ವಿಶ್ವವೇ ಅಂತರ ರಾಷ್ಟ್ರೀಯ ಮಹಿಳಾ ದಿನದ ಶತಮಾನೋತ್ಸವ ಆಚರಿಸುತ್ತಿರುವ ಈ ವರ್ಷದಲ್ಲಿ ಮಹಿಳಾ ಪರ ಚಿಂತನೆಯ ಪುಸ್ತಕಗಳನ್ನು ಹೊರತರುವ ಆಶಯ ಹೊತ್ತ  ಚಿಂತನ ಪುಸ್ತಕಕ್ಕೆ ನೆರವಾದವರು ಮೀನಾಕ್ಷಿ ಬಾಳಿ ಹಾಗೂ ಜನವಾದಿ ಮಹಿಳಾ ಸಂಘಟನೆ. ಮೀನಾಕ್ಷಿಯವರು ಮಹಿಳಾ ಪರ ಚಿಂತನೆಯ ತಮ್ಮ ಬಿಡಿ ಲೇಖನಗಳ, ಅಂಕಣ ಬರಹಗಳ ರಾಶಿಯನ್ನೇ ನಮ್ಮ ಮುಂದಿಟ್ಟರು. ಅದರಲ್ಲಿ ಕೆಲವನ್ನು ಆರಿಸಿ ಎರಡು ಪುಸ್ತಕಗಳನ್ನು ಪ್ರಕಟಿಸಿದೆವು. ಈ ಪುಸ್ತಕಗಳ ಬಿಡುಗಡೆಯು ಲೇಖಕರ ಆಸೆಯಂತೆ `ಜನವಾದಿ ಮಹಿಳಾ ಸಂಘಟನೆ’ಯ 7ನೇ ರಾಜ್ಯ ಸಮ್ಮೇಳನದ ಸಂದರ್ಭ(28-08-2010)ದಲ್ಲಿ ಬಿಡುಗಡೆ ಮಾಡಲಾಯಿತು.

ನಮ್ಮ `ಮನದ ಸೂತಕ ಹಿಂಗಿದೊಡೆ’ ಹಾಗೂ `ಕತ್ತಲಂಚಿನ ಕಿಡಿಗಳು’ ಪುಸ್ತಕಗಳೊಂದಿಗೆ ಇನ್ನೊಬ್ಬ ಮಹಿಳಾ ಪರ ಚಿಂತಕಿಯ `ಆಕಾಶಧಾರೆ’ ಪುಸ್ತಕವೂ ಆ ಸಂದರ್ಭದಲ್ಲಿ  ಬಿಡುಗಡೆಗೊಂಡಿತು.

ಈ ಪುಸ್ತಕಗಳನ್ನು ಪ್ರಗತಿಪರ ಚಿಂತಕಿ, ಲೇಖಕಿ ಕೆ. ಷರೀಫಾ ಅವರು ಬಿಡುಗಡೆ ಮಾಡುತ್ತಾ `ಮಹಿಳಾ ಚಳುವಳಿಗಾರ್ತಿಯರು ಬರೆಯುವುದಕ್ಕೂ ಬೇರೆಯವರು ಬರೆಯುವುದಕ್ಕೂ ಬಹಳ ವ್ಯತ್ಯಾಸವಿದೆ. ಮೀನಾಕ್ಷಿ ಬಾಳಿಯಾಗಲಿ ಶಾಂತಾ ಮಠ್ ಅವರ ಬರಹಗಳು ವಾಸ್ತವತೆಯ ಗಟ್ಟಿತನ ಪಡೆದವುಗಳು’ ಎಂದರು. ಶಾಂತಾ ಮಠ್ ಅವರ `ಆಕಾಶಧಾರೆ’ ಗುಲ್ಬರ್ಗಾ ಟಿ.ವಿ.ಯಲ್ಲಿ ಪ್ರಸಾರವಾದ ೫ ನಿಮಿಷಗಳ ಚಿಂತನ ಮಾಲೆ. ನೇರ, ಸ್ಪಷ್ಟ, ದಿಟ್ಟ ಬರಹ. ಎಷ್ಟೋ ಕೃತಿಗಳು ಏನು ಬೇಕೋ ಅದನ್ನು ಹೇಳದೆ ಗೊಂದಲದ ಗೂಡಾಗಿರುತ್ತದೆ. ಇದು ಹಾಗಿಲ್ಲದಿರುವುದಕ್ಕೆ ಶಾಂತಾ ಅವರು ಜನವಾದಿ ಚಳುವಳಿಯಲ್ಲಿ ತೊಡಗಿಕೊಂಡಿರುವುದೇ ಕಾರಣ. ಎಂದರು.

ಪುಸ್ತಕದ ಬಗ್ಗೆ ಮಾತನಾಡುವ ಜವಾಬ್ದಾರಿ ಹೊತ್ತ ಬೆಂಗಳೂರು ವಿಶ್ವ ವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಡಾ. ವಸು ಅವರು `ಹೆಣ್ಣು-ಗಂಡು’ ಎನ್ನುವ ಲಿಂಗ ತಾರತಮ್ಯ ಮೀರಿ ಮಹಿಳಾ ಲೇಖಕಿಯರ ವೈಚಾರಿಕ ಬರಹಗಳನ್ನೂ ಸಹ ಮುದ್ದಾಗಿ ಹೊರತಂದ `ಚಿಂತನ ಪುಸ್ತಕ’ ವನ್ನು “ಕನ್ನಡ ನಾಡಿನ ಮುಖ್ಯ ಪ್ರಕಾಶಕರಲ್ಲಿ ಚಿಂತನ ಪುಸ್ತಕವೂ ಒಂದು. ಪುಸ್ತಕ ಪ್ರಕಾಶನದ ಇಂದಿನ ದಂಧೆಯ ನಡುವೆ ಮೌಲ್ಯಯುತವಾದ ಪುಸ್ತಕಗಳನ್ನು ತರುತ್ತಿರುವ ಕನ್ನಡದ ಕೆಲವೇ ಕೆಲವು ಪ್ರಕಾಶನಗಳಲ್ಲಿ ಇದು ಒಂದು. ಬಹುತೇಕ `ಚಿಂತನ ಪುಸ್ತಕ’ದಿಂದ ಬರುವ ಬಹುತೇಕ ಎಲ್ಲಾ ಕೃತಿಗಳು ಪ್ರೊಗ್ರೆಸಿವ್ ಲೇಖಕರಿಂದ ಬರುತ್ತಿವೆ. ಪ್ರಗತಿಪರ, ಹೋರಾಟಗಾರರ, ಚಳುವಳಿಗಾರರ ಪುಸ್ತಕವನ್ನು ಅವರು ತರುತ್ತಿದ್ದಾರೆ” ಎಂದರು.

`ಕನ್ನಡದಲ್ಲಿ ಮಹಿಳಾ ಬರಹಕ್ಕೆ ಇತಿಹಾಸ ಇಲ್ಲ ಎಂದೇ ಎನ್ನಬಹುದು. ಅಕ್ಕ ಮುಂತಾದ ವಚನಕಾರ್ತಿಯರ ಉದಾಹರಣೆ 12ನೇ ಶತಮಾನದಲ್ಲಿ ಕಂಡು ಬಂದರೆ ನಂತರದ ದೊಡ್ಡ ಗ್ಯಾಪ್ ನ ನಂತರ 20 ನೇ ಶತಮಾನದ ತಿರುಮಲಾಂಬಾ, ಕಲ್ಯಾಣಮ್ಮನನ್ನಷ್ಟೇ ನಾವು ಗುರುತಿಸಬಹುದು. ಆದ್ದರಿಂದ ಕನ್ನಡತಿಯರಾದ ಎರಡು ಸಾವಿರ ವರ್ಷ ನಾವು ಓದದಿದ್ದರೇನು. ನಾವು ಓದಲು ಪ್ರಾರಂಭಿಸಿದ್ದೇ ಆಧುನಿಕ ಕಾಲದ ಆಧುನಿಕ ಚಿಂತನೆಯಿಂದ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದುನಿಕ ಚಿಂತನೆಯ ಪರಂಪರೆಯಿಂದ ಬಂದ ಲೇಖಕಿಯಾಗಿ ನನಗೆ ಬಾಳಿಯವರು ಕಾಣುತ್ತಾರೆ. ಲೇಖಕಿಯರದು ಬರಿಯ ಅಡುಗೆ ಮನೆ ಸಾಹಿತ್ಯ ಎಂದು ಮೂದಲಿಕೆಗೆ ಒಳಗಾಗಿರುವಾಗ ಬಾಳಿಯವರು ಲೇಖಕಿಯರು ವೈಚಾರಿಕ ಬರಹಕ್ಕೂ ಸೈ ಎನ್ನುವಂತೆ ಕಾಣುತ್ತಾರೆ. ಇಲ್ಲಿನ ಬರಹಗಳಲ್ಲಿ ರಾಜಕೀಯ ವಿಶ್ಲೇಷಣೆಯಿದೆ ಹಾಗೇ ಅದರ ಹಿಂದೆ ಸೈದ್ಧಾಂತಿಕವಾದ ಕಮಿಟ್ ಮೆಂಟ್ ಇದೆ. ಚಳುವಳಿ ಅವರನ್ನು ಬರಹಗಾರ್ತಿಯನ್ನಾಗಿ ಮಾಡಿದೆ.

ಚರಿತ್ರೆಯ ಹಿನ್ನೆಲೆಯಿಂದ ಬಂದಿರುವ ವ್ಯಕ್ತಿಯಾದ ನಾನು ಅವರ ಮೊದಲ ಕತೆ ನನಗೆ ತುಂಬಾ ಇಷ್ಟವಾಯಿತು. ನನಗೆ ಆ ಕತೆಯನ್ನು ಓದಿ ಮುಗಿಸಿದಾಗ ಒಂದು ವಿಚಾರ ಮನಸ್ಸಿಗೆ ಬಂತು. ಅದೇನೆಂದರೆ ಕನ್ನಡದಲ್ಲಿ ಸಿನೆಮಾ ತೆಗೆಯುವಾಗ ಕನ್ನಡದಲ್ಲಿ ಕತೆಗಳೇ ಇಲ್ಲವೆಂಬಂತೆ ಬರಿಯ ಹಳಸಲು ಕತೆಗಳನ್ನೇ ಹೊಸದೇನೋ ಎಂಬಂತೆ ತೆಗೆಯುತ್ತಾರೆ. ಆದರೆ ಬಾಳಿಯವರ ಅಂಕಣ ಬರಹದಲ್ಲಿ ಬರುವ ಹೆಣ್ಣುಗಳ ಕತೆಗಳು ಅವರ ಕಣ್ಣಿಗೆ ಬಿದ್ದಿಲ್ಲವೇನೋ ಎಂಬಂತಿವೆ. ಹಸಿ ಹಸಿಯಾದ ಐತಿಹಾಸಿಕ ಸತ್ಯದ ಹಿನ್ನೆಲೆಯಲ್ಲಿ ಬರೆದ ಅಂಕಣಗಳು ಇವಾಗಿರುವುದರಿಂದ ಇವಕ್ಕೆ ಈ ಗುಣ ಬಂದಿದೆ ಎನ್ನಬಹುದು. ಇಲ್ಲಿ ಕತೆಗಳು ಮಾತ್ರಾ ಹೆಣ್ಣಿನ ಕುರಿತಾಗಿ ಅಲ್ಲ,  ಕತೆಯ ವಿಚಾರವೂ ಹೆಣ್ಣಿನದಾಗಿದೆ ಎಂಬುದು ಗಮನಾರ್ಹ. ಬಹಳ ಪ್ರಸಿದ್ಧನಾದ ಒಬ್ಬ ತತ್ವಪದಕಾರನ ಜೊತೆಗೆ ಸಂಬಂಧವನ್ನು ಹೊಂದಿದಂತಹ ಒಬ್ಬಳು ಗಾಯಕಿಯ ಕುಂಬಾರ ರಾಚವ್ವನ ವಿಷಯ ಇದು. ಕರ್ನಾಟಕದ ಕನ್ನಡದ ಮಹಿಳಾ ಪರಂಪರೆಯನ್ನು ಬರೆಯುವಾಗ, ಅವಳ ಚರಿತ್ರೆಯನ್ನು ಕಟ್ಟಿಕೊಡುವಾಗ ಎಲ್ಲೂ ದಾಖಲೆಗಳೇ ಇಲ್ಲ ಎಂದು ನಾವು ಅಳುತ್ತಿರುವಾಗ ಅಲ್ಲಿಗೆ ಸೃಷ್ಟಿಯಾಗಬಹುದಾದ ಒಂದು ದೊಡ್ಡ ಸೋರ್ಸ್ ಆಗಿ ಇದು ಕಾಣಿಸುತ್ತದೆ. ಮೌಖಿಕ ಪರಂಪರೆಯನ್ನು ಬಳಸಿಕೊಂಡು ಅದನ್ನು ಲೇಖನವಾಗಿ ಬರೆಯುವಂತಹ ಹಿಡಿದಿಡುವಂತಹ ಕಲೆಗಾರಿಕೆ ಈ ಬರಹಗಳಲ್ಲಿದೆ. ಇಂದಿರಾ ಗಾಂಧಿಯವರ, ಕ್ಯಾಪ್ಟನ್ ಲಕ್ಷ್ಮೀ ಸೈಗಲ್ ಅವರ ಜೀವನ ಚರಿತ್ರೆಯನ್ನು ಬರೆಯುವುದು ಎಷ್ಟು ಮುಖ್ಯವೋ ಕುಂಬಾರ ರಾಚವ್ವನ ಜೀವನ ಚರಿತ್ರೆಯನ್ನು ಬರೆಯುವುದು ಅಷ್ಟೇ ಮುಖ್ಯ. ಇಂತಹ ಬರಹಗಳು ಚಾರಿತ್ರಿಕ ಬರಹಗಳೂ ಆಗಿವೆ.

ಮಹಿಳಾ ಚಳುವಳಿಯನ್ನೇ ಬದುಕಾಗಿಸಿಕೊಂಡಿರುವ ಇವರ ಬರಹ ಆ ಬದುಕಿಗಿಂತ ದೂರವಾಗಿಲ್ಲ. ಅದರ ಒಂದೊಂದು ತುಣುಕೂ ಕೂಡ ಅವರ ಹೋರಾಟದ ಭಾಗ ಹೋರಾಟದ ಅನುಭವವೇ ಆಗಿದೆ. ಆ ಬರಹಗಳನ್ನು ಓದಿದ್ರೆ ಇದು ಯಾವುದೇ ಅಪರಿಚಿತ ಲೋಕದಿಂದ ಬಂದಂತೆ ಅನಿಸುವುದಿಲ್ಲ. ಯಾವುದೋ ಶೈಕ್ಷಣಿಕ ವಿಶ್ವವಿದ್ಯಾಲಯದಲ್ಲಿ ಕುಳಿತು ಯಾರಿಗೂ ಅರ್ಥವಾಗದೇ ಇರುವ ರೀತಿಯ ಬರಹ ಇದರಲ್ಲಿ ಒಂದೇ ಒಂದು ಇಲ್ಲ. ಅಪ್ಪಟವಾಗಿ ಅವರು ಏನು ನಂಬಿಕೊಂಡಿದ್ದಾರೆ, ಏನು ಹೇಳ್ತಾರೆ, ಹೇಗೆ ನಡಕೊಳ್ತಾರೆ ಅದಕ್ಕೂ ಅವರ ಬರಹಕ್ಕೂ ಸಣ್ಣ ವ್ಯತ್ಯಾಸ ಸಹ ನಮಗೆ ಕಾಣುವುದಿಲ್ಲ.

ಹೀಗೆ ದೀರ್ಘವಾಗಿ ಪುಸ್ತಕಗಳ ವಿಮರ್ಶೆ ಪ್ರೇಕ್ಷಕರ ಮನಗೆದ್ದದ್ದಂತೂ ನಿಜ.

ಡಾ. ಶಾಂತಾಮಠ್ ಅವರು ತಮ್ಮ ಕೃತಿಯ ಕುರಿತು ಕೆಲವು ಮಾತನಾಡಿದರು. ಹಾಗೇ ಮೀನಾಕ್ಷ ಬಾಳಿಯವರು ಆಡಿದ ಮಾತು ಡಾ.ವಸು ಅವರು ಹೇಳಿದಂತೆ ಅವರು ಹೇಳುವ ಒಂದೊಂದು ಕತೆಯಲ್ಲಿ ಮಹಿಳೆ ಇಲ್ಲದಿದ್ದರೂ ಕತೆಯ ವಿಚಾರ ಹೆಣ್ಣಿನದಾಗಿರುತ್ತದೆ ಅನ್ನುವ ವಿಷಯನ್ನು ದೃಢೀಕರಿಸುವಂತೆ ತಾನು ಡಾ.ಮೀನಾಕ್ಷಿ ಅಲ್ಲ, ಸಿದ್ದಪ್ಪನ ಮಗಳು ಮೀನಾಕ್ಷಿ ಅಲ್ಲ ತಾನು ಜನವಾದಿ ಮಹಿಳಾ ಸಂಘಟನೆಯ ಮಹಿಳಾ ಚಳುವಳಿಯ ಮೀನಾಕ್ಷಿ ಎಂದು ಹೇಳಲು ಹೊರಟು ಹೇಳಿದ ಉದಾಹರಣೆಯಾಗಿ ಉದ್ದರಿಸಿದ ಕುವೆಂಪು ಕತೆಯಲ್ಲೂ ಮಹಿಳಾ ವಿಚಾರವೇ ನುಸುಳಿತ್ತು. ಒಬ್ಬಾತ ಎಂಥಹ ಬರಹಗಾರನೇ ಆಗಲಿ, ಲೇಖಕನೇ ಆಗಲಿ, ಎಂಥೆಂಥ ಪ್ರಶಸ್ತಿಗಳನ್ನು ಹೊಂದಿದವನೇ ಆಗಲಿ ತನ್ನ ಹೆಂಡತಿಯ ಗಂಡನಾಗಿ ಸರಿಯಾಗಿ ನಡೆದುಕೊಂಡರೆ ಮಾತ್ರಾ ಸ್ವರ್ಗದಲ್ಲಿ ಜಾಗವಿರುತ್ತದೆ ಎಂಬರ್ಥವನ್ನು ಕೊಡುವ ಕುವೆಂಪು ಅವರ ಹೇಮೀ ಗಂಡ ಕವನವನ್ನು ಉದ್ದರಿಸಿದರು.
“ಹೊತ್ತಿಗೆ ನುಚ್ಚಿಲ್ಲ, ಹುಗ್ಗಿಗೆಲ್ಯಾದ ಬೆಲ್ಲ, ಸುಳ್ಳಂತ ಬರೀಲ್ಯಾಕ, ಸಿಟ್ಟೀಗೆ ಬರಲ್ಯಾಕ, ಬಿಟ್ಟೀಗೆ ಬಂತ್ಯೇನೋ ದೌತಿ ಲೆಕ್ಕಣಿಕೆ.” ಎನ್ನುವ ಕಡಕೋಳ ಮಂಜಪ್ಪ ಅವರ ಮಾತನ್ನು ಉದ್ದರಿಸುತ್ತಾ ನನ್ನ ದೌತಿ, ನನ್ನ ಲೆಕ್ಕಣಿಕೆ ಪುಗಸಟ್ಟೀ ಬಂದಿಲ್ಲ. ಸುಳ್ಳ ಸುಳ್ಳ ನಾ ಬರೆಯಲ್ಲ. ಬರೆಯೋದಾದ್ರೆ ಖರೆ ಖರೆ ಬರೀತೀನಿ ಇಲ್ಲಾಂದ್ರೆ ಬರೀಲಾರದೇ ಕುಂತ್ಕೊಂಡಿರತೀನಿ. ಇಲ್ಲೀ ತನ್ಕ ಬರೆದೋರೆಲ್ಲಾ ಸುಳ್ಳು ಬರೆದಿದ್ರು. ಏನು ಬರೆದಿದ್ರು, ಒಂದು ಕಾಮಧೇನು ಅದ. ಎದುರು ನಿಂತ್ರ ಎಲ್ಲಾ ಕೊಡತದ. ಒಂದು ಕಲ್ಪವೃಕ್ಷ ಅದ ಎದುರ ನಿಂತ್ರ ಎಲ್ಲಾ ಕೊಡತದ. ಅದರ ಎದುರಿಗೀ ನಿಂತು ಬಾಯರಿಕೆ ಕೊಡು ಅಂದ್ರ ಕೊಡತದ. ರೊಕ್ಕಾ ಕೊಡು ಅಂದ್ರ ಕೊಡತದ. ಎಂ.ಪಿ.3 ಕೊಡು ಅಂದ್ರ ಕೊಡತದ ಅಂತ ಬರದ್ರು. ಸುಳ್ಳ ಬರದ್ರು ಅವ್ರು. ” ಎಂದು ಮಾರ್ಮಿಕವಾಗಿ ಹೇಳಿದರು.

ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಜನವಾದ ಮಹಿಳಾ ಸಂಘಟನೆಯ ನಾಯಕಿ, ಲೇಖಕಿ ಕೆ. ನೀಲಾ ಅವರು `ಹೆಣ್ಣಿನ ಕೈ ಬೆರಳು ನೈಲ್ ಪಾಲೀಷ್ ಹಾಕಿಕೊಳ್ಳಲು, ಉಂಗುರ ತೊಡಲು ಮಾತ್ರವಲ್ಲ ಅದು ನೊಂದವರ ಕಣ್ಣೀರು ಒರೆಸುವುದಕ್ಕೆ ಬಳಕೆಯಾಗಬೇಕು ಎಂಬುದು ಒಟ್ಟಾರೆ ಸಾಹಿತ್ಯ ಮತ್ತು ಚಳುವಳಿಯ ಆಶಯವಾಗಿರಬೇಕು ಎಂದರು.

ಎನ್. ಪ್ರಭಾ ವೇದಿಕೆಗೆ ಬರಹಗಾರ್ತಿಯರು ಹಾಗೂ ಅತಿಥಿಗಳನ್ನು ಬರಮಾಡಿಕೊಂಡರೆ ಕೋದಂಡ ರಾಮ್ ಅವರನ್ನು ಸ್ವಾಗತಿಸಿ ಮಾತನಾಡಿದರು. ಚಿಂತನ ಪುಸ್ತಕದ ಜಯರಾಮು ಎಂ. ಅವರು ಚಿಂತನ ಪುಸ್ತಕದ ವಾಡಿಕೆಯಂತೆ ವೇದಿಕೆಯಲ್ಲಿ ಇದ್ದವರಿಗೆ ಪುಸ್ತಕ ಗುಚ್ಛ (ವಾಡಿಕೆಯ ಹೂ ಗುಚ್ಛದ ಬದಲಿಗೆ) ನೀಡಿ ಗೌರವಿಸಿದರು. ಚಿಂತನ ಪುಸ್ತಕದ ಶ್ರೀಮತಿ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಸಮಾರಂಭ ಮುಗಿಯಿತು.

ಸಮಾರಂಭದಲ್ಲಿ ಬಿಡುಗಡೆಯಾದ ಪುಸ್ತಕಗಳು
ಮನದ ಸೂತಕ ಹಿಂಗಿದೊಡೆ (ಮಹಿಳಾಪರ ಹುಡುಕಾಟ) – ಡಾ.ಮೀನಾಕ್ಷಿ ಬಾಳಿ,
ಕತ್ತಲಂಚಿನ ಕಿಡಿಗಳು : ಡಾ.ಮೀನಾಕ್ಷಿ ಬಾಳಿ
ಆಕಾಶ ಧಾರೆ : ಡಾ. ಶಾಂತಾ ಮಠ

Advertisements