ಹಸನ್ ನಯೀಮ್ ಸುರಕೋಡು ಸಾಹೇಬರ ಈ ಕೃತಿಗೆ ಮುನ್ನುಡಿ ಬರೆಯುವುದಕ್ಕಿಂತ ದೊಡ್ಡ ಕಿಡಿಗೇಡಿತನ ಮತ್ತೊಂದಿದ್ದರೆ ಅದು; ಈ ಪುಸ್ತಕಕ್ಕೆ ನಾನೇ ಮುನ್ನುಡಿ ಬರೆಯಬೇಕೆಂದು ಅವರು ಒತ್ತಾಯಿಸಿದ್ದು.

ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ, ವಿರೋಧ ಪಕ್ಷದಲ್ಲಿದ್ದಾಗಲೆಲ್ಲ, ಯುದ್ಧ ಘೋಷಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆರ್ಭಟಿಸುವ ನಾವು, ಅಕಾಸ್ಮಾತ್ ಆಡಳಿತ ಪಕ್ಷಕ್ಕೆ ಸೇರಿಬಿಟ್ಟಿದ್ದರೆ, ಯುದ್ಧವೊಂದೇ ಪರಿಹಾರವಲ್ಲ ಎಂಬ ಶಾಂತಿ ಮಂತ್ರ ಹಾಡುತ್ತೇವೆ. ನಮ್ಮ ಈ ಸಕಾಲಿಕ ಗೋಸುಂಬೆತನಕ್ಕೂ ಸಕಾರಣಗಳಿವೆ. ಈಗೆಲ್ಲ ಯುದ್ಧ ಬಲು ದುಬಾರಿ ಕಾರ್ಯಕ್ರಮ.

ಆಧುನಿಕ ಕಾಲದ ಯುದ್ಧಗಳಲ್ಲಿ ಹಳೆಯ ಸಿನೆಮಾಗಳಲ್ಲಿರುವಂತೆ ಆನೆ-ಕುದುರೆಗಳನ್ನೇರಿ ಖಡ್ಗ ಝಳಪಿಸುತ್ತಾ, ಕೊಂಬು ಕಹಳೆಗಳನ್ನೂದಿದರೆ ವೈರಿಗಳು ಶರಣಾಗುವುದಿಲ್ಲ. ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಸುಮಾರು ೨೦೦ ಲಕ್ಷ ಕೋಟಿ ರೂಪಾಯಿ [ರೂ.೨೦೦೦೦೦೦೦,೦೦,೦೦,೦೦೦] ವೆಚ್ಚದಲ್ಲಿ ಅಮೇರಿಕಾ ನಡೆಸಿದ/ನಡೆಸುತ್ತಿರುವ ಪ್ರಜಾಪ್ರಭುತ್ವಕ್ಕಾಗಿ ಯುದ್ಧಗಳು ಇದಕ್ಕೆ ಉದಾಹರಣೆಗಳು. ಯುದ್ಧದಿಂದ ಗೆಲ್ಲಲಾಗದ ಅದೆಷ್ಟೋ ಸಂಗತಿಗಳು ಸೌಹಾರ್ದ ಮಾತುಕತೆಗಳಿಂದ ಸಮಾಧಾನಕರ ಬಹುಮಾನ ಪಡೆದುಕೊಂಡದ್ದಕ್ಕೆ ಸಾಕ್ಷಿಗಳಿವೆ. ಇಂತಹ ದೇಶಪ್ರೇಮೀ ಸೂಕ್ಷ್ಮಗಳನ್ನು ಆರು ದಶಕಗಳಿಗೂ ಹಿಂದೆಯೇ ಗುರುತಿಸಿ, ಜನತಾ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ತಕರಾರುಗಳನ್ನು ಕಾಲದಿಂದ ಕಾಲಕ್ಕೆ ದಾಖಲಿಸುತ್ತಿದ್ದವರು ಸಾದತ್ ಹಸನ್ ಮಂಟೊ. ತಮ್ಮ ಕಣ್ಣೆದುರು ವಿತರಿಸಲಾಗುತ್ತಿದ್ದ ವಿಷದ ಬಾಟಲುಗಳು ಬೇರೆಯವರಿಗೆ ಸಿಗದಿರಲಿ ಎಂಬ ಹಟದಿಂದೆಂಬಂತೆ ಎಲ್ಲವನ್ನೂ ತನ್ನ ಗಂಟಲೊಳಗೇ ಸುರಿದುಕೊಂಡ ವಿಷಕಂಠ ಈ ಮಂಟೊ. ಹಿಂದೂಸ್ತಾನ ಮತ್ತು ಪಾಕಿಸ್ತಾನಗಳು ವಿಭಜನೆಯ ಭಜನೆಯಲ್ಲಿ ಮುಳುಗಿರುವಷ್ಟು ಕಾಲ ಸಾಹಿತ್ಯೇತರ ಕಾರಣಗಳಿಗೂ, ಮನುಷ್ಯನಿಗೆ ಓದು ಇನ್ನು ಸಾಕು ಅಂತ ಅನ್ನಿಸುವವರೆಗೆ ಸಾಹಿತ್ಯಿಕ ಕಾರಣಗಳಿಗೂ ನಿತ್ಯ ನೆನಪಾಗಬಲ್ಲ ಅಕ್ಷರ ಸಂತ ಇವರು.

ದೇವರಲ್ಲಿ ಗುಲಗುಂಜಿಯಷ್ಟೂ ನಂಬಿಕೆಯಿಲ್ಲದಿದ್ದರೂ ಖಾಲಿ ಬಿಳಿ ಹಾಳೆಯ ನೆತ್ತಿಯ ಮೇಲೆ, ಮುಸ್ಲಿಮರು ಪವಿತ್ರ ಎಂದು ನಂಬುತ್ತಾರೆನ್ನಲಾದ ೭೮೬ ನಮೂದಿಸಿಯೇ ಅದ್ಭುತವಾದ ಕತೆಗಳನ್ನು ಬರೆಯುತ್ತಿದ್ದ ಅವರನ್ನು ಮೊದಲ ದರ್ಜೆಯ ಫ್ರಾಡ್ ಎಂದವರಿದ್ದರು. ಕಳ್ಳ, ಸುಳ್ಳುಗಾರ, ಕುಡುಕ, ಮೋಸಗಾರ ಎಂದು ದೂಷಿಸಿದವರಿದ್ದರು. ತಮಾಶೆಯೆಂದರೆ ಹಾಗೆಲ್ಲ ಆಪಾದಿಸಿದವರಲ್ಲಿ ಸ್ವತಃ ಮಂಟೋ ಅವರೂ ಇದ್ದರು. ಬರೆದ ಮೊದಲ ಕತೆ ತಮಾಶಾವನ್ನು ಬೇರೆಯವರ ಹೆಸರಲ್ಲಿ ಪ್ರಕಟಿಸಿದ್ದ ಮಂಟೋ ಎಂದೂ ನೇರ ದಾರಿಯಲ್ಲಿ ಹೆಜ್ಜೆ ಹಾಕಿದವರಲ್ಲ. ಅವರದ್ದು ಯಾವಾಗಲೂ ಹಗ್ಗದ ಮೇಲಿನ ನಡಿಗೆ. ಯಾವುದೇ ಕ್ಷಣದಲ್ಲಿ ಮಂಟೋ ಕಾಲು ಜಾರಿ ಬಿದ್ದು ಬೀಳಬಹುದೆಂದು ಬಹಳಷ್ಟು ಮಂದಿ ನಿರೀಕ್ಷಿಸಿದ್ದರು; ಬಯಸಿದವರೂ ಇದ್ದರು.

ಮಂಟೊ ಬೇಜವಾಬ್ದಾರಿತನದಿಂದ ಎಚ್ಚರ ತಪ್ಪಿ ಬಿದ್ದದ್ದು ಒಮ್ಮೆ ಮಾತ್ರ; ಸಾಯುವುದಕ್ಕಿಂತ ಅರೆಕ್ಷಣ ಮೊದಲು.

ಅವರು ಮಾಡಿದ್ದಿರಬಹುದಾದ ಒಂದೇ ಒಂದು ಅತ್ಯಂತ ಬೇಜವಾಬ್ದಾರಿ ಕೆಲಸವೆಂದರೆ, ಅವರು ಸತ್ತುಹೋದದ್ದು.

ಈಗ ದೊಡ್ಡಣ್ಣ ಎನ್ನಿಸಿಕೊಂಡಿರುವ, ಹಿಂದೆಯೆಲ್ಲ ಅಂಕಲ್ ಸ್ಯಾಮ್ ಎಂದು ಕರೆಸಿಕೊಳ್ಳುತ್ತಿದ್ದ ಅಮೇರಿಕಾದ ಪ್ರಭುತ್ವದ ನಿಜ ಹೂರಣವನ್ನು, ಸ್ಯಾಮ್ ಅಂಕಲ್ ಗೆ ಪತ್ರಗಳು ಎಂಬ ಕಿಡಿಗೇಡಿ ಬರಹಗಳ ಮೂಲಕ ಅನಾವರಣಗೊಳಿಸಿದ್ದ ಮಂಟೊರದ್ದು ಅನನ್ಯ ಸೃಜನಶೀಲ ಪ್ರತಿಭೆ. ಆರು ದಶಕಗಳ ಹಿಂದೆ ಮಂಟೊ ಬರೆದ ಆ ಪತ್ರಗಳಲ್ಲಿ ತಮಾಷೆಯಾಗಿಯೇ ವ್ಯಕ್ತಪಡಿಸಿದ್ದ ಹಿಂದೂಸ್ತಾನ, ಪಾಕಿಸ್ತಾನ ಮತ್ತು ಅಮೇರಿಕಾ ನಡುವಣ ರಾಜ ತಾಂತ್ರಿಕ ಸಂಬಂಧಗಳ ಒಕ್ಕಣೆ-ವಿವರಣೆಗಳು ಇಂದು ಕೂಡಾ ಪ್ರಸ್ತುತವೆನ್ನಿಸತೊಡಗಿದಾಗ ಗಾಬರಿಯಾಗುತ್ತದೆ.

ಬರಹಗಾರನೊಬ್ಬನಿಂದ ಇಷ್ಟೊಂದು ಕರಾರುವಾಕ್ಕಾಗಿ ಕಣಿ ಹೇಳಲು ಸಾಧ್ಯವೇ? ನಂಬಲಾಗದ ಸತ್ಯ ಇದು.

ಬಾಯಿ ತೆರೆಯುವುದೇ ಶರಾಬು ಸುರಿದುಕೊಳ್ಳಲು ಎಂದು ನಂಬಿದ್ದ ಮಂಟೊರ ಬದುಕು ಬರಹಗಳನ್ನು ಸುರಕೋಡ ಸಾಹೇಬರು ಅದೆಷ್ಟು ಚೆನ್ನಾಗಿ ಅರೆದು ಕುಡಿದಿದ್ದಾರೆ ಎಂಬುದಕ್ಕೆ ಅವರು ಈ ಸಂಕಲನಕ್ಕೆ ಬರೆದಿರುವ ಸಂಕ್ಷಿಪ್ತ ಪ್ರಸ್ತಾವನೆಯೇ ಸಾಕ್ಷಿ. ಮಂಟೊ ಮತ್ತು ಮಂಟೊರ ಬಗ್ಗೆ ಬೇರೆ ಬೇರೆಯವರು ಬರೆದ ೨೩ರಷ್ಟು ಬರಹಗಳನ್ನು, ಧರ್ಮನಿಷ್ಟರ ಪ್ರಾರ್ಥನೆಯಿಂದಾರಂಭಿಸಿ, ಲೋಕಾವಲೋಕನ, ಆತ್ಮಾವಲೋಕನ, ಭರತವಾಕ್ಯ, ಅಂಕದ ಪರೆದೆ ಜಾರಿದ ಮೇಲೆ – ಹೀಗೆ ಐದು ವಿಭಾಗಗಳಲ್ಲಿ ಸಂಗ್ರಹಿಸಿ, ಅನುವಾದಿಸಿ ಈ ಸಂಕಲನದಲ್ಲಿ ದಾಖಲಿಸಿರುವ ಸುರಕೋಡು ಸಾಹೇಬರ ಶ್ರಮ ಮತ್ತು ಕ್ರಮ ಅಭಿನಂದನಾರ್ಹ. ಕೇವಲ ಈ ಬಗೆಯ ಕಿಡಿಗೇಡಿ ರಚನೆಗಳನ್ನಷ್ಟೇ ಸಂಕಲಿಸಿದರೆ, ಮಂಟೊರ ನಿಜವನ್ನು ಅರಿಯದ ಹೊಸ ಓದುಗರಿಗೆ ಅನ್ಯಾಯವಾದೀತೆಂಬ ಅಳುಕಿನಿಂದ, ಆ ಮಹಾನ್ ಸಾಹಿತಿಯು ಭಾರತೀಯ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳ ಬಗ್ಗೆಯೂ ಕೆಲವು ಅಪರೂಪದ, ಅಮೂಲ್ಯ ಬರಹಗಳನ್ನು ಅನುವಾದಿಸಿ ಸೇರಿಸಿಕೊಂಡ ಸುರಕೋಡು ಸಾಹೇಬರ ಎಚ್ಚರ ಹೊಸಬರಿಗೆ ಒಂದೊಳ್ಳೆಯ ಪಾಠ.

ಇಂತಹ ಅಪರೂಪದ ಸಂಕಲನವನ್ನು ಕನ್ನಡದ ಓದುಗರಿಗೆ ಒದಗಿಸುತ್ತಿರುವ ಚಿಂತನ ಪುಸ್ತಕದವರಿಗೆ ನಾನು ಕೃತಜ್ಞ.

ಬೊಳುವಾರು ಮಹಮದ್ ಕುಂಞಿ
ಎಪ್ರಿಲ್ ೧, ೨೦೧೩

ಶೀರ್ಷಿಕೆ: ಸ್ಯಾಮ್ ಅಂಕಲ್ ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು
ಅನುವಾದ : ಹಸನ್ ನಯೀಂ ಸುರಕೋಡ
ಬೆಲೆ : ರೂ.140/-

Advertisements