ಸಾದತ್ ಹಸನ್ ಮಂಟೊ ನಮಗೆ ತೋರಿಸಿದ ಲೋಕವಿದು

‘ಅವಧಿ’ ವರದಿ

ಫೋಟೋ ಕೃಪೆ : ಸಿರಾಜ್ ಬಿಸರಳ್ಳಿ
ಇಲ್ಲಿ
ಮಂಟೋ ವಿಶ್ರಮಿಸುತಿದ್ದಾನೆ.
ಅವನೊಂದಿಗೆ ಕಥಾ ಲೋಕದ ಎಲ್ಲ
ಕತೆ ಮತ್ತು ರಹಸ್ಯಗಳೂ ವಿಶ್ರಮಿಸುತ್ತಿವೆ…
ಮಣಗಟ್ಟಲೆ ಮಣ್ಣಿನಡಿ ಮಲಗಿ ಅವನು
ಯಾರು ಉತ್ತಮ ಕತೆಗಾರರು-
ದೇವರೋ ಇಲ್ಲವೇ ನಾನೋ
ಎಂದು ಯೋಚಿಸುತ್ತಿದ್ದಾನೆ.
ಕನ್ನಡ ಸಾಹಿತ್ಯ ಪರಿಷತ್ತಿನ ಒಳ ಹೋಗಿ ಕುಳಿತುಕೊಳ್ಳುತ್ತಲೇ ನನಗೆ ವೇದಿಕೆಯಿಂದ ಗೋಚರಿಸಿ ಅಚ್ಚರಿ ಮೂಡಿಸಿದ ಸಾಲುಗಳಿವು. ಅದು ಸಮುದಾಯ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಉರ್ದು ಅಕಾಡೆಮಿಯ ಸಹಯೋಗದೊಂದಿಗೆ ಸಾಹಿತ್ಯ ಸಮುದಾಯ ಆಯೋಜನೆಯ ‘ಸಾದತ್ ಹಸನ್ ಮಂಟೋನ ಸ್ಯಾಮ್ ಅಂಕಲ್ ಗೆ ಪತ್ರಗಳು ಮತ್ತು ಇತರೆ ಕಿಡಿಗೇಡಿ ಬರಹಗಳು’ ಕೃತಿಯ ಕನ್ನಡ ಅವತರಣಿಕೆಯ ಬಿಡುಗಡೆ ಸಮಾರಂಭ. ನಾನು ಸಭಾಂಗಣಕ್ಕೆ ಹೋಗುವಷ್ಟೊತ್ತಿಗೆಲ್ಲಾ ಕೃತಿ ಬಿಡುಗಡೆಗೊಂದು ‘ಕಥಾ ರಂಗ’ ಪ್ರಸ್ತುತಿಯಾಗುತಿತ್ತು. ಒಂದು ಕಥೆ ಮುಗಿದ ತಕ್ಷಣ ವೇದಿಕೆಗೆ ಬಂದ ಜೆ ಬಾಲಕೃಷ್ಣರವರು ನಮ್ಮನ್ನು ಭಾರತ ವಿಭಜನೆಯ ಕಹಿ ಘಳಿಗೆಯ ಕ್ಷಣಗಳಿಗೆ ಕೊಂಡೊಯ್ದರು. ಹೌದು. ಕೇವಲ ಧರ್ಮದ ಆಧಾರದ ಮೇಲೆ ಅಖಂಡ ಬಾಂಧವ್ಯವೊಂದು, ಅಲ್ಲೋಲ ಕಲ್ಲೋಲದ ರಕ್ತಸಿಕ್ತ ಇತಿಹಾಸ ನಿರ್ಮಿಸುವುದಾದರೆ ಅಂಥಹ ಧರ್ಮಗಳೇಕೆಮಗೆ ? ಎಂಬ ಜಿಗುಪ್ಸೆ ಕಾಡುವ ಮಟ್ಟಿಗೆ ಅಂದು ದೇಶ ವಿಭಜನೆಯ ಘಟನೆಗಳ ಕೆಲವು ಅಂಕಿ-ಸಂಖ್ಯೆಗಳ ಮೂಲಕ ವಿವರಣೆ ನೀಡಿದರು. ಜೊತೆ ಜೊತೆಗೆ ಮೌಂಟೆನ್ ನಂಥಾ ಮಂಟೋನ ದಿ ರಿವೇಂಜ್, ಶೀಥಲ ಮಾಂಸ, ಖುದ್ಹಾಕಿ ಖಸಂ,ಇನ್ನೂ ಕೆಲವು ಕಥೆಗಳನ್ನು ಆತನ ಬರಹಗಳನ್ನು ಮೆಲುಕಿದರು.
ಅಂದಿನ ದೇಶ ವಿಭಜನೆಯ ಸಮಯದಲ್ಲಿ ಧರ್ಮಾಂಧತೆ ತುಂಬಿದ ಕಂಗಳಲ್ಲಿ ಒಂದು ಅಮಾಯಕ ನಾಯಿಯೂ ಹೇಗೆ ಗಡಿಗಳ ಒಡಲಿಗೆ ಬಲಿಯಾಯಿತು ಎಂಬ ಕಥೆಯನ್ನೂ ಹೇಳಿದರು, ನಮ್ಮದೇ ಭಗತ್ ಹುಟ್ಟಿ ಬೆಳೆದು ಬ್ರಿಟೀಷರ ವಿರುದ್ಧ ಜ್ವಾಲೆಯಾಗಿ ಭಾರತದ ಪ್ರತಿ ಯುವ ಹೃದಯದ ಹೈಕಾನ್ ಆಗಿ ಉಳಿದಿರುವಾಗ ಅವನ ಜನ್ಮಸ್ಥಳ ಲಾಹೋರ್ ಮಾತ್ರ ಸೇರಿದ್ದು ಪಾಕಿಸ್ಥಾನಕ್ಕೆ. ಆಗ ಅಲ್ಲಿನ ಪ್ರಜ್ಞಾವಂತರು ಲಾಹೋರಿನಲ್ಲೊಂದು ಭಗತ್ ಪ್ರತಿಮೆ ನಿರ್ಮಿಸಿ ಒಂದು ಚೌಕಿ ಕಟ್ಟಲು ಮೊದ ಮೊದಲು ಅಲ್ಲಿ ತುಸು ವಿರೋಧ ಏರ್ಪಟ್ಟಿತು ಎಂಬುದನ್ನು ಕೇಳಿದಾಗ ಬ್ರಿಟೀಷರಿಗಿಂತಾ ಭಾರತದವರು ಪಾಕ್ ಗಳಿಗೆ ಕ್ರೂರವಾಗಿ ಕಾಣಲೂ ಸಾಧ್ಯ ಹೇಗಾಯಿತು! ಎಂಬ ಅಚ್ಚರಿ ಮೂಡದಿರಲು ಹೇಗೆ ತಾನೆ ಸಾಧ್ಯ ? ನಂತರ ಕೆಲವು ಚರ್ಚೆ ಸಾಮರಸ್ಯಗಳ ನಿಲುವಿನಿಂದಾಗಿ ಅಲ್ಲೊಂದು ಭಗತ್ ಚೌಕಿ ನಿರ್ಮಿತಗೊಂಡಿತು ಎಂಬುದನ್ನು ಕೇಳಿದಾಗ ಕಳೆದ ಆಸ್ತಿ ಪತ್ರವೊಂದು ಮರಳಿ ಕೈ ಸೇರಿದ ಅನುಭವ. ಭಾರತ ವಿಭಜನೆಯ ಅಂಗಳಕ್ಕೆ ಅಷ್ಟೊತ್ತಿಗಾಗಲೇ ನನ್ನನ್ನು ಕರೆಯ್ದೊಯ್ದು ನಿಲ್ಲಿಸಿದ್ದ ಶಾಂತಿ ದೀಪದ ಆರಾಧಕ, ಹಿರಿಯ ಚೇತನ ಕುಲದೀಪ್ ನಯ್ಯರ್ ಅಲ್ಲೊಂದು ಕ್ಷಣ ಇಣುಕಿದಂತಾಯ್ತು.
ಮಂಟೋ ಅಂದರೆ ಹಾಗೇನೇ. ಶಾಲೆಯ ಪಠ್ಯ ಪುಸ್ತಕಗಳನ್ನು ನೋಡುತ್ತಲೇ ಮೂಗು ಮುಚ್ಚಿಕೊಂಡು ಮೈಲಿ ಓಡಿದವ. ಎಷ್ಟೊಂದು ದಡ್ಡ ಮಂಟೋ ? ಎಂಟ್ರನ್ಸ್ ಪರೀಕ್ಷೆಯೊಂದರಲ್ಲಿ ಮೂರು ಮೂರುಸಲ ಡುಮುಕಿ ಹೊಡೆದದ್ದು ತಮ್ಮದೇ ಉರ್ದು ವಿಷಯದಲ್ಲಿ ! ಆದರೆ ಅವರಿಗೆ ಇಂಗ್ಲಿಷ್ ಕತೆ ಕಾದಂಬರಿಗಳ ಸೆರಗು ಸೋಕಿದ್ದೆಂದೋ. ಸಾಲು ಸಾಲು ಆಂಗ್ಲ ಕಾದಂಬರಿಗಳನ್ನು ಓದುವ ಹಂಬಲ ಅವರಿಗೆ ಕಡಿಮೆಯಾಗಲೇ ಇಲ್ಲವಂತೆ. ಆದರೆ ನ್ಯಾಯಾಧೀಶನ ಮಗನೊಬ್ಬನಾಗಿಯೂ ಅವರ ಬಳಿ ಪುಸ್ತಕ ಕೊಳ್ಳುವಷ್ಟು ದುಡ್ಡು ಸಾಲದ್ದಾಗಿ, ಪುಸ್ತಕದ ಅಂಗಡಿಗಳಿಗೆ ಹೋಗಿ ಅಲ್ಲಿ ಇಂಗ್ಲಿಷ್ ಕತೆ ಕಾದಂಬರಿ ಪುಸ್ತಕಗಳನ್ನು ಕದಿಯುತ್ತಾರೆ. ಮಂಟೋ ಪರಿಶುದ್ಧ ಪಟಾಲಾಂ ಟೀಮೊಂದರ ನಾಯಕನಾಗಿರುತ್ತಾರೆ. ಅಂಥಹ ಪೋಲಿ ನಾಯಕ ಮುಂದೊಂದು ದಿನ ಅದೇ… ಉರ್ದು ಕಥಾಲೋಕದ ‘ಇಮಾಮ್’ (ಆಚಾರ್ಯ) ಆಗುತ್ತಾನೆಂದು ಯಾರೂ ಆಗ ಊಹಿಸಿರಲಿಕ್ಕಿಲ್ಲ ಎಂಬ ವಿವರ ಸಿಗುತ್ತಾ ಹೋದಂತೆಲ್ಲಾ ನಂಗೆ ದರ್ಬೆ ಹಿಡಿಯುವ ಕೈಯೊಂದು ಖಡ್ಗ ಹಿಡಿದ ಇತಿಹಾಸ ಮರುಕಳಿಸಿತು. ಜೆ ಬಾಲಕೃಷ್ಣರವರ ಮಾತುಗಳು ಮುಗಿಯುತ್ತಿದ್ದಂತೆಯೇ ವೇದಿಕೆಯಲ್ಲಿ ಮತ್ತೊಂದು ಮಂಟೋ ‘ಕಥಾ ರಂಗ’ ಪ್ರಸ್ತುತಿ.
ಕಥೆಯೊಂದು ಮುಗಿದ ಬಳಿಕ ಮತ್ತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಮೈಸೂರಿನ ಪರಿವರ್ತನ ತಂಡದ ಮುಖ್ಯಸ್ಥ ಪ್ರೊ ಎಸ್ ಆರ್ ರಮೇಶ್. ಇಲ್ಲಿ ವಿಭಜನೆಗೊಂಡ ಮಾನವ ಹತ್ಯಾಕಾಂಡದ ಮಂಟೋನ ಮತ್ತೊಂದು ದೃಷ್ಟಿಕೋನವನ್ನು ಅನಾವರಣಗೊಳಸಿದರು. ಅದು, ಮಂಟೋನ ಕಂಗಳಿದ್ದ ವೇಶ್ಯೆಯರ ವಿಭಿನ್ನ ಕೋನಗಳನ್ನೂ ಪರಿಚಯಿಸಿದರು. ಸುಗಂಧಿ ಎಂಬ ವೇಶ್ಯೆಯೊಬ್ಬಳ ತಿರುವು ಮರುವುಗಳನ್ನು ಹಂಚಿಕೊಂಡರು. ಹೊಸ ಗಡಿದಾಟಿ ನಿರಾಶ್ರಿತರ ಜೋಪಡಿಗಳ ಪಕ್ಕದಲ್ಲೊಂದು ಸೂರು ಕಂಡುಕೊಂಡ ಸುಂದರಿ ಸುಗಂಧಿಗೆ ಸೋಲದ ಕಂಗಳಿರಲಿಲ್ಲ. ಆಕೆಯ ಹಸಿದ ಬಡತನಕ್ಕೆ ಗಂಜಿ ಎಂಬಂತಿದ್ದುದೇ ಅವಳ ಸೌಂದರ್ಯ.ಅದನ್ನೇ ಆಕೆ ಹರಿದಂಚಿದಳು ಕೂಡಾ. ಎಲ್ಲರೂ, ಆಕೆಯನ್ನು ಚಪ್ಪರಿಸಿದವರೇ. ಅಂಥಹ ಹಸಿದ ತೋಳಗಳಲ್ಲೊಬ್ಬ ಭಾರತ ಸರಹದ್ದಿನ ಸರಕಾರದ ಅಧಿಕಾರಿ. ಅವನು ಈಕೆಯ ಸೌಂದರ್ಯವನ್ನು ಆಡಿ ಹೊಗಳಿ ಸುಗಂಧಿಯನ್ನು ತ್ರಿಶಂಕು ಅಟ್ಟಕ್ಕೇರಿಸಿ ನಿನ್ನನ್ನೇ ‘ನಿಖಾ’ ಆಗ್ತೀನಿ ಎಂದು ಉಂಡೂ ಹೋದವ. ಕೊಂಡೂ ಹೋದವ.
ಸುಗಂಧಿ ಮೈ ಹಂಚಿ ಗಳಿಸಿದ್ದ ಫಸಲೆಲ್ಲಾ ಶೂನ್ಯದತ್ತ ಕೊಂಡೊಯ್ದವ ಆಕೆಯನ್ನು ಒಬ್ಬ ಧೀಮಂತ ವಿಟನಬಳಿ ಕೊಂಡೊಯುತ್ತಾನೆ. ಸುಗಂಧಿಯನ್ನೇ ದಿಟ್ಟಿಸಿದ ಧೀಮಂತ ಕರಯ್ದೊವನ ಮುಖ ನೋಡಿ ಹೇಳೋದು, ‘ಬಫೂಲ್, ಹೋಗಿ ಹೋಗಿ ಇಂಥಾ ಹೆಣ್ಣನ್ನಾ ಕರೆತರೋದು ? ಏನಿದೆ ಇವಳಲ್ಲಿ? ಎಂದಾಗ ಜೀವನದಲ್ಲಿಯೇ ಮೊಟ್ಟ ಮೊದಲಬಾರಿಗೆ ತನ್ನ ಸಿರಿಯನ್ನು ಹಳಿದವನೆದಿರು ತತ್ತರಿಸಿ ತಳಮಳಗೊಂಡ ಸುಗಂಧಿಯ ಮನಸ್ಥಿತಿ ಮಂಟೋರಂಥ ಮೇಧಾವಿಯ ಮಿಡಿತಕ್ಕೆ ತಟ್ಟುತ್ತೆ. ವೇಶ್ಯೆಯರಲ್ಲೂ ವಿಭಿನ್ನತೆ ಹುಡುಕುವ ಮೂರನೆಯ ದೃಷ್ಠಿಕೋನವದು. ಇದು, ಮಂಟೋ ತಾಕತ್ತು. ಇಂಥಹ ಸಾಲು ಸಾಲು ಪ್ರಸಂಗಗಳನ್ನು ಮಾನವತಾ ಬೀದಿಯಲ್ಲಿ ಸೆರಗು ಸರಿಪಡಿಸಿ ಅವಲೋಕಿಸಿದ್ದು ಮಂಟೋ ಹೆಗ್ಗಳಿಕೆ. ಎಸ್ ಆರ್ ರಮೇಶ್ ರವರು ಹೀಗೆ ವಿವರಣೆ ನೀಡಿದಾಗ ಮಂಟೋ ನನ್ನ ಸ್ಮೃತಿಪಟಲದಲ್ಲಿ ತನ್ನ ಮಿಂಚ ಲೇಖನಿಯನ್ನು ತನ್ನ ತುಟಿಯಲ್ಲಿ ಕಚ್ಚಿ ಕಾಲಮೇಲೆ ಕಾಲು ಹಾಕಿ ಕುಳಿತಿದ್ದ.
ಗಡಿಗಳ ಗೋಡವೆಯೇ ಇಲ್ಲದೆ ಮನುಕುಲದ ಗುಪ್ತ ನಗ್ನ ತಮುಲುಗಳನ್ನು ಮಂಥಿಸಿ ಕೃತಿಗಿಳಿಸುತ್ತಿದ್ದ ಮಂಟೋ ವೇಶ್ಯೆಯರನ್ನು ಸರಕಿನ ವಸ್ತುವೆಂದಾಗಲೀ, ಅಯ್ಯೋ ಪಾಪ ಎಂಬ ಕರುಣೆಯ ಮುಳ್ಳ ಮೆದೆಗಳ ನಡುವೆಯಿಂದಲಾಗಲೀ ನೋಡದೆ ವಿಭಿನ್ನವಾಗಿ ಅವರ ನೈಜ ಜೀವನದ ಆಕಾರ ವಿಕಾರಗಳ ತುಡಿತಗಳನ್ನು ಅರಿತಿದ್ದ ಎಂಬುದನ್ನು ತಿಳಿದಾಗ ತಿಳಿಗೇಡಿ ತಿದೆಯೊಳಗಿನ ಕಿಡಿಗಳೆಂತೆಂಥಹವೆಂದು ಅಚ್ಚರಿಪಟ್ಟೆ.
ಎಸ್ ಆರ್ ರಮೇಶ್ ರ ಮಾತಿನ ತರುವಾಯ ವೇದಿಕೆಯಲ್ಲಿ ಮಂಟೋ ಮಡಿಲಿಂದ ಎದ್ದುಬಂದ ‘ಖುದ್ಹಾಕಿ ಕಸಂ’ ಕಥಾ ರಂಗ ಪ್ರಸ್ತುತಿಯಾಯಿತು. ಈ ಕಥೆಯನ್ನು ನಾನು ವಿವರಿಸ್ತಾ ಹೋಗಲ್ಲ. ಆದ್ರೆ ಹೊಟ್ಟೆಪಾಡಿಗೆ ಬಂದ ಯಾವುದೋ ಇಂಜಿನಿಯರ್ ಗಳು, ರಾತ್ರೋ ರಾತ್ರಿ ನಿರ್ಮಿಸಿದ ಗಡಿ ರೇಖೆಯ ನಕ್ಷೆಯಿಂದಾಗಿ ಹೇಗೆ ಒಂದು ವ್ಯವಸ್ಥೆ, ಮನುಷ್ಯತ್ವದ, ಮಮತೆಯ ನರನಾಡಿಗಳು ಹತಾಶೆಯಿಂದ ಒದ್ದಾಡುತ್ತಿದ್ದವೆಂಬುದನ್ನು ಅರಿತರೆ, ಯಾವನಿಗೆ ಬೇಕಿತ್ತು ಈ ಹಾಳು ಮುಳ್ಳು ಬೇಲಿ ಎಂದೆನಿಸದಿರದು. ದೇಶ ವಿಭಜನೆಯಿಂದಾಗಿ ತನ್ನದೇ ಸ್ಪರದ್ರೂಪಿ ಮಗಳ ಹುಡುಕುತ್ತಾ ಬಳಲಿ ವ್ಯವಸ್ಥೆಯ ವಾಸ್ತವತೆಗೆ ಬೆದರಿ ಹುಚ್ಚಿಯಾದ ತಾಯಿ ಬೀದಿ ಬೀದಿ ಅಲೆಯುತ್ತಿರುವಾಗ ಇಂಥಹ ಅಗಲಿದ ಜೀವಗಳನ್ನೇ ಹಿಡಿದು ತಂದು ಗೂಡು ಸೇರುಸುತ್ತಿದ್ದ ಕಥಾನಾಯಕ ಆ ಹುಚ್ಚು ತಾಯಿಗೆ ನಿನ್ನ ಮಗಳು ಇಲ್ಲವಾಗಿದ್ದಾಳೆ ಎಂದೇಳುತ್ತಾನೆ. ಅವನ ಮಾತಿಗೆ ಆ ತಾಯಿ ‘ಇಲ್ಲ ಅಂಥಾ ಸುಂದರಿಯನ್ನು ಕೊಲ್ಲವ ಮನಸ್ಸು ಖಡ್ಗಕ್ಕೂ ಇಲ್ಲ’ ಎಂದೇಳುವಾಗಲೇ ಬೀದಿಯಲ್ಲಿ ಸಿಖ್ಖನ ಕೈಹಿಡಿದು ಎದುರು ಮಗಳು ಬರುತ್ತಾಳೆ. ಈ ಹುಚ್ಚು ತಾಯಿಯನ್ನು ನೋಡಿದ ಹುಡುಗ ‘ಅಲ್ಲಿ ನೋಡು ನಿನ್ನ ಹೆತ್ತ ಕರುಳು. ಬಾ ಮಾತನಾಡಿಸೋಣ ಎಂದಾಗ ‘ಬೇಡ ಬಾ ಎಂದು ಸುಂದರ ಮಗಳು ಮುಸುಕು ಹಾಕಿ ಮುನ್ನಡೆದುದನ್ನು ಗಮನಿಸಿದ ತಾಯಿ ಅವಳತ್ತಾ ಕೈ ಮಾಡಿ ನನ್ನ ಮಗಳು ಎಂದು ಕಂಬನಿಗೈವಾಗ ಕಥಾನಾಯಕ ‘ಅವಳಲ್ಲ ನಿನ್ನ ಮಗಳು, ಅವಳೇಗೆ ನಿನ್ನ ಮಗಳಾಗುತ್ತಾಳೆ. ನಿನ್ನ ಮಗಳು ಸತ್ತಿದ್ದಾಳೆ ‘ಖುದ್ಹಾಕಿ ಖಸಂ’ ಎಂಬ ಪದಗಳನ್ನು ಕೇಳುತ್ತಲೇ ಹುಚ್ಚು ತಾಯಿ ಎದೆಯೊಡೆದು ಸಾಯುತ್ತಾಳೆ. ಇಂಥಹ ಅದೆಷ್ಟು ಹೃದಯಗಳು ಒಡೆದು ರಕ್ತ ಸೂಸಿವೆಯೋ. ಕೇವಲ ಗಡಿರೇಖೆಯೆಂಬ ಮೂರಡಿ ಜಾಗದ ಅಹಂಗಾಗಿ.
ಅಷ್ಟೊತ್ತಿಗೆಲ್ಲಾ ಸಭಿಕರು ದೇಶ ವಿಭಜನೆಯ ಕರಾಳ ಲೋಕದ್ಲಲಿ ತುಂಬುಗಂಬನಿಯಿಂದ ಕುಳಿತಾಗಿತ್ತು. ಕಥಾ ಪ್ರಸ್ತುತಿಯ ನಂತರ ಮಹೀರ್ ಮನ್ಸೂರ್ ರವರು ಕವಿತೆಯೊಂದನ್ನು ವಾಚಿಸಿದರು. ಅದೂ ಕೂಡಾ ದೇಶ ವಿಭಜನೆಯ ದುಷ್ಟನಿಗೆ ಛೀಕಾರ ಹಾಕಿತ್ತು. ಕಳೆದ ಮಾನವತೆಗೆ ಕಂಬನಿ ಮಿಡಿದಿತ್ತು. ಇಲ್ಲಿ ಪ್ರತಿಯೊಬ್ಬರ ಮಾತುಗಳು ಮುಗಿಯುತ್ತಿದ್ದಂತೆಯೇ ಅವರಿಗೆ ಗೌರವ ಪ್ರತಿಗಳು ಸಮರ್ಪಿತಗೊಳ್ಳುತ್ತಿದ್ದವು. ಅಂತೆಯೇ ಮನ್ಸೂರ್ ರವರಿಗೆ ಸಾಹಿತ್ಯ ಅಕಾಡೆಮಿಯ ರಿಜಿಸ್ಟರ್ ಭಾಗ್ಯ ಮೇಡಂ ಗೌರವ ಪ್ರತಿ ನೀಡಿದರು.
ದೇಶ ವಿಭಜನೆ ಅಂದ್ರೆ ಅವರವರ ಪಾತ್ರೆಪಗಡೆಗಳನ್ನು, ಸರಕು ಸರಂಜಾಮನ್ನು ಅವರವರ ಮುಂದಿಟ್ಟುಕೊಮಡು ಮನೆಯ ನಡುವೆ ಅಡ್ಡಗೋಡೆ ಕಟ್ಟಿಕೊಂಡು ‘ಬೇರೆ’ಯಾಗುವಂಥಾ ಸಹೋದರರ ಇಬ್ಬಾಗವಲ್ಲ. ಇಲ್ಲಿ ಎಲ್ಲಾ ಸಂಪನ್ಮೂಲವೂ ಇಬ್ಬಾಗವಾಗುತ್ತೆ. ತೀರಾ ಅತಿರೇಕದ ವಿಚಿತ್ರವೆಂದರೆ ವೇಶ್ಯೆಯರಿಂದ ಮೊದಲ್ಗೊಂಡು ಲೋಕದ ಪರಿವೆಯೇ ಇಲ್ಲದೆ ತಮ್ಮದೇ ಭ್ರಮಾ ಲೋಕದಲ್ಲಿರುವ ಹುಚ್ಚರೂ ಇಬ್ಬಾಗಬಾಗಬೇಕು. ನಗು ಮಿಶ್ರಿತ ನಾಚಿಕೆಯಾಗಲ್ವಾ , ಈ ನಿಲುವನ್ನು ತಿಳಿದಾಗ, ತಳೆದಾಗ ? ಪ್ರತಿ ಸಮಾನ ಮನಸ್ಕರಿಗೂ ಈ ಭಾವ ಕಾಡುತ್ತೆ. ಆದರೆ ಮನುಷ್ಯತ್ವದ ಸುಡುಗಾಡ ಗೋರಿಯ ಮೇಲೆ ನಿಂತವರಿಗೆ ಇದಾವುದೂ ಹೇಗೆ ಗೋಚರಿಸೊಲ್ಲ ಎಂಬುದನ್ನು ಮಂಟೋ ಸಾದರಪಡಿಸಿರೋದು ‘ತೋಬಾ ಟೇಕ್ ಸಿಂಗ್’ ಎಂಬ ಪ್ರಜ್ವಾವಂತನಂಥಾ ಹುಚ್ಚನೊಬ್ಬನ ಕಥಾ ಹಂದರದ ಮೂಲಕ. ಅಂತೆಯೇ ವೇದಿಕೆ ಮೇಲೆ ತೋಬಾ ಟೇಕ್ ಸಿಂಗ್ ಪ್ರಸ್ತುತಿ.
ಈ ಪ್ರಸ್ತುತಿಯಲ್ಲಿ ಹುಚ್ಚನೊಬ್ಬ ನಾನೇ ದೇವರು ಎಂದು ಕುಳಿತಿರುತ್ತಾನೆ. ತೋಬಾ ಟೇಕ್ ಸಿಂಗನಿಗೆ ತನ್ನ ಹುಟ್ಟೂರು ಯಾವ ದೇಶಕ್ಕೆ ಸೇರಿದೆ ಎಂದು ತಿಳಿಯುವ ಪ್ರತಿಕ್ಷಣದ ಹಲುಬು, ಕಾತರ. ಸಂಸಾರವೆಂಬುದೊಂದಿರುತ್ತಲ್ಲಾ. ಎಲ್ಲರನ್ನೂ ಅವನು ವಿಚಾರಿಸುತ್ತಾನೆ, ಉತ್ತರ ಶೂನ್ಯ. ಕೊನೆಗೆ ಈ ‘ದೇವರ’ (ಸಂಸ್ಕೃತ ‘ದೇವರ’ ಅಲ್ಲ) ಬಳಿ ಬಂದು ಮತ್ತದೇ ಪ್ರಶ್ನೆಯನ್ನು ಕೇಳುತ್ತಾನೆ. ಆಗ ಅವನು ಈ ದೇವರು, ‘ನಿನ್ನ ಊರು ಭಾರತಕ್ಕೂ ಸೇರಿಲ್ಲ, ಪಾಕಿಸ್ತಾನಕ್ಕೂ ಸೇರಿಲ್ಲ. ಯಾಕೆಂದ್ರೆ ಅದು ಯಾವ ದೇಶಕ್ಕೆ ಸೇರಿಬೇಕೆಂದನ್ನು ನಾನಿನ್ನೂ ನಿರ್ಧರಿಸಿಲ್ಲ’ ಎಂದಾಗ ಮನತುಂಬಿ ನಗದೆ ಗುಮ್ಮಗೆ ಕುಳಿತುಕೊಳ್ಳೋಕ್ಕಾಗಲ್ಲ. ಹಾಗೆ ನಗ್ತಾ ಇದ್ದಾಗಲೇ ನಂಗೆ ನನ್ನ ಜಿಲ್ಲೆಯ ಬೀಚಿ ಕಚಗುಳಿಯಿಟ್ಟಂತಾಯ್ತು. ಈ ಕಥೆಯಲ್ಲಿ ಕೊನೆಗೆ ತೋಬಾ ಟೇಕ್ ಸಿಂಗ್ ದೇಶ ಪಲ್ಲಟಕ್ಕೆ ನಲುಗುತ್ತಿದ್ದಾಗಲೇ ಆತನನ್ನು ಅತೀ ಸಮಯದ ನಂತರ ಭೇಟಿಯಾದ ಇವನ ಮಿತ್ರ ತೋಬಾ ಟೇಕ್ ಸಿಂಗ್ ನ ಕುಟುಂಬದ ವಿವರ ತಿಳಿಸಿ ‘ನಿನ್ನ ಮಗಳೂ… ಅನುಮಾನದಿ ನಿಧಾನಿಸಿ ಅವಳೂ ಚೆನ್ನಾಗಿದ್ದಾಳೆ , ಎಂಬ ಮಾತಿನಿ ಹಿನ್ನಲೆಗೆ ಬೆಚ್ಚಿಬಿದ್ದ ಸಿಂಗ್ ಇಬ್ಬಾಗದ ಮಾರಕತೆಗೆ ಕುಸಿದು ಪ್ರಾಣ ಬಿಡುತ್ತಾನೆ.
ಅಲ್ಲಾ, ಮತ್ತೆ ಮತ್ತೆ ನಂಗೆ ಇಲ್ಲಿ ಕಾಡೋದು ಅಂದ್ರೆ ಪ್ರಜ್ಞೆಯಿಲ್ಲದ ಮೆಂಟಲ್ ಗೂ ಬೇಡವಾದ ಆ ವಿಭಜನೆ ಅನ್ನೋ ರಕ್ಕಸ ಬೇಕೇ ಬೇಕೆಂದು ಮೊಂಡು ಹಿಡಿದು ಸಾಧಿಸಿದವರನ್ನು ಏನೆಂದು ಕರೆಯಲಿ ?
ಈ ಪ್ರಸ್ತುತಿ ಮುಗಿದ ನಂತರ ಮೈಸೂರಿನ ಪರಿವರ್ತನ ತಂಡದಿಂದ ಮತ್ತೊಂದು ಪ್ರಸ್ತುತಿ. ವೇಶ್ಯೆಯರ ದುಡ್ಡಿನಿಂದಲೇ ದುಂಡಗಾಗಿ ಶ್ರೀಕ್ಷೇತ್ರದಲ್ಲಿ ಬಟ್ಟೆ ಅಂಗಡಿ ವ್ಯಾಪಾರ ಶುರುವಿಟ್ಟು, ದೇಶ ವಿಭಜನೆಯ ನಂತರ ಕೊಡಬೇಕಾದ ಸಾಲದಂಥಾ ಮೊತ್ತದ ಒಡವೆಗಳನ್ನು ಎದೆಯಲ್ಲಿಟ್ಟುಕೊಂಡು ಪ್ರಕ್ಷುಬ್ಧ ವಾತಾವರಣದಲ್ಲಿ ಮಾರಕ ದಾಳಿಗೆ ಬಲಿಯಾಗುವ ಮುನ್ನ ತಾನು ತನ್ನ ಋಣ ತೀರಿಸಲು ಗಡಿ ದಾಟಿ ಬಂದಿದ್ದೆ ಎಂದು ಹೇಳುವಾಗ ಅವನನ್ನು ತಲೆಹಿಡುಕ ಎಂದು ಕರೆಯೋದಾದರೂ ಹೇಗೆ. ಈ ಪ್ರಸ್ತುತಿಯನ್ನು ನೋಡಿಯೇ ಸವಿಯಬೇಕು. ಇಂಥಹ ಮನ ಕಲಕುವ ಸಾರ ಹೊಂದಿರುವ ನಾಟಕ ‘ಸಾಹೆ’. ಈ ನಾಟಕವನ್ನು ನೋಡುತ್ತಲೇ ದೇಶ ವಿಭಜನೆಯ ಕುರಿತು ನನ್ನ ಮನಸ್ಸು ಅಸಹ್ಯದಿಂದ ಮುದುಡಿತ್ತು.
‘ಸಾಹೆ’ ಯ ನಂತರ ವೇದಿಕೆಯೇರಿದ ಸಾದತ್ ಹಸನ್ ಮಂಟೋನನ್ನು ಕನ್ನಡಕ್ಕೇರಿಸಿದ ಹಸನ್ ನಯೀಂ ಸುರಕೋಡ ಸಾಹೇಬರು, ‘ಲೇಖಕನಾದೋನು ತನ್ನ ಕೃತಿಯ ಬಗ್ಗೆ ತಾನಾ ಮಾತಾಡಬಾರ್ದು. ಅದ್ರಾಗೂ, ಬಿಡುಗಡಿ ದಿನಾನಂತೂ ಮದ್ಲಾ ಮಾತಾಡಬಾರ್ದು’. ಅಂತ ಥೇಟ್ ನಮ್ಮ ಜವಾರಿ ಭಾಷಾ ಶೈಲಿಯಲ್ಲಿ ಮಾತಿಗೆ ಶುರುವಿಟ್ಟ ಕೂಡಲೇ ‘ಚತುರ್ಬುಜಕಿತ್ತ ನಾನು ನೆಕ್ಸ್ಟ್ ನಿಮ್ಮ ಭಾಷಣ ಎಲ್ಲಿರತೈತಿ ಹೇಳ್ರಿ ಸರಾ, ಹುಡಿಕ್ಕಂಬರ್ತಿನಿ. ಹೊಲ ಹೋಗ್ಲಿ ಮ್ಯಾರಿ ಉಳಿಲಿ’ ಅಂತ ಮನಸಲ್ಲೇ ಅಂದುಕೊಳ್ಳುತ್ತಿದ್ದೆ. ಮಾತು ಮುಂದುವರೆಸಿದ ಹಸನ್ ನಯೀಂ ಸುರಕೋಡರವರು ‘ ಇವತ್ತು ಶಾಂತವೀರ ಗೋಪಾಲಗೌಡ್ರ ನೆನಪಿನ ದಿನಾ ಐತಿ. ಅಂತ ನೆನಪು ಮಾಡಿಕೊಂಡು, ಮುಖಾಲಿ ಸ್ಥಾಪಿಸಿದ ‘ಪಾಕಿಸ್ತಾನ್ ಟೈಮ್ಸ್’ ಪತ್ರಿಕೆಯ ಕೆಲವು ಘಟನೆಗಳನ್ನು ಮೆಲುಕಿದರು. ಒಮ್ಮೆ ಲಾಹೋರ್ನ ಬೀದಿಯೊಂದರಲ್ಲಿ ಸುಂದರಿಯೊಬ್ಬಳಿದ್ದಳು. ಅವಳ ಮುಂಗುರುಳಿಗೇ ನೇಣು ಹಾಕಿಕೊಳ್ಳಲು ಪಡ್ಡೆಗಳ ಪಡೆಯೇ ಇತ್ತು. ಅವಳು ತನ್ನ ಮುಂಗುರುಳನ್ನು ಕುಣಿಸುತ್ತಾ ನಡೆದರೆ ಹುಡುಗರೆಲ್ಲಾ ಅವಳಿಗೆ ಕಂಪ್ಲೀಟ್ ಫಿದಾ. ಈ ಘಟನೆ ಹಾಗೆಯೇ ಡೆಯುತ್ತೆ ಇದರಿಂದ ಬೇಸತ್ತ ದರ್ಮಾಂಧನೊಬ್ಬ ಅವಳನ್ನು ತಡೆದು ಅವಳ ಮುಂಗುರುಳನ್ನು ಕತ್ತರಿಸುತ್ತಾನೆ. ಈ ಘಟನೆ ಏನೆಲ್ಲಾ ತಿರುವುಗಳಿಗೆ ದಾರಿಯಾಗುತ್ತೆ ಎಂಬುದನ್ನೂ ತಿಳಿಸಿದರು. ಮಾತಿಗೆ ವಂದಿಸಿದರು.
ಸುರಕೋಡರ ಮಾತುಗಳು ಮುಗಿಯುತಿದ್ದಂತೆಯೇವೇದಿಕೆಗೆ ಡಾ||ವಿಜಯಮ್ಮ, ವಸಂತರಾಜ್ ರವರ ಆಗಮನ. ನಂತರ ಕಾರ್ಯಕ್ರಮದಲ್ಲಿ ಕಥಾರಂಗಕ್ಕೆ ಶ್ರಮಿಸಿದ ಕಲಾವಿದರು ತಂತ್ರಜ್ಞರಿಗೆ ಗೌರವ ಪ್ರತಿಯನ್ನು ಈ ಅತಿಥಿಗಳು ನೀಡಿದರು. ಕವಿತ ಅನ್ನೋ ಹರಿಯಾಣದ ಹುಡುಗಿ ಈ ಬೆಂಗಳೂರಿಗೆ ಬಂದು ಕನ್ನಡ ಕಲಿತು ಇಂಥಹ ಒಂದು ಕಾರ್ಯಕ್ರಮದಲ್ಲಿ ಕಥಾರಂಗದ ಕಲಾವಿದೆಯಾದದ್ದು ತಿಳಿದು ಹಿಗ್ಗೆನಿಸಿತು. ನಿರಂಜನ್, ದೇವ್, ಮಾಲತೇಶ್, ಜೋಷಿ, ಸತೀಶ್ ಗಟ್ಟಿ, ಹೀಗೆ ಎಲ್ಲರಿಗೂ ಗೌರವ ಪ್ರತಿಗಳು ಸಂದವು.
ಸಾಹಿತ್ಯ ಅಕಾಡೆಮಿಯ ರಿಜಿಸ್ಟರ್ ಭಾಗ್ಯ ಮೇಡಂ, ಉರ್ದು ಸಾಹಿತ್ಯ ಅಕಾಡೆಮಿಯ ಮಿರ್ಜಾರವರು ಡಾ|| ವಿಜಯಮ್ಮರಿಗೆ ನೆನಪಿನ ಕಾಣಿಕೆ ಅರ್ಪಿಸಿದರು. ವಿಜಿಯಮ್ಮ ವಸಂತರಾಜ್ ರಿಗೆ ನಿನಪಿನ ಕಾಣಿಕೆ ನೀಡಿದರು. ಅಂಗವಿಕಲರ ಸಂಘದ ಅಧ್ಯಕ್ಷರಾದ ಜಿ ಎನ್ ನಾಗರಾಜ್ ರಿಗೆ ಇಡೀ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟ ವಿಮಲಾರವರು ಗೌರವ ಪ್ರತಿಯನ್ನು ನೀಡಿ, ಕೊನೆಯದಾಗಿ ಸುರೇಂದ್ರರನ್ನು ವಂದಾನಾರ್ಪಣೆಗೆ ವೇದಿಕೆಗೆ ಆಹ್ವಾನಿಸಿದರು. ವೇದಿಕೆಗೆ ಬಂದ ಸುರೇಂದ್ರರು ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂಭತ್ತರ ಹರೆಯದ ಎಂ ಎಸ್ ಸತ್ಯುರಿಗೆ, ಅನುವಾದಕ ಸುರಕೋಡ ಸಾಹೇಬರಿಗೆ, ವಿಜಯಮ್ಮರಿಗೆ ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ವಂದಿಸಿದರು.
ಇಡೀ ಕಾರ್ಯಕ್ರಮದಲ್ಲಿ ನಾನು ಮರೆಯದೇ ಇರೋದು ಮತ್ತು ಕಾರ್ಯಕ್ರಮಕ್ಕೆ ಪ್ರೇಕ್ಷರನ್ನು ಹಿಡಿದಿಟ್ಟಿದ್ದು ಅಂದ್ರೆ ಅದು, ಬೆಂಗಳೂರಿನ ‘ಸಮುದಾಯ’ ತಂಡ ಮತ್ತು ಮೈಸೂರಿನ ‘ಪರಿವರ್ತನ’ ತಂಡಗಳ ಕಲಾವಿದರ ಮನೋಜ್ಞ ಅಭಿನಯದ ಸಾದರಪಡಿಸುವಿಕೆ. ಇಲ್ಲಿ ನಾನು ಮಂಟೋನ ಬದುಕು ಬರಹಗಳ ಬಗ್ಗೆ ಮತ್ತು ಕಾರ್ಯಕ್ರಮದ ಅಷ್ಟೂ ವಿವರಗಳನ್ನು ನಿಮ್ಮೆದಿರು ಹಂಚಿಕೊಳ್ಳಲಾಗಿಲ್ಲ. ಮನೆಗೆ ಬಂದ ಅಥಿತಿಗೆ ಅರೆ ಸತ್ಕಾರ ಮಾಡಿದ ಕಸಿವಿಸಿ ನನ್ನಲ್ಲೂ ಇದೆ. ಅದ್ಯಾಕೆ ಹೀಗೆ ಅಂದ್ರೆ ಈಗ ಈ ಕಿಡಿಗೇಡಿಯ ಮುಂದೆ ಸಾದತ್ ಹಸನ್ ಮಂಟೊನ ‘ಸ್ಯಾಮ್ ಅಂಕಲ್ ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು’ ಕನ್ನಡ ಅವತರಣಿಕೆಯ ಪ್ರತಿ ಸಿಕ್ಕಿದೆ. ಒಂಚೂರು ಟೈಂ ಕೊಡಿ. ಮತ್ತೆ ಮಂಟೊನೊಂದಿಗೆ ನಿಮ್ಮೆದಿರು ಅವನ ಕಿಡಿಗೇಡಿ ಬರಹಗಳ ಕಚಗುಳಿಯನ್ನು ಹಂಚಿಕೊಳ್ಳುತ್ತೇನೆ.
Advertisements