Cover_Design 04ಇದೊಂದು ವಿಶಿಷ್ಟ ರೀತಿಯ ಸಂಕಲನ. ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ‘ವಿಶೇಷ ಮಕ್ಕಳು’ ಅಂದರೆ ಮಾನಸಿಕ ಬೆಳವಣಿಗೆಯ ಸಮಸ್ಯೆಗಳಿರುವ ಮಕ್ಕಳ ನಡುವೆ, ಅವರ ಪೋಷಕರ ನಡುವೆ ಕೆಲಸ ಮಾಡಿರುವ ಒಬ್ಬ ಮನೋಶಾಸ್ತ್ರಜ್ಞೆಯ ಐದು ಅನುಭವ ಕಥನಗಳ ಸಂಕಲನ ಇದು.

ವಿವಿಧ ರೀತಿಯ ದೀರ್ಘಕಾಲದ ದೈಹಿಕ, ಮಾನಸಿಕ, ಬೌದ್ಧಿಕ ಅಥವಾ ಇಂದ್ರಿಯಗಳ ದೌರ್ಬಲ್ಯವಿರುವ ವ್ಯಕ್ತಿಗಳೂ ಸಹ ಸಮಾಜಕ ಮುಖ್ಯವಾಹಿನಿಗೆ ಸೇರಲು ಸಾಧ್ಯ ಎಂದು ಪ್ರತಿಪಾದಿಸುವ ಲೇಖಕಿ ಅದನ್ನು ತನ್ನ ಪುಸ್ತಕಗಳಲ್ಲಿ ವಿವರಸಿದ ೫ ಕಥನಗಳಲ್ಲಿ ಪ್ರಮಾಣ ಸಹಿತ ತೋರಿಸಿದ್ದಾರೆ.
ಈ ಪುಸ್ತಕದಲ್ಲಿ ೫ ಕಥನಗಳಿವೆ. ಈ ಎಲ್ಲಾ ಕಥನಗಳಲ್ಲಿ ವಿವಿಧ ರೀತಿಯ ವಿಕಲತೆಯನ್ನು ಹೊಂದಿರುವ ವ್ಯಕ್ತಿಗಳ ಸಾಧನೆ (ಸಹಜವಾಗಿಯೇ ಅವರ ಸಮೀಪವರ್ತಿಗಳ ಸಹಕಾರ, ಪ್ರೋತ್ಸಾಹದಿಂದಾಗಿ)ಗಳನ್ನು ಲೇಖಕಿ ವಿವರಿಸಿದ್ದಾರೆ. ಇದು ಸಾಧ್ಯ ಅನ್ನುವಾಗ ಅವರು ಯಾವುದನ್ನೂ ಅತಿರಂಜಿಸಿ ಹೇಳಿಲ್ಲ. ಈ ಸಾಧನೆಯ ದಾರಿಯಲ್ಲಿ 4 ಹಜ್ಜೆ ಮುಂದಿಟ್ಟು 2 ಹೆಜ್ಜೆ ಹಿಂದಿಟ್ಟ ಸಂದರ್ಭಗಳು ಇದ್ದಂತೆಯೇ  2  ಜ್ಜೆ ಮುಂದಿಟ್ಟು 4 ಹೆಜ್ಜೆ ಹಿಂದಿಟ್ಟ ಸಂದರ್ಭಗಳೂ ಇವೆ. ಆದ್ದರಿಂದ ಬಹುಶಃ ಲೇಖಕಿ ಪ್ರತಿಪಾದಿಸುವ ಸಾಧ್ಯವನ್ನು ನಾವು ನಂಬಬಹುದಾಗಿದೆ. ಹಾಗೆಯೇ ಈ ಸಮಸ್ಯೆಯನ್ನು ಹೊಂದಿದ ವ್ಯಕ್ತಿಗಳು ಈ ಸಾಧ್ಯದ ಬಗ್ಗೆ ವಿಶ್ವಾಸದಿಂದ ಮುನ್ನಡೆಯಬಹುದಾಗಿದೆ.

ಶ್ರೀಮತಿ ಚಂಪ ಜೈಪ್ರಕಾಶ್, ನ್ಯೂನತೆಗಳ (disabilities) ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಮೀರಿದ ಅನುಭವ ಉಳ್ಳವರು. ಮೈಸೂರು ವಿಶ್ವವಿದ್ಯಾಲಯದಿಂದ ಮನಶ್ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಕೊಯಮತ್ತೂರಿನ ಸ್ಪಾಸ್ಟಿಕ್ ಸೊಸೈಟಿಯಲ್ಲಿ ಸ್ವಯಂಸೇವಕರಾಗಿ. ನಂತರ ಹೈದರಾಬಾದಿನ ’ಸ್ವೀಕಾರ್’ ಸಂಸ್ಥೆಯಲ್ಲಿ ಕಲಿಕಾ ನ್ಯೂನತೆಗಳ ವಿಭಾಗದ ಮುಖ್ಯಸ್ಥರಾಗಿ ಐದು ವರ್ಷಗಳ ಕಾಲ ಹತ್ತಾರು ವಿಶೇಷ ಮಕ್ಕಳು ಮತ್ತು ಅವರ ಪೋಷಕರಿಗೆ ಸಲಹೆ  ನೀಡುವ ಕೆಲಸದಲ್ಲಿ ತೊಡಗಿದ್ದರು.
ಅಲ್ಲಿಂದ ಬೆಂಗಳೂರಿಗೆ ಬಂದ ಇವರು ’ಅರುಣ ಚೇತನ’ ಸಂಸ್ಥೆಯಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದರು. ಮತ್ತೆ ಹೈದರಾಬಾದಿಗೆ ಹೋಗಬೇಕಾಗಿ ಬಂದಾಗ ಅಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು, ’ಸುದರ್ಶನ್ ರಿಹೆಬಿಲಿಟೇಶನ್ ಸೆಂಟರ್’ನಲ್ಲಿ ಆಟಿಸಂ ಅಂದರೆ ಸ್ವಲೀನತೆಯ ಸಮಸ್ಯೆಗಳಿರುವ ಮಕ್ಕಳ ನಡುವೆ ಕೆಲಸ ಮಾಡಿದರು. ಮುಂದೆ ಕರ್ನಾಟಕಕ್ಕೆ ಮರಳಿದಾಗ, ಬೆಂಗಳೂರಿನಲ್ಲಿ ’ಧರಿತ್ರಿ’ ಸಂಸ್ಥೆಯಲ್ಲಿ ಸಲಹೆಗಾರರಾಗಿ ಇವರ ವೃತ್ತಿ ಜೀವನ ಮುಂದುವರೆಯಿತು. ಈಗ ವಿಶೇಷ ಮಕ್ಕಳಿಗೆ ತಾನೇ ಒಂದು ಶಾಲೆ ’ಸಾಧ್ಯ’ವನ್ನು ಕೊಯಮತ್ತೂರಿನಲ್ಲಿ ಸದ್ಯದಲ್ಲೇ ತೆರೆಯುವ ಯೋಜನೆ ಹಾಕಿಕೊಂಡಿದ್ದಾರೆ.

Advertisements