gss namana

ಎಲ್ಲರೂ ಹೇಳುತ್ತಿದ್ದಾರೆ ಇಂದು ಜಿ.ಎಸ್.ಎಸ್.ಗೆ ಅಂತಿಮ ನಮನ ಸಲ್ಲಿಸೋಣ! ಇಲ್ಲ, ನಾನು ಇಂದು ಅವರಿಗೆ ಅಂತಿಮ ನಮನ ಸಲ್ಲಿಸುವುದಿಲ್ಲ!

ಅವರು ನನ್ನ ಪಾಲಿಗೆ  ದಿನ ನಿತ್ಯ ನಮನ ಸಲ್ಲಿಬೇಕಾಗಿರುವವರ ಪಟ್ಟಿಯಲ್ಲಿರುವವರು.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮಾಡಿದ ವ್ಯಕ್ತಿತ್ವದ ಒಂದು ಮುಖ ನಮ್ಮ ಪ್ರಕಾಶನಕ್ಕೆ ಉತ್ತರವಾಗಿ ಬರೆದ ಪತ್ರದಲ್ಲಿ ಕಂಡರೆ ಅವರ ನೂರಾರು ಮುಖಗಳು ಅವರ ಕವನಗಳಲ್ಲಿ ಹೊರಹೊಮ್ಮಿವೆ.

ನನ್ನ ಮನಸ್ಸು ಮಿಡಿಯುವಂತಹ ವಿಷಯಗಳಾದ ತನ್ನ ಒಬ್ಬ ಶಿಷ್ಯನಿಗೆ ಪ್ರತಿದ್ವಂದಿಗಳಿರಬಾರದು ಅನ್ನೋ ಒಂದೇ ಕಾರಣಕ್ಕಾಗಿ ತನ್ನ ಪರಿಸರದ ರಕ್ಷಣೆಗಾಗಿ ಕಲಿತ ತಮ್ಮ ಇನ್ನೊಬ್ಬ ಶಿಷ್ಯ ಏಕಲವ್ಯನ ವಿದ್ಯೆ, ಜೀವನದ ಗುರಿ, ಅವನ ಸರ್ವಸ್ವವನ್ನೂ ಹೀರಿದ ಗುರುದ್ರೋಣರ ಪರಂಪರೆ ಇಂದಿಗೂ ಇದೆ ಅನ್ನುವ ‘ಚಕ್ರಗತಿ’, ಇತ್ತೀಚೆಗಷ್ಟೇ ನಿರ್ಭಯ ಎಂದು ಭಾರತದ ಜನತೆಯಿಂದ ಕರೆಯಿಸಿಕೊಂಡ ಹೆಣ್ಣಿನ ಅಸಹಾಯಕತೆಯ ಕಾರಣವನ್ನು ಹೇಳುತ್ತಾ ಆ ಕಾರಣಗಳನ್ನು ಇಲ್ಲದಂತಾಗಿಸು ಎನ್ನುವ ದಿಟ್ಟ ನಿಲುವಿನ ಕವನ ‘ದಾಟಿ ಬಾ ನಿರ್ಭಯ ನಿಲುವಿಗೆ’, ಬರಿ ಮಾತುಗಳ ಕಡ್ಡಿ ಗೀಚುವೆಯಲ್ಲ ನಿನಗೆ ನಾಚಿಕೆಯಿಲ್ಲ? ಎಂದು ಕೇಳುವ ಕವನ ‘ಸಾಕು ನಿಲ್ಲಿಸು ನಿನ್ನ ಸಾಮಗಾನ’,  ಒಟ್ಟಿನಲ್ಲಿ ನಾವು ಈಗ ಸಮಾಜದಲ್ಲಿ ಕಾಣುವ ಶೋಷಣೆಯ ವಿವಿಧ ಮಗ್ಗುಲುಗಳಲ್ಲಿ ಪ್ರತಿಯೊಂದನ್ನೂ ಕುರಿತು ಕವನ ಬರೆದಿರುವ ಪ್ರೊ.ಜಿ.ಎಸ್.ಶಿವರುದ್ರಪ್ಪ ಎಲ್ಲರಂತಲ್ಲ ಈ ಕವಿ ನಮ್ಮ ರಾಷ್ಟ್ರಕವಿ ಎಂದು ಹೊಗಳುವಂತೆ ಮಾಡುತ್ತಿದೆ.

ಚಕ್ರಗತಿ

ಹೆಬ್ಬೆರಳಿಲ್ಲದ ಹಸ್ತವನ್ನು ನೋಡುತ್ತಾ
ನಿಶ್ಯಬ್ದವಾಗಿ ಕೂತಿದ್ದಾನೆ ಏಕಲವ್ಯ
ಧನ್ಯತೆಯೊ ವಿಷಾದವೊ ಬಲಿದಾನವೊ
ಅದೆಲ್ಲ ಕವಿ ಕಲ್ಪನೆಯ ಸಂಭಾವ್ಯ

ಹರಿಯುತ್ತಲೇ ಇದೆ ಬೆಟ್ಟದ ಹೊಳೆ
ಘಟ್ಟವನ್ನಿಳಿದು ದೂರದ ಕಡಲಿಗೆ,
ವಸಂತದಲ್ಲಿ ಮರ ಚಿಗುರಿ ಸಮೃದ್ಧವಾಗಿ
ಮತ್ತೆ ಶಿಶಿರದಲ್ಲಿ ಬರೀ ತರಗೆಲೆ.

ಎಲೆಯುದುರಿ ಬಿದ್ದರೂ, ಮತ್ತೆ ಕೊಂಬೆಗೆ
ಚಿಗುರು ಮೂಡುವುದಂತೂ ನಿಶ್ಚಯ,
ಬೆರಳಿನ ವಿಚಾರ ಹಾಗಲ್ಲ; ಶೋಷಣೆಗೆ
ಎಷ್ಟು ಮುಖ? ಅದು ಚರಿತ್ರೆಯ ವಿಷಯ.

ಮತ್ತೆ ಮತ್ತೆ ಬರುತ್ತಾರೆ ಆಚಾರ್ಯ ದ್ರೋಣರು
ನಿಶ್ಶಬ್ದದಲ್ಲಿ ಕೂತ ಏಕಲವ್ಯನ ಬಳಿಗೆ,
ಆಮೇಲೇನಾಗುತ್ತದೆ? ನಿನಗೆ ಗೊತ್ತೇ ಇದೆ
ಈ ಚರಿತ್ರೆಯ ಚಕ್ರಗತಿಯೊಳಗೆ.

 ದಾಟಿ ಬಾ ನಿರ್ಭಯದ ನಿಲುವಿಗೆ

ದಾರಿಯುದ್ದಕ್ಕೂ ವನವಾಸ, ಅಗ್ನಿಪರೀಕ್ಷೆ,
ಹೇಗೆ ದಾಟುತ್ತೀಯೆ ನನ್ನ ಮಗಳೆ?
‘ನಸ್ತ್ರೀ ಸ್ವಾತಂತ್ರ‍್ಯಮರ್ಹತಿ’ – ಎಂದು ವಟಗುಟ್ಟು-
ತ್ತಲೇ ಇದೆ ಮನುಧರ್ಮಶಾಸ್ತ್ರದ ರಗಳೆ.

ಅಗ್ನಿ ಪರೀಕ್ಷೆ ಸೀತೆಗೆ ಮಾತ್ರ; ಶ್ರೀರಾಮ-
ನಾದರೋ ಅಕಳಂಕ ಪ್ರಶ್ನಾತೀತ!
ಚಂದ್ರಮತಿ ಹರಾಜಿಗೆ, ದ್ರೌಪದಿ ಜೂಜಿಗೆ
ವಸ್ತುವಾಗುಳಿದದ್ದು ಎಂಥ ವಿಪರೀತ!

ದ್ರೌಪದಿಯಂತೆ ಎಲ್ಲರಿಗು ಅಕ್ಷಯ ವಸ್ತ್ರ
ಲಭಿಸುವುದೆಂಬ ನಂಬಿಕೆಯಿಲ್ಲ;
ಇಂದಿಗೂ ಹೊಸ್ತಿಲ ಹೊರಗೆ ಲಕ್ಷಣರೇಖೆ,
ದಾಟಿ ನಡೆದೇನೆಂಬ ಧೈರ್ಯವಿಲ್ಲ.

ಎಲ್ಲ ಧರ್ಮಗಳ ನಿಲುವು ಇಷ್ಟೆ; ಈಡನ್ನಿನ ತೋಟ-
ದಲ್ಲಿ ತಿನ್ನಬಾರದ ಹಣ್ಣ ತಿನ್ನಿಸಿದವಳು
ಈವ್; ಗಂಡಸಿನ ಪತನಕ್ಕೆ ಕಾರಣ ಹೆಣ್ಣು;
ಮಾಯೆ; ಋಷಿಗಳ ತಪಸ್ಸು ಕೆಡಿಸಿದವಳು.

ಬುದ್ಧ ಹೇಳಿದ್ದೇನು ಆನಂದನಿಗೆ? ಸದ್ಯಕ್ಕೆ
ಹೆಣ್ಣು ಸೇರುವುದು ಬೇಡ ನಮ್ಮ ಸಂಘಕ್ಕೆ;
ಅರ್ಹಂತ ಮತದಂತೆ ಗಂಡಾಗಿ ಹುಟ್ಟಿದರೆ
ಮಾತ್ರ ಅರ್ಹತೆಯುಂಟು ಮೋಕ್ಷಕ್ಕೆ!

ಹೇಳುತ್ತದೆ ಖುರಾನ್; ಹೆಣ್ಣೊಂದು ಬರಿಯ ಹೊಲ,
ನಿನ್ನ ಸ್ವತ್ತು; ಮೂರು ಸಲ ತಲಾಖ್ ಎಂದರೆ ಸಾಕು.
ಸ್ತ್ರೀ ಶೂದ್ರಾದಿಗಳಿಗೆಲ್ಲಿಯದೋ ವೇದಾಧಿಕಾರ?
ಇಂಥ ದಯವಿರದ ಧರ್ಮಗಳ ಆಚೆ ನೂಕು.

ಹೊಸ ತಿಳಿವಿನೆಚ್ಚರದಲ್ಲಿ ಲೋಕ ಸಾಗಿದೆ
ಮಗಳೆ. ದಾಟಿ ಬಾ ಮಹದೇವಿಯಕ್ಕನ ಹಾಗೆ
ನಿರ್ಭಯದ ನಿಲುವಿದೆ. ಆತ್ಮ ಗೌರವದ ಗಿರಿಶಿಖರ-
ದೆತ್ತರದಲ್ಲಿ ಅರಳಿಕೊಳ್ಳಲಿ ಬದುಕು ಹೊಸ ಬೆಳಕಿಗೆ.

Advertisements