ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕೊಡಲ್ಪಡುವ ಪಿ ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ* 2016 ನೇ ಸಾಲಿನಲ್ಲಿ ಚಿಂತನ ಪುಸ್ತಕ ಪ್ರಕಟಿಸಿರುವ ಎಸ್. ಶಿವಾನಂದ ಅವರು ಬರೆದಿರುವ `ಸಾಹಿತ್ಯ ಮತ್ತು ಸಾಹಿತ್ಯೇತರ’ ಪುಸ್ತಕಕ್ಕೆ ದೊರಕಿದೆ.

*       ಡಾ. ಸುಮತೀಂದ್ರ ನಾಡಿಗ ಮತ್ತು ಶ್ರೀಮತಿ ಮಾಲತಿ ನಾಡಿಗ ಅವರು ದಿ. ಪಿ. ಶ್ರೀನಿವಾಸರಾವ್ ಅವರ ಹೆಸರಿನಲ್ಲಿ ಅಕಾಡೆಮಿಗೆ ರೂ 50,000 (ಐವತ್ತು ಸಾವಿರಗಳು ಮಾತ್ರ) ಮೊಬಲಗನ್ನು ದತ್ತಿನಿಧಿಯಾಗಿ ನೀಡಿದ್ದಾರೆ. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು, ಅದರಿಂದ ಬರುವ ಬಡ್ಡಿಯಲ್ಲಿ ರೂ 5,000 ಮೊಬಲಗನ್ನು `ಪುಸ್ತಕ ಬಹುಮಾನ ಯೋಜನೆ’ಯ ನಿಯಮಗಳ ಅನುಸಾರ ಪ್ರತಿವರ್ಷ `ಸಾಹಿತ್ಯ ವಿಮರ್ಶೆ’ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ `ಪುಸ್ತಕ ಬಹುಮಾನ ಯೋಜನೆ’ ಯಲ್ಲಿಯ 8ನೇ ಸಾಹಿತ್ಯ ಪ್ರಕಾರವಾದ `ಸಾಹಿತ್ಯ ವಿಮರ್ಶೆ’ಯೇ ಆಗಿರುತ್ತದೆ. ಈ ಬಹುಮಾನವನ್ನು `ಪಿ. ಶ್ರೀನಿವಾಸರಾವ್ ಸ್ಮಾರಕ ಬಹುಮಾನ’ ಎಂದು ಕರೆಯಲಾಗುವುದು.

ಈ ಪುಸ್ತಕದ ಕುರಿತು :

ಶೀರ್ಷಿಕೆ : ಸಾಹಿತ್ಯ ಮತ್ತು ಸಾಹಿತ್ಯೇತರ ಲೇಖಕರು : ಎಸ್.ಶಿವಾನಂದ ಪ್ರಕಾಶಕರು: ಚಿಂತನ ಪುಸ್ತಕ ಪ್ರಕಟಣಾ ವರ್ಷ: 2016 ಪುಟಗಳು:300 ಬೆಲೆ:ರೂ.230/-

ದಲಿತ-ಬಂಡಾಯ ಸಾಹಿತ್ಯ ವಿಮರ್ಶೆಗೆ ಬೇಕಾದ ಹಾದಿಯನ್ನು ರೂಪಿಸಿದ ಪ್ರಮುಖರಲ್ಲಿ ಎಸ್.ಶಿವಾನಂದ ಒಬ್ಬರು. ೧೯೯೧ ರಲ್ಲಿ ಪ್ರಕಟವಾದಾಗ ಸಂಚಲನ ಮೂಡಿಸಿದ ಶಿವಾನಂದ ಅವರ ‘ವಿಮರ್ಶೆಯ ಸವಾಲು’ಪುಸ್ತಕದ ಪರಿಷ್ಕೃತ ಆವೃತ್ತಿಯನ್ನು ಚಿಂತನ ಪುಸ್ತಕ ಪ್ರಕಟಿಸಿತ್ತು.  ವಿಮರ್ಶೆಯ ಪ್ರಾಕಾರದಲ್ಲಿ ಇದು ಅವರ ಎರಡನೇ ಕೃತಿ. ಇದು ಅವರು ಕಳೆದ ಕಾಲು ಶತಮಾನದಲ್ಲಿ ಆಗಾಗ ಬರೆದ ಹಲವು ಲೇಖನಗಳ ಸಂಗ್ರಹ.

ಶಿವಾನಂದ್ ಅವರ ವಿಮರ್ಶಾತ್ಮಕ ಲೇಖನಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾದದ್ದಲ್ಲ. ಕಳೆದ ಕೆಲವು ದಶಕಗಳಿಂದ ಬಹುಚರ್ಚಿತ ವಿಷಯವಾದ ‘ಸೆಕ್ಯುಲರ್ ವಾದ’, ‘ಆಧುನಿಕೋತ್ತರ ವಾದ’, ‘ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ, ರಾಜಕೀಯ ಮೌಲ್ಯಗಳು’ ಇವೇ ಮುಂತಾದವುಗಳ ಕುರಿತಾದ ವಿಮರ್ಶಾ ಲೇಖನಗಳನ್ನು ಇವರು ಬರೆದಿದ್ದಾರೆ. ಆದ್ದರಿಂದಲೇ ಈ ಪುಸ್ತಕ ಬರಿಯ ಕನ್ನಡ ಸಾಹಿತ್ಯ ವಿಮರ್ಶಾ ಕೃತಿಯಲ್ಲ. ಶೀರ್ಷಿಕೆ ಹೇಳುವಂತೆ ಇದು ‘ಸಾಹಿತ್ಯ ಮತ್ತು ಸಾಹಿತ್ಯೇತರ’ ವಿಮರ್ಶೆಗಳ ಸಂಗ್ರಹ.

ಈ ಪುಸ್ತಕಕ್ಕೆ ಮುನ್ನುಡಿಯನ್ನು ಕನ್ನಡದ ಪ್ರಸಿದ್ಧ ಸಂಸ್ಕೃತಿ ಚಿಂತಕರು, ವಿಮರ್ಶಕರು, ಲೇಖಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ಕತ್ತಿಯಂಚಿನ ದಾರಿ’ ಕೃತಿಯ ಲೇಖಕರು ಆದ ರಹಮತ್ ತರೀಕೆರೆಯವರು ಬರೆದಿದ್ದಾರೆ.