ಫೈಜ್ ನಾಮಾ

ಸಂ: ಹಸನ್ ನಯೀಂ ಸುರಕೋಡ ಕವಿತೆಗಳ ಅನುವಾದ: ಎಲ್.ಕೆ. ಅತೀಕ್, ಕೆ.ಷರೀಫಾ ಪು: 240; ಬೆ: ರೂ. 190 ಪ್ರ: ಚಿಂತನ ಪುಸ್ತಕ, ನಂ 405, 10ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, ಡಾಲರ್ಸ್‌ ಕಾಲೋನಿ, ಜೆ.ಪಿ. ನಗರ, 4ನೇ ಫೇಸ್, ಬೆಂಗಳೂರು- 560 078

ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ಕವಿತೆಗಳನ್ನು, ಅವರ ಬದುಕಿಗೆ ಸಂಬಂಧಿಸಿದ ಪುಟಗಳನ್ನು ಈ ಪುಸ್ತಕದಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ ಹಸನ್ ನಯೀಂ ಸುರಕೋಡ.

ಇಲ್ಲಿ ಫೈಜ್ ತಮ್ಮ ಬರೆದುಕೊಂಡ ಕೆಲವು ಪುಟಗಳು ಅವರ ಪತ್ನಿ ಬರೆದ ಕೆಲವು ಪುಟಗಳನ್ನು ಅನುವಾದಿಸಿ ಕೊಡಲಾಗಿದೆ. ತಮ್ಮ ಕುರಿತಂತೆ ಕವಿಯೂ ಬರೆದುಕೊಂಡಿರುವುದೂ ಸೇರಿದಂತೆ ಬೇರೆಯವರು ಬರೆದ ಬರಹಗಳು ಇಲ್ಲಿವೆ. ಇನ್ನುಳಿದ ಪುಟಗಳು ಫೈಜ್ ಕಾವ್ಯದ ಅನುವಾದ.

ಈ ಹಿಂದೆಯೇ ಎಲ್.ಕೆ. ಅತೀಕ್ ಫೈಜ್ ಕವಿತೆಗಳನ್ನು ಅನುವಾದಿಸಿದ್ದರು. ಅದರೊಂದಿಗೆ ಕೆ. ಷರೀಫಾ ಅವರ ಕೆಲವು ಕವಿತೆಗಳನ್ನು ಅನುವಾದಿಸಿದ್ದು, ಅದನ್ನು ಇಲ್ಲಿ ಕೊಡಲಾಗಿದೆ. ಗದ್ಯ ಭಾಗದ ಅನುವಾದ ಪುಸ್ತಕದ ಸಂಪಾದಕರಾದ ಹಸನ್ ನಯೀಂ ಸುರಕೋಡ ಅವರದು.

ಫೈಜ್ ಕಾವ್ಯ ಉರ್ದು ಕಾವ್ಯ ಪ್ರಕಾರವಾದ `ಗಜಲ್’ ಹಾಗೂ `ನಜ್ಮ’ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಫೈಜ್ ನಿಜವಾದ ಸಮಾಜವಾದಿ ಕವಿ. ಅವರ ಕಾವ್ಯದ ಬದ್ಧತೆ ಸಮಾಜದ ಪರ, ಜೊತೆಗೆ ಅದು ಬಂಡುಕೋರತನದ್ದು.

ಅದು ಅಸಮಾನತೆ, ಶೋಷಣೆಯ ವಿರುದ್ಧವಾದದ್ದು. ಪತ್ರಕರ್ತ, ಅನುವಾದಕ, ಅಧ್ಯಾಪಕ, ಸಿನಿಮಾ ನಿರ್ಮಾಪಕ ಹೀಗೆ ಹಲವು ರಂಗಗಳಲ್ಲಿ ಕೆಲಸ ಮಾಡಿದ ಫೈಜ್ ಮೂಲತಃ ಕವಿಯಾಗಿಯೇ ಮುಖ್ಯರಾದವರು.

ಅವರಂತೆ ಬದುಕಿನ ಹೋರಾಟದಲ್ಲಿ ಮುಳುಗೆದ್ದ ಮತ್ತೊಬ್ಬ ಕವಿ ಕಾಣಸಿಗುವುದು ವಿರಳ. ಉರ್ದು ಕಾವ್ಯದ ಒಬ್ಬ ಮಹತ್ವದ ಕವಿಯನ್ನು ಅವನ ಜೀವನದ ವಿವರಗಳೊಂದಿಗೆ ಕೊಡುವ  ಪ್ರಯತ್ನದಲ್ಲಿ ಈ ಪುಸ್ತಕ ಯಶಸ್ವಿಯಾಗಿದೆ.

ಕವಿತೆಗಳ ಜೊತೆಗೇ ಕವಿಯ ಬದುಕಿನ ವಿವರಗಳು ಒಂದೆಡೆ ದೊರಕುವುದರಿಂದ ಓದುಗರಿಗೆ ಸಮಗ್ರವಾಗಿ ಕವಿಯನ್ನು ಅರಿತುಕೊಳ್ಳಲು ಸಾಧ್ಯವಾಗುವಂತೆ ಇಲ್ಲಿನ ಅನುವಾದವಿದೆ.

-ಸಂದೀಪ ನಾಯಕ

Advertisements