ಉದಯವಾಣಿ-ಯಾಹೂ ವರದಿ
https://kannada.yahoo.com/ಮ-ರ-ಕ-ಸ-ವ-ದ-ಎಲ-ಲ-232920028.html

ಮಾರ್ಕ್ಸ್ವಾದ ಎಲ್ಲ ಕಾಲಕ್ಕೂ ಪ್ರಸ್ತುತ

ಬೆಂಗಳೂರು: ಮಾರ್ಕ್ಸ್ವಾದ ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟಿದ್ದಾರೆ.

ಚಿಂತನ ಪುಸಕ್ತ ಹೊರತಂದಿರುವ ಲೇಖಕ ರಾಹು ಅವರ ಕನ್ನಡ ಅನುವಾದಿತ ಕೃತಿ ‘ಕಾರ್ಪೋರೇಟ್‌ ಕಾಲದಲ್ಲೂ ಕಾರ್ಲ್ ಮಾರ್ಕ್ಸ್’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಂಡವಾಳಶಾಹಿ ವ್ಯವಸ್ಥೆ ಹುಟ್ಟಿದ ದಿನವೇ ಸಮಾಜದಲ್ಲಿ ಅಸಮಾನತೆ ಹಾಗೂ ತಾರತಮ್ಯ ಹುಟ್ಟಿದೆ. ಸಮಾಜದ ಮೇಲೆ ಬಂಡವಾಳಶಾಹಿ ಬೀರುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಮಾರ್ಕ್ಸ್ವಾದ ಸಮರ್ಥವಾಗಿ ಪ್ರತಿಪಾದಿಸಿದೆ. ಆಧುನಿಕ ಜಗತ್ತಿನಲ್ಲಿ ಮಾರ್ಕ್ಸ್ವಾದ ಮಹತ್ವ ಕಳೆದುಕೊಂಡಿದೆ ಎಂದು ಭಾವಿಸಲಾಗುತ್ತಿದ್ದು, ಅದು ಸತ್ಯವಲ್ಲ ಎಂದರು.

ಮಾರ್ಕ್ಸ್ವಾದಕ್ಕೆ ಜಗತ್ತನ್ನು ಬದಲಿಸುವ ಶಕ್ತಿಯಿದ್ದು, ಎಲ್ಲಿಯವರೆಗೆ ಬಂಡವಾಳಶಾಹಿ ಇರುವುದೋ ಅಲ್ಲಿಯವರೆಗೂ ಜೀವಂತವಾಗಿರಲಿದೆ. ಎಲ್ಲಾ ಕಾಲದಲ್ಲಿ, ಅದರಲ್ಲೂ ಕಾರ್ಪೋರೇಟ್‌ ಕಾಲದಲ್ಲೇ ಹೆಚ್ಚು ಪ್ರಸ್ತು¤ತ. ಮಾರ್ಕ್ಸ್ವಾದ ಕೇವಲ ರಾಜಕೀಯ-ಆರ್ಥಿಕ ವಿವರಣೆಯನ್ನಷ್ಟೇ ನೀಡುವುದಿಲ್ಲ, ಅದೊಂದು ವಿಷನ್‌ ಎಂದರು. ಸಿಪಿಐಎಂ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, ದೇಶದ ಭವಿಷ್ಯವನ್ನು ನಿರ್ಧರಿಸಬೇಕಾದ ರಾಜಕಾರಣ, ಪ್ರಸ್ತುತ ಕಾರ್ಪೋರೇಟ್‌ ವಲಯದ ನಿಯಂತ್ರಣದಲ್ಲಿದೆ. ಕಾರ್ಪೋರೇಟ್‌ ವಲಯ ರಾಜಕಾರಣವನ್ನು ಉದ್ಯಮವನ್ನಾಗಿ ಮಾಡಿದ್ದು, ಈ ಬಗ್ಗೆ ಯೋಚಿಸುವ ವ್ಯವಧಾನ ಯಾರಿಗೂ ಇಲ್ಲವಾಗಿದೆ ಎಂದರು.

ಜನರು ಭಾಗವಹಿಸುವ ಸಂಸದೀಯ ವ್ಯವಸ್ಥೆ ಇಂದು ಮಾಯವಾಗಿದೆ. ಕಾರ್ಪೋರೇಟ್‌ ವಲಯಕ್ಕೆ ಬೇಕಾದ ಕಾನೂನುಗಳಿಗೆ ಮುದ್ರೆ ಒತ್ತುವ ಸಂಸದೀಯ ವ್ಯವಸ್ಥೆಯಿದ್ದು, ಈ ಪರಿಸ್ಥಿತಿ ಬದಲಾಯಿಸುವ ಬಹುದೊಡ್ಡ ಸವಾಲು ಎಡ ಪಕ್ಷಗಳ ಮುಂದಿದೆ. ಈಗಿನ ರಾಜಕಾರಣದಲ್ಲಿ ಎಡಪಕ್ಷ ಹಾಗೂ ಅದರ ಸಿದ್ಧಾಂತಕ್ಕೆ ಯಾವುದೇ ಮಹತ್ವವಿಲ್ಲ, ದೇಶದ ರಾಜಕಾರಣದಲ್ಲಿ ಎಡಪಕ್ಷಗಳು ಯಾವ ಪಾತ್ರವೂ ಇಲ್ಲ ಎಂದು ಭಾವಿಸುವುದು ತಪ್ಪು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ಪ್ರೊ. ಬಸವರಾಜ ಕಲ್ಗುಡಿ, ಕಾರ್ಮಿಕ ಮುಖಂಡ ಕೆ. ಪ್ರಕಾಶ್‌, ಚಿಂತನ ಪುಸ್ತಕ ಪ್ರಕಾಶನದ ಎನ್‌.ಕೆ. ವಸಂತರಾಜು ಮತ್ತಿತರರು ಉಪಸ್ಥಿತರಿದ್ದರು.

 

bangalore release UV report

Advertisements