ಪ್ರಾಣಿಜಗತ್ತಿನಲ್ಲಿ ನಗಬಲ್ಲ ಪ್ರಾಣಿಯೆಂದರೆ ಮನುಷ್ಯ ಮಾತ್ರ. ಅದೇ ರೀತಿ ಅಸಮಾನತೆಯ ಪಟ್ಟು ಹಿಡಿಯುವ ಪ್ರಾಣಿ ಕೂಡಾ ಮನುಷ್ಯ ಮಾತ್ರ, ಇನ್ನೊಂದು ವೈಶಿಷ್ಟ್ಯವೆಂದರೆ, ವ್ಯಂಗ್ಯದ ನಗು ತರಿಸುವಂತದ್ದು ಈ ಅಸಮಾನತೆಯೇ. ಹೀಗಂದಿದ್ದರು ಭಾರತದ ಪ್ರಖ್ಯಾತ ವ್ಯಂಗ್ಯ ಚಿತ್ರಕಾರ ಅಬು ಅಬ್ರಹಾಂ. ಬಹುಶಃ ಅಣಕ ಅಥವಾ ವ್ಯಂಗ್ಯ ಮಾನವ ಸಮಾಜದಲ್ಲಿ ಅಸಮಾನತೆ ಹಣಿಕಿ ಹಾಕಿದಂದಿನಿಂದಲೂ ಮನುಕುಲದ ಬೆಳವಣಿಗೆಯ ಅವಿಭಾಜ್ಯ ಅಂಗವಾಗಿಯೇ ಬಂದಿದೆ. ವ್ಯಂಗ್ಯ ಚಿತ್ರ ಮಾತ್ರ ಆಧುನಿಕ ಜಗತ್ತಿನ ಉತ್ಪನ್ನ. ಈಗಂತೂ ಅದು ಪತ್ರಿಕೆಗಳಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವದಲ್ಲಿಯೂ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿದೆ- oppositional space ಅಂದರೆ ವಿರೋಧದ ಅವಕಾಶ. ಕೆಲವೊಮ್ಮೆ ಈ ವಿರೋಧ ಅದನ್ನು ಪ್ರಕಟಿಸುವ ಪತ್ರಿಕೆಯ ನಿಲುವಿಗೂ ವಿರುದ್ಧವಾಗಿ ಕಂಡುಬಂದರೆ ಆಶ್ಚರ್ಯಪಡಬೇಕಾಗಿಲ್ಲ. ಹೀಗೆ ವ್ಯಂಗ್ಯಚಿತ್ರಕಾರರು ಅಥವ ಕಾರ್ಟೂನಿಸ್ಟರದ್ದು ನಮ್ಮ ಸಮಾಜದಲ್ಲಿ ಒಂದು ವಿಶಿಷ್ಟ ಪಾತ್ರ.

`ವ್ಯಂಗ್ಯ ಚಿತ್ರಕಾರರು ಬಂಡಾಯ ನೆಲೆಯ ಚಿಂತನೆಯನ್ನು ಹೊಂದಿದ್ದು, ಕಲೆಯನ್ನು ಪ್ರತಿಭಟನೆಯ ಅಸ್ತ್ರವಾಗಿ ಸಮರ್ಥವಾಗಿ ಪ್ರಯೋಗಿಸಿದ ಪರಂಪರೆಯನ್ನು ಉಳ್ಳವರು. ಒಂದು ರೀತಿಯಲ್ಲಿ ವ್ಯಂಗ್ಯ ಚಿತ್ರಕಾರರು ನಿಜವಾದ ಜವಾಬ್ದಾರಿಯುತ ಜನವಾದಿ ಕಲಾವಿದರು’ ಎಂದು ಇತ್ತೀಚೆಗೆ ಹೇಳಿದ ಪಿ. ಮಹಮ್ಮದ್ ಕರ್ನಾಟಕದಲ್ಲಿ ಇಂತಹ ವಿಶಿಷ್ಟ ಪಾತ್ರವನ್ನು ವಹಿಸಿರುವವರಲ್ಲಿ ಅಗ್ರಗಣ್ಯರೆಂದರೆ ತಪ್ಪಾಗದು. ಅವರು ಹೇಳಿದ ಮಾತುಗಳು ಕಾರ್ಟೂನಿಸ್ಟ್ ಎನಿಸಿಕೊಳ್ಳುವ ಎಲ್ಲರಿಗೂ ಅನ್ವಯವಾಗಲಿಕ್ಕಿಲ್ಲ. ಆದರೆ ಅವರಿಗೆ ಮಾತ್ರ ಪೂರ್ಣವಾಗಿ ಅನ್ವಯವಾಗುತ್ತದೆ. ಸಾಕಷ್ಟು ವ್ಯಂಗ್ಯಚಿತ್ರಗಳಲ್ಲಿ ಹಾಸ್ಯದ ಹೆಸರಿನಲ್ಲಿ ಇರುವುದು ಅಪಹಾಸ್ಯ; ನಿಜವಾದ ರಾಜಕೀಯ ವ್ಯಂಗ್ಯಚಿತ್ರಗಳಂತೂ ಕಡಿಮೆ, ಅದರಲ್ಲೂ ನಿರ್ದಿಷ್ಟವಾದ, ಜನಪರವಾದ, ಪ್ರಜಾಸತ್ತಾತ್ಮಕ ನಿಲುವು ಅಪರೂಪವೇ. ಕರ್ನಾಟಕದಲ್ಲಿ ಪಿ.ಮಹಮ್ಮದ್ ಅಂತಹ ಅಪರೂಪದ ವ್ಯಂಗ್ಯಚಿತ್ರಕಾರರು. ಪ್ರತಿದಿನ ಮುಂಜಾನೆ `ಪ್ರಜಾವಾಣಿ’ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ ಓದುಗರ ಕಣ್ಣು ತಮಗರಿವಿಲ್ಲದೆಯೇ ಮೊದಲು ಹುಡುಕುವುದು ಅವರ ಕಾರ್ಟೂನನ್ನು. ಕಳೆದ ಐದು ವರ್ಷಗಳ ಕನರ್ಾಟಕದ ರಾಜಕೀಯ ಅವನತಿಯನ್ನು ಅವರಷ್ಟು ಸಮರ್ಥವಾಗಿ, ಮಾರ್ಮಿಕವಾಗಿ ಮತ್ತು `ಸುಂದರ’ವಾಗಿಯೂ ಬಿಂಬಿಸಿದವರು ಬೇರೊಬ್ಬರಿಲ್ಲ. ಸಹಜವಾಗಿಯೇ ಇಲ್ಲೂ ಒಂದು ವ್ಯಂಗ್ಯವಿದೆ. ಅವರ ಈ ಕೃತಿಗಳು ಅವನ್ನು ನೋಡಿದ ದಿನದೊಂದಿಗೇ ಕಣ್ಮರೆಯಾಗದೆ ಸದಾ ಕಣ್ಮುಂದೆ ಇರುವಂತೆ, ಕರ್ನಾಟಕದ ಒಂದು ಸಾಂಸ್ಕೃತಿಕ ದಾಖಲೆಯಾಗುವಂತೆ ಅವನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಬೇಕು ಎಂಬ ನಮ್ಮ ಆಶಯದ ಫಲವೇ ಅವರ ಆಯ್ದ ವ್ಯಂಗ್ಯಚಿತ್ರಗಳ ಈ ಸಂಕಲನ. ನಿಜ, ಇದು ನಾವು ಆರಂಭದಲ್ಲಿ ಬಯಸಿದಂತೆ ಕಳೆದ ಕೆಲವು ವರ್ಷಗಳ ಕರ್`ನಾಟಕ’ದ ಪ್ರಾತಿನಿಧಿಕ ಸಂಗ್ರಹವಾಗಿಲ್ಲ, ಏಕೆಂದರೆ `ಪ್ರಜಾವಾಣಿ’ಯಲ್ಲಿ ಪ್ರಕಟವಾದ ಅವರ ಮಹತ್ವದ ಕಾರ್ಟೂನುಗಳನ್ನು ಇಲ್ಲಿ ಸೇರಿಸಿಕೊಳ್ಳುವುದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಆದರೆ ಅದೇ ಬಳಗದ `ಸುಧಾ’ ಮತ್ತು `ಡೆಕ್ಕನ್ ಹೆರಾಲ್ಡ್’ನಲ್ಲಿ ಪ್ರಕಟವಾದ, ಅದಕ್ಕೆ ಮೊದಲು `ಮುಂಗಾರು’ನಲ್ಲಿ ಪ್ರಕಟವಾದ ಅವರ ಕೆಲವು ಅತ್ಯುತ್ತಮ ಕಾರ್ಟೂನುಗಳನ್ನೊಳಗೊಂಡಿರುವ ಈ ಮೊದಲ ಪೂರ್ಣಪ್ರಮಾಣದ ಸಂಕಲನವನ್ನು ನಿಮ್ಮ ಮುಂದಿಡುವ ಹೆಮ್ಮೆ ನಮ್ಮದು. ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಪಿ.ಮಹಮ್ಮದ್ ಅವರಿಗೆ ನಮ್ಮ ಹಾರ್ದಿಕ ಕೃತಜ್ಞತೆಗಳು.

ಈ ಸಂಗ್ರಹಕ್ಕೆ ಮುನ್ನುಡಿ ಬರೆದು ಕೊಡಲು ಸಂತೋಷದಿಂದ ಒಪ್ಪಿಕೊಂಡ ಡಾ. ನಟರಾಜ್ ಹುಳಿಯಾರ್ ಮಹಮ್ಮದ್ರವರ ಕೊಡುಗೆಯ ಎಲ್ಲಾ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಒಂದು ವಿಶ್ಲೇಷಣೆಯನ್ನು ಕೊಟ್ಟಿದ್ದಾರೆ. ಅಲ್ಲದೆ ಈ ಸಂಗ್ರಹವನ್ನು ಉತ್ತಮಗೊಳಿಸಲು ಸಲಹೆ-ಸೂಚನೆಗಳನ್ನೂ ಕೊಟ್ಟಿದ್ದಾರೆ. ಅವರಿಗೆ ಸಲ್ಲಿಸುವ ಕೃತಜ್ಞತೆ ಔಪಚಾರಿಕತೆಯನ್ನೂ ಮೀರಿದ್ದು.

ಈ ಸಂಕಲನವನ್ನು ಸುಂದರವಾಗಿ ವಿನ್ಯಾಸ ಮಾಡಿಕೊಟ್ಟಿರುವ ಚಂದ್ರಶೇಖರ ಗುಬ್ಬಿಯವರಿಗೆ ಮತ್ತು ಮಹಮ್ಮದ್ ರವರ ಭಾವಚಿತ್ರವನ್ನು ಒದಗಿಸಿದ ಶ್ರೀಧರ ನಾಯಕ್ ರವರಿಗೆ ಹಾಗೂ ಸುಂದರವಾಗಿ ಮುದ್ರಿಸಿ ಕೊಟ್ಟಿರುವ ವಿಶ್ವಾಸ್ ಪ್ರಿಂಟ್ಸ್ ನ ಗೆಳೆಯರಿಗೆ ನಾವು ಕೃತಜ್ಞರು.

ಈ ಪ್ರಯತ್ನ ಕರ್ನಾಟಕದ ಓದುಗರಿಗೆ ಇಷ್ಟವಾಗುತ್ತದೆ, ಮಹಮ್ಮದ್ರವರ `ಪ್ರಜಾವಾಣಿ’ ಕಾರ್ಟೂನುಗಳೂ ಸೇರಿರುವ ಇನ್ನೊಂದು ಸಂಕಲನವನ್ನು ಶೀಘ್ರದಲ್ಲೇ ತರಲು ನೆರವಾಗುತ್ತದೆ ಎಂಬ ನಿರೀಕ್ಷೆಗೆ ನಾವೂ ದನಿಗೂಡಿಸುತ್ತೇವೆ.

Advertisements