಾಗತೊಡಗುತ್ತದೆ. ಈ ಪಾತ್ರಗಳು ಭಾಗಿಯಾದ ಘಟನೆಗಳ ಬಗ್ಗೆ ಮಹಮ್ಮದರ ಅನಿರೀಕ್ಷಿತ ವ್ಯಾಖ್ಯಾನ ನಮ್ಮನ್ನು ಬೆರಗಾಗಿಸುತ್ತದೆ. ಅವರ ವ್ಯಾಖ್ಯಾನದ ಸತ್ವ ನಮ್ಮೊಳಗಿಳಿಯುತ್ತದೆ. ಈ ಬಗೆಯ ಪರಿಣಾಮಕ್ಕೆ ಮಹಮ್ಮದರ ಕಾಟರ್ೂನುಗಳಲ್ಲಿ ರೇಖೆಗಳ ಭಾಷೆ ಹಾಗೂ ಐಡಿಯಾಗಳೆರಡೂ ಹದವಾಗಿ ಬೆರೆಯುವುದು ಕೂಡ ಮುಖ್ಯ ಕಾರಣ.

ಜಗತ್ತಿನ ಅನೇಕ ವ್ಯಂಗ್ಯಚಿತ್ರಕಾರರಿಗೆ ಮಾದರಿಯಾಗಿರಬಹುದಾದ ಡೇವಿಡ್ ಲೋ ಆರ್.ಕೆ.ಲಕ್ಷ್ಮಣರ ಕಲೆಯ ಮೇಲೆ ಬೀರಿದ ರೀತಿಯ ಪ್ರಭಾವವನ್ನು ಮಹಮ್ಮದರ ಕಲೆಯ ಮೇಲೂ ಬೀರಿದ್ದಾನೆ. ಡೇವಿಡ್ ಲೋ ಸ್ಕೂಲ್ನ ರಚನಾಕ್ರಮದಲ್ಲಿ ಪಳಗಿ, ಕ್ರಮೇಣ ಆ ಮಾರ್ಗವನ್ನು ಮೀರಿ ತಮ್ಮದೇ ಹಾದಿಯೊಂದನ್ನು ರೂಪಿಸಿಕೊಳ್ಳಲು ಮಹಮ್ಮದ್ ಸದಾ ಪರಿಶ್ರಮ ಪಡುತ್ತಲೂ ಇದ್ದಾರೆ. ಅಷ್ಟೇ ಅಲ್ಲದೆ, ಭಾರತದ ವಿಶಿಷ್ಟ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾದ ಮಾರಿಯೋ ಮಿರಾಂಡರಂತೆ ಮಹಮ್ಮದ್ ಕೂಡ ತಮ್ಮ ವೈಚಾರಿಕ ಮೊನಚಿನಿಂದಾಗಿ ಇತರೆಲ್ಲ ಭಾರತೀಯ ವ್ಯಂಗ್ಯಚಿತ್ರಕಾರರಿಗಿಂತ ಭಿನ್ನವಾಗುತ್ತಾರೆ. ನಾನು ಈ ಮುನ್ನುಡಿ ತಿದ್ದಿ ಮುಗಿಸಿದ ದಿನ ಕೂಡ ಅವರ ವೈಚಾರಿಕ ಪ್ರಜ್ಞೆಯನ್ನು ಪ್ರತಿನಿಧಿಸುವ ಒಂದು ಕಾರ್ಟೂನ್ ಪ್ರಜಾವಾಣಿಯಲ್ಲಿದೆ : ಜಿ.ಎಸ್.ಎಲ್.ವಿ. ರಾಕೆಟ್ ಮೇಲೆ ಹಾರಲಾಗದೆ ಮತ್ತೆ ಭೂಮಿಗೆ ಮರಳಿಬಂದ ಘಟನೆ ಕುರಿತು ಮಹಮ್ಮದರ ಶ್ರೀ ಸಾಮಾನ್ಯ ಮಹಿಳೆ ಕುಂಕುಮಧಾರಿ ವಿಜ್ಞಾನಿಗೆ ಹೇಳುತ್ತಾಳೆ : “ಮಂತ್ರಿಸಿದ ನಿಂಬೇ ಹಣ್ಣಿನ ಬದಲು ಒಂದೆರಡು ಉಳ್ಳಾಗಡ್ಡಿಗಳನ್ನು ಕಟ್ಟಿದ್ದರೆ ಖಂಡಿತಾ ಅದು ಗಗನಕ್ಕೆ ಹಾರಿರೋದು!” -ಈ ವ್ಯಂಗ್ಯಚಿತ್ರ ಮೂಢನಂಬಿಕೆಗೆ ತುತ್ತಾದ ಭಾರತದ ಜಡ ವಿಜ್ಞಾನಿಗಳನ್ನೂ ಗಗನಕ್ಕೇರಿರುವ ಈರುಳ್ಳಿ ಬೆಲೆಯನ್ನೂ ಒಂದೇ ಬಾಣದಿಂದ ತಿಳಿಯುತ್ತದೆ. ಈ ತಿವಿತ ಏಕಕಾಲಕ್ಕೆ ಕಿಲುಬುಗಟ್ಟಿದ ನಂಬಿಕೆಗಳ ಲೋಕವನ್ನೂ ದಿನನಿತ್ಯದ ಆರ್ಥಿಕ ಸಮಸ್ಯೆಯನ್ನೂ ಗುರಿಯಾಗಿಟ್ಟುಕೊಂಡಿದೆ. ಈ ಬಗೆಯಲ್ಲಿ ವಿವಿಧ ಆಯಾಮಗಳುಳ್ಳ ಸಾವಿರಾರು ಕಾರ್ಟೂನುಗಳನ್ನು ಮಹಮ್ಮದ್ ನಮಗೆ ಕೊಟ್ಟಿದ್ದಾರೆ. ಅವರ ಕಾರ್ಟೂನ್ ಕಣ್ಣು ದಿನನಿತ್ಯದ ಬಗೆಬಗೆಯ ವಿರೋಧಾಭಾಸಗಳನ್ನೂ ಗಮನಿಸುತ್ತಿರುತ್ತದೆ; ಹಾಗೆಯೇ ಎಲ್ಲ ಬಗೆಯ ಹಿಂಸೆಗಳನ್ನೂ ಗ್ರಹಿಸುತ್ತಿರುತ್ತದೆ. ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುವ ಭಯೋತ್ಪಾದನೆಯಂತೆ, ಇಸ್ಲಾಂ ಧರ್ಮದ ಹೆಸರಿನಲ್ಲಿ ನಡೆಯುವ ಭಯೋತ್ಪಾದನೆ, ಬುಶ್ ಭಯೋತ್ಪಾದನೆಗಳೂ ಅವರ ಕಾರ್ಟೂನಿನಲ್ಲಿ ಟೀಕೆ ಗೊಳಗಾಗುತ್ತವೆ. ದಿನನಿತ್ಯದ ಪ್ರಶ್ನೆಗಳಂತೆ ವ್ಯಾಪಕ ಜಾಗತಿಕ ಪ್ರಶ್ನೆಗಳೂ ಅಲ್ಲಿ ವ್ಯಾಖ್ಯಾನಕ್ಕೊಳಗಾಗುತ್ತವೆ. ನಿತ್ಯದ ಸಮಸ್ಯೆಗಳ ಹಿಂದೆ ಇರುವ ಜಾಗತಿಕ ಶಕ್ತಿಗಳ ಕೈವಾಡವನ್ನೂ ಮಹಮ್ಮದ್ ಗಮನಿಸುತ್ತಿರುತ್ತಾರೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಹಾಗೂ ಭಾರತಗಳೆರಡನ್ನೂ ಆಡಿಸುತ್ತಿರುವ ಅಮೆರಿಕಾದ ಸೂತ್ರದಾರ ಕೈಗಳನ್ನೂ ಅವರ ಕಾರ್ಟೂನು ನಮಗೆ ಕಾಣಿಸುತ್ತದೆ; ಹಾಗೆಯೇ ಭಾರತವನ್ನು ಒಳಗಿನಿಂದಲೇ ಹಿಂಸಿಸುತ್ತಿರುವ ವಿವಿಧ ಸೇನೆಗಳ ಬೇನೆಗಳನ್ನೂ ಹೆಕ್ಕಿ ತೋರಿಸುತ್ತಿರುತ್ತದೆ. ಹಾಗೆ ನೋಡಿದರೆ, ಈ ಸಂಕಲನದಲ್ಲಿರುವ ಕಾರ್ಟೂನುಗಳು ಮಹಮ್ಮದ್ ಅವರ ಕಲೆ ಇವತ್ತು ತಲುಪಿರುವ ವಿಶಿಷ್ಟ ಹಂತವನ್ನು ಹಾಗೂ ಸಾಧಿಸಿರುವ ತೀವ್ರ ಮೊನಚನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತಿವೆಯೆಂದು ಹೇಳಲಾಗದು. ಎಲ್ಲ ಮಾನವ ಪ್ರತಿಕ್ರಿಯೆಗಳಂತೆ ಕಾರ್ಟೂನುಗಳು ಕೂಡ ಕಾಲದ ಓಟದಲ್ಲಿ ತಮ್ಮ ಹೊಳಪನ್ನು ಕಳೆದುಕೊಳ್ಳುವುದು ಇದಕ್ಕೆ ಒಂದು ಕಾರಣ. ಜೊತೆಗೆ, ಪ್ರಜಾವಾಣಿಯ ಕಾರ್ಟೂನುಗಳು ಈ ಸಂಕಲನದಲ್ಲಿಲ್ಲದಿರುವುದು ಮತ್ತೊಂದು ಕಾರಣ. ಮುಂದೆ ಬರಲಿರುವ ಅವರ ಪ್ರಜಾವಾಣಿ ಕಾರ್ಟೂನುಗಳಿಗೆ ಕರ್ಟನ್ರೈಸರ್ ಎಂಬಂತೆ, ಸುಧಾ, ಮುಂಗಾರು, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಪ್ರಕಟಗೊಂಡ ಈ ವ್ಯಂಗ್ಯಚಿತ್ರಗಳ ಆಯ್ದ ಸಂಕಲನವನ್ನು ನೋಡಬೇಕು. ಆದರೂ ಮಹಮ್ಮದರ ವಿಮರ್ಶಾ ಗುಣ ಹಾಗೂ ವಿಟ್ನ ಅನೇಕ ಹೊಳಹುಗಳು ಈ ಸಂಕಲನದಲ್ಲೂ ಹೇರಳವಾಗಿವೆ.

ಕನ್ನಡದ ಮತ್ತೊಬ್ಬ ಪ್ರಖ್ಯಾತ ವ್ಯಂಗ್ಯಚಿತ್ರಕಾರ ಆರ್.ಮೂರ್ತಿಯವರಂತೆ ಮಹಮ್ಮದ್ ಕೂಡ ಕನ್ನಡ ಹಾಗೂ ಇಂಗ್ಲಿಷ್ – ಎರಡೂ ಭಾಷೆಗಳ ಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಾರೆ : ಈ ಎರಡೂ ಭಾಷೆಗಳ ಬಳುಕುಗಳು, ಧ್ವನಿಶಕ್ತಿ, ಭಾಷಿಕ ಸಾಧ್ಯತೆಗಳ ಬಗೆಗೆ ಅವರು  ತೋರುವ ಎಚ್ಚರ ಕೂಡ ವಿಶೇಷವಾದದ್ದು. ಅನೇಕ ಸಲ ಒಂದು ಭಾಷೆಯಲ್ಲಿ ನಡೆಯುವ ಶಬ್ದಗಳ ಆಟವನ್ನು ಆ ಭಾಷೆಯ ಜಾಯಮಾನದ ಜಾಡು ಹಿಡಿದೇ ಗ್ರಹಿಸಬೇಕಾಗುತ್ತದೆ. ಉದಾಹರಣೆಗೆ, ಈ ಪುಸ್ತಕದ ವ್ಯಂಗ್ಯಚಿತ್ರವೊಂದರಲ್ಲಿ ಸೋನಿಯಾಗಾಂಧಿಯವರು ಚಿದಂಬರಂ ಹಾಗೂ ಮನಮೋಹನಸಿಂಗ್ ಅವರನ್ನು ಕುರಿತು `ಥ್ಯಾಂಕ್ಸ್ ಫಾರ್ ಸಪೋರ್ಟಿಂಗ್ ದಿ ಬಿಲ್’ ಎನ್ನುತ್ತಾರೆ. ಅದಕ್ಕೆ ಉತ್ತರವಾಗಿ ಹಣಕಾಸು ಮಂತ್ರಿ ಚಿದಂಬರಂ, `ಬಟ್ ಹೂ ವಿಲ್ ಫುಟ್ ದ ಬಿಲ್! (ಅದಕ್ಕೆ ಹಣ ಯಾರು ಕೊಡುತ್ತಾರೆ?)’ ಎನ್ನುತ್ತಾರೆ. ಇಲ್ಲಿ ಬಿಲ್ ಎಂಬ ಶಬ್ದಕ್ಕಿರುವ ಕರಡು ಮಸೂದೆ ಮತ್ತು ಬೆಲೆಪಟ್ಟಿ ಎರಡೂ ಅರ್ಥಗಳ ಸುತ್ತ ಆಟವಿದೆ. ಈ ಬಗೆಯ ಭಾಷಿಕ ಆಟ ಮಹಮ್ಮದರ ಕನ್ನಡ ಹಾಗೂ ಇಂಗ್ಲಿಷ್ ಕಾರ್ಟೂನುಗಳೆರಡರಲ್ಲೂ ಇದೆ. ಕನ್ನಡ ಹಾಗೂ ಇಂಗ್ಲಿಷ್ – ಈ ಎರಡೂ ಭಾಷೆಗಳ ಓಟ, ನುಡಿಗಟ್ಟುಗಳನ್ನು ಸೃಜನಶೀಲವಾಗಿ ಬಳಸುತ್ತಾ ಮಹಮ್ಮದ್ ಬೆಳೆಯುತ್ತಿದ್ದಾರೆ. ಈ ಬಗೆಯಲ್ಲಿ ಎರಡು ವಿಭಿನ್ನ ಭಾಷೆಗಳನ್ನು ಸಾಕಷ್ಟು ದಕ್ಷವಾಗಿ ಬಳಸುವ ಶಕ್ತಿ ಭಾರತದ ಅನೇಕ ವ್ಯಂಗ್ಯಚಿತ್ರಕಾರರಿಗಿರಲಾರದು.

ನಾನು ಹದಿಹರಯದಿಂದಲೂ ಗಮನಿಸಿರುವ ಕನ್ನಡ ವ್ಯಂಗ್ಯಚಿತ್ರಕಾರರಲ್ಲಿ ಆರ್.ಮೂರ್ತಿಯವರನ್ನು ಬಿಟ್ಟರೆ ಉಳಿದ ಬಹುತೇಕ ಕನ್ನಡ ವ್ಯಂಗ್ಯಚಿತ್ರಕಾರರು ವಿಚಿತ್ರ ಏರಿಳಿತಗಳನ್ನು ಕಂಡಿದ್ದಾರೆ. ಕೆಲವರು ಆಯಾ ಪತ್ರಿಕೆಗಳ ಕಾಲಕಾಲದ ರಾಜಕೀಯ ನಿಲುವುಗಳಿಗೆ ಅನುಗುಣವಾಗಿ ವ್ಯಂಗ್ಯಚಿತ್ರ ಬರೆಯಲು ಹೋಗಿ ತಮ್ಮ ಕೈ ಕತ್ತರಿಸಿಕೊಂಡಿದ್ದಾರೆ. ಕೆಲವರು ತಮ್ಮ ಮತೀಯ ವಿಷ, ಜಡ ಐಡಿಯಾಲಜಿಗಳನ್ನು ವ್ಯಂಗ್ಯಚಿತ್ರಗಳಲ್ಲಿ ತುಂಬಿ ತಾವೂ ಪತನಗೊಂಡು ಓದುಗರ ಅಭಿರುಚಿಯನ್ನೂ ಕೆಡಿಸಿ ನಶಿಸಿದ್ದಾರೆ. ಇನ್ನು ಕೆಲವರು ಕನ್ನಡ ಹಾಸ್ಯ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಕಾಣಬರುವ ಮಧ್ಯಮ ವರ್ಗದ ಬ್ರಾಹ್ಮಣೀಯ ಹಾಸ್ಯ ಪ್ರಜ್ಞೆಯ ಸೀಮಿತ ಗೆರೆ ದಾಟಲಾಗದೆ ಸ್ಥಗಿತಗೊಂಡಿದ್ದಾರೆ. ಆದರೆ ಮಹಮ್ಮದ್ ಮಾತ್ರ ಈ ಬಗೆಯ ಅನೇಕ ಅಪಾಯಗಳಿಂದ ಪಾರಾಗಲೆತ್ನಿಸಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಸಾಧ್ಯವಾದಷ್ಟೂ ವಸ್ತುನಿಷ್ಠವಾಗಿ ಭಾರತದ ಘಟನಾವಳಿಗಳಿಗೆ ಪ್ರತಿಕ್ರಿಯಿಸಿರುವ ಆರ್.ಕೆ.ಲಕ್ಷ್ಮಣ್ರಂತೆ ಮಹಮ್ಮದ್ ಕೂಡ ಕರ್ನಾಟಕದ ಹಾಗೂ ಒಟ್ಟಾರೆ ಜಗತ್ತಿನ ವಿದ್ಯಮಾನಗಳನ್ನು ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜನತಾದಳ, ಕಮ್ಯುನಿಸ್ಟ್, ಆರೆಸ್ಸೆಸ್ ಮುಂತಾಗಿ ಎಲ್ಲ ಪಕ್ಷಗಳ ನಾಯಕರೂ ಮಹಮ್ಮದರ ಕಾರ್ಟೂನುಗಳಿಂದ ಛೇಡಿಸಿಕೊಂಡಿದ್ದಾರೆ. ಅವರಲ್ಲಿ ಅಷ್ಟಿಷ್ಟು ಸೂಕ್ಷ್ಮತೆಯಿರುವ ಕೆಲವರಾದರೂ ಮಹಮ್ಮದರ ಕನ್ನಡಿ ನುಡಿದ ಸತ್ಯವನ್ನು ಕಂಡು ಬೆಚ್ಚಿ ಅಥವಾ ಮೆಚ್ಚಿ `ಅಹುದಹುದು’ ಎಂದುಕೊಂಡಿರಲೂ ಬಹುದು; ಅಥವಾ ಆ ಸತ್ಯವನ್ನು ಒಪ್ಪಲಾಗದೆ ಸಿಡಿಮಿಡಿಗೊಂಡು ಫ್ಯಾಸಿಸ್ಟರಂತೆ ಚೀರಿರಬಹುದು. ಕಹಿಸತ್ಯಗಳು ಹಾಗೂ ಕಟುಸತ್ಯಗಳು ಎಂಥವರನ್ನೂ ಒಂದಲ್ಲ ಒಂದು ಗಳಿಗೆಯಲ್ಲಿ ಸ್ಪರ್ಶಿಸುವ ಸಾಧ್ಯತೆ ಇದ್ದೇ ಇರುತ್ತದೆ. ಮಹಮ್ಮದ್ ಅಪಾರ ಸಾಮಾಜಿಕ ಕಾಳಜಿಯಿಂದ, ನಿಸ್ವಾರ್ಥದಿಂದ ದಿನನಿತ್ಯ ಎತ್ತುವ ಪ್ರಶ್ನೆಗಳನ್ನು ಜಡ ಹಾಗೂ ನೀಚ ರಾಜಕಾರಣಿಗಳು, ಮನೆಮುರುಕರು ಒಪ್ಪದಿರಬಹುದು. ಆದರೆ ಅಂಥವರನ್ನು ಕಂಡು ನಿತ್ಯ ಅಸಹ್ಯಪಡುವ ಲಕ್ಷಾಂತರ ಓದುಗರು ಆ ಪ್ರಶ್ನೆಗಳನ್ನೂ ಆ ಪ್ರಶ್ನೆಗಳ ಹಿಂದಿರುವ ಸತ್ಯವನ್ನೂ ಒಪ್ಪುತ್ತಲೇ ಇರುತ್ತಾರೆ; ಮಹಮ್ಮದರ ವಿಮರ್ಶಾತ್ಮಕ ಅಭಿಪ್ರಾಯವನ್ನು ಬೆಂಬಲಿಸುತ್ತಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ, ಮಹಮ್ಮದ್ ದಿನನಿತ್ಯ ರೂಪಿಸುವ ಆರೋಗ್ಯಕರ ಜನಾಭಿಪ್ರಾಯದಷ್ಟೇ ಅವರಿಗೆ ಈ ಬಗೆಯ ಅಭಿಪ್ರಾಯ ರೂಪಿಸಲು ಕನ್ನಡದ ಅತಿಮುಖ್ಯ ದಿನಪತ್ರಿಕೆಯಾದ ಪ್ರಜಾವಾಣಿ ಕೊಟ್ಟಿರುವ ಅವಕಾಶ ಹಾಗೂ ಸ್ವಾತಂತ್ರ್ಯ ಕೂಡ ವಿಶಿಷ್ಟವಾದದು.

ನಮ್ಮ  ಈ ಕಾಲದಲ್ಲಿ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿರುವ  ಕೋಮುವಾದ ವಿರೋಧಿ ಚಿಂತನೆ, ಜಾತ್ಯತೀತ ನೋಟ, ವೈಚಾರಿಕ ಪ್ರಜ್ಞೆ ಹಾಗೂ ದಿನನಿತ್ಯದ ಸಾಮಾಜಿಕ ಹಾಗೂ ರಾಜಕೀಯ ವಿಮಶರ್ೆಗೆ ನಿರಂತರ ಒಳನೋಟಗಳು ಹಾಗೂ ಕ್ಷಿಪ್ರ ವ್ಯಾಖ್ಯಾನಗಳನ್ನು ಕೊಡುತ್ತಿರುವ ಮಹಮ್ಮದರ ಕಾರ್ಟೂನುಗಳು ಕರ್ನಾಟಕ ಸಂಸ್ಕೃತಿಗೆ ಅಮೂಲ್ಯವಾದ ಕೊಡುಗೆಗಳಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ, ನಿಸ್ವಾರ್ಥದಿಂದ ಸುತ್ತಲಿನ ವಿದ್ಯಮಾನಗಳನ್ನು ಗಮನಿಸುತ್ತಾ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಮಹಮ್ಮದರ ವ್ಯವಸ್ಥೆಯ ವಿರೋಧದ ಗುಣ ಹಾಗೂ ಪ್ರಾಮಾಣಿಕತೆ ನಮ್ಮಲ್ಲಿ ಸದಾ ಉಳಿಯುತ್ತವೆ. ಕ್ರಿಯಾಶಾಲಿ ಬುದ್ಧಿಜೀವಿಯೊಬ್ಬ ಎಲ್ಲ ವಿದ್ಯಮಾನಗಳನ್ನೂ ಗಮನಿಸುತ್ತಾ ಕ್ಷಣಕ್ಷಣಕ್ಕೂ ಪ್ರತಿಕ್ರಿಯಿಸುತ್ತಿರಬೇಕಾಗುತ್ತದೆ ಎಂಬ ಬಗ್ಗೆ ಅವರ ಕಾರ್ಟೂನುಗಳು ನಮ್ಮನ್ನು ಎಚ್ಚರಿಸುತ್ತಿರುತ್ತವೆ. ಮಹಮ್ಮದರ ಮಹತ್ವಾಕಾಂಕ್ಷೆಯ ಪ್ರಜಾವಾಣಿ ವ್ಯಂಗ್ಯಚಿತ್ರಗಳ ಸಂಕಲನ ಮುಂದೊಮ್ಮೆ ಬರಲಿದೆ. ಇದೀಗ ನಿಮ್ಮ ಕೈಯಲ್ಲಿರುವ ಅವರ ಕೆಲವು ಆಯ್ದ ವ್ಯಂಗ್ಯಚಿತ್ರಗಳನ್ನು ಎದುರಿಗಿಟ್ಟುಕೊಂಡು ಒಬ್ಬ ಓದುಗನಾಗಿ ನಾನು ಬರೆದಿರುವ ಮಾತುಗಳು ಕೇವಲ ಈ ಸಂಕಲನಕ್ಕೆ ಮಾತ್ರವಲ್ಲದೆ ಮಹಮ್ಮದ್ ಅವರ ಒಟ್ಟು ಕಾರ್ಟೂನ್ ಲೋಕಕ್ಕೂ ಅವರ ವ್ಯಕ್ತಿತ್ವಕ್ಕೂ ಅನ್ವಯಿಸುತ್ತವೆ ಎಂದುಕೊಂಡಿರುವೆ.

ನಟರಾಜ್ ಹುಳಿಯಾರ್