ಮಲೆನಾಡಿನ ಬೆಳಕಿರದ ಕತ್ತಲ ರಾತ್ರಿಯಲ್ಲಿ ರಸ್ತೆಯಂಚಿನ ಮರಗಳ ಮೇಲೆಲ್ಲ ಮಿಣ ಮಿಣ ಬೆಳಗಿ ನೂರಾರು ದೀಪಗಳನ್ನು ಒಮ್ಮೆಲೇ ಬೆಳಗಿದಂತೆ ಭಾಸವಾಗುವ  ಮಿಂಚುಳ್ಳಿ (ನಮ್ಮ ಭಾಷೆಯಲ್ಲಿ ಮೀನುಂಬಳ್ಳಿ)ಗಳ ನೆನಪಿಗೆ ನಾನು ಸರಿದೆ. ಗೆಳತಿ ಮೀನಾಕ್ಷಿ ಬಾಳಿಯವರು ಪರಿಚಯಿಸಿದ ಕುಂಬಾರ ರಾಚವ್ವ, ಐಗೋಳ ಗುರುಬಾಯಿ   ಅಜೀಬ್ ತಮಾಷ್ಯಾದ ಪೋರಿಯರು ಮಹಿಳಾ ಪ್ರಶ್ನೆಗಳ ಕುರಿತು ಅಧ್ಯಯನ ಮಾಡಿದವರಲ್ಲ. ಭಾಷಣಗಳನ್ನು ಕೇಳಿದವರಲ್ಲ. ನಿಜ ಅಂದ್ರೆ ಪ್ರಪಂಚದಲ್ಲಿ ಇಂಥದ್ದೊಂದು ಇದೆ ಎಂದೂ ಗೊತ್ತಿರದ ಜೀವಗಳು. ಅವರ ಬದುಕ ಬಟ್ಟಲಿನಲ್ಲಿ ಸಿಕ್ಕಿದ್ದು, ಅದನ್ನು ತಮ್ಮದೇ ರೀತಿಯಲ್ಲಿ ದಕ್ಕಿಸಿಕೊಂಡು ವೈಯಕ್ತಿಕ ಹಕ್ಕು ಸ್ಥಾಪಿಸಿಕೊಂಡವರು. ಲೈಂಗಿಕ ಸ್ವಾತಂತ್ರ್ಯ ಅಥವಾ ಲೈಂಗಿಕತೆಯ ಬಗ್ಗೆ ಯದ್ವಾ-ತದ್ವಾ ಅಭಿಪ್ರಾಯಗಳು ಹರಡುತ್ತಿರುವ ಈ ಸಂದರ್ಭದಲ್ಲಿ ಈ ಕೃತಿಯ ನಾಯಕಿಯರೆಲ್ಲ ಒಂದು ರೀತಿ ಉತ್ತರಗಳೇ ಆಗಿವೆ.
ಸದ್ದಿಲ್ಲದೇ ಸರಿದು ಹೋದ ಸಿದ್ದಿಯರನ್ನು ಸುದ್ದಿಗೆ ತಂದ ಮೀನಕ್ಕನವರ ಬರಹಗಳು ಪುಸ್ತಕದ ರೂಪದಲ್ಲಿ ಪ್ರಕಟವಾಗುವುದಕ್ಕೆ ಇದು ಸಕಾಲ. ನಿಸರ್ಗ ಸಹಜ ಸಂಗತಿಗಳು ಈ ಹಿಂದೆಯೂ ನಡೆದಿವೆ. ಈಗಲೂ, ಮುಂದೂ ನಡೆಯುತ್ತಿರುವವೇ. ಅವುಗಳನ್ನು ಬಣ್ಣದ ಕನ್ನಡಕ ಹಾಕಿ ನೋಡಿ, ತಮ್ಮ ಮನಸ್ಸಿನ ಕೊಳಕೆಲ್ಲವನ್ನೂ ಶಾಯಿಯಾಗಿ ತುಂಬಿಸಿ ಬರಹಕ್ಕಿಳಿಸಿ ಅದನ್ನೇ ಶ್ರೇಷ್ಠವೆಂದು ಹೊಗಳಿಸಿಕೊಳ್ಳುತ್ತಿರುವವರಿಗೆ ಕುಂಬಾರ ರಾಚವ್ವ, ಐಗೋಳ ಗುರುಬಾಯಿ ಉತ್ತರವಾಗುತ್ತಾರೆ.
ಕುಂಬಾರ ರಾಚವ್ವನ ಮೂಲಕ ಈ ನೆಲದ ಬೆಳಕಿಗೆ ಬಾರದ, ಆದರೂ  ಇಡೀ ಪ್ರಪಂಚಕ್ಕೇ  ಗೊತ್ತಿರುವ ಮುಗ್ಧ ಹೆಣ್ಣು ಮಕ್ಕಳ ಬದುಕನ್ನು ಲೇಖಕಿ ಬಿಚ್ಚಿಡುತ್ತಾರೆ.
ಯೌವನದ ದೇಹದ ಬಯಕೆಯೋ, ಪರಿಸ್ಥಿತಿಯ ಕೈಗೊಂಬೆಯೋ, ಬದುಕಿಗಾಗಿ  ಅನಿವಾರ್ಯ ಸಮ್ಮತಿಯೋ ಒಟ್ಟಿನಲ್ಲಿ ಮಲ್ಲಪ್ಪನ ಪ್ರೇಯಸಿಯಾಗಿ ಬದುಕು ನಡೆಸಿದ ರಾಚವ್ವ, ಅದರಿಂದಾಚೆಗೆ ಅಸ್ತಿತ್ವ ಗುರುತಿಸಿಕೊಳ್ಳುವ ಅವಕಾಶ ಸಿಕ್ಕಾಗ ತಾನೇ ತಾನಾಗಿ ಅತ್ತ ನಡೆಯುವ ಮೂಲಕ ವ್ಯಕ್ತಿ ಸ್ವಾತಂತ್ರ್ಯದ ಸಂಕೇತವೆನಿಸುತ್ತಾಳೆ.
ಐಗೋಳ ಗುರುಬಾಯಿ ಶಿಕ್ಷೆ ತನಗೆ ಮಾತ್ರ ಏಕೆ? ನನಗೆ ಮಠ ಬಿಡಿಸಬೇಕಂದ್ರ ಸ್ವಾಮೀನ ಹೊರಗ ಹಾಕ್ಲಿ, ಯಾಕ ಅಂವ ಹಾದರ ಮಾಡಿಲ್ಲ . . . ಎನ್ನುವ ಮೂಲಕ ಪ್ರಚಲಿತವಿರುವ ಗಂಡಿಗೊಂದು ನ್ಯಾಯ, ಹೆಣ್ಣಿಗೊಂದು ನ್ಯಾಯದ ವಿರುದ್ಧದ ಪ್ರತಿಭಟನೆಯಾಗುತ್ತಾಳೆ. ಐಗೋಳ ಗುರುಬಾಯಿ ಮಾತ್ರವಲ್ಲ, ಇಂದಿಗೂ ಆಗಾಗ ವೇಶ್ಯಾವಾಟಿಕೆಯ ಜಾಲವನ್ನು ಬೇಧಿಸಿದೆವೆಂದು ಸುದ್ದಿ ಮಾಡುವಾಗ ಸಾಮಾನ್ಯವಾಗಿ ತೋರಿಸುವುದು ಅಲ್ಲಿದ್ದ ಮಹಿಳೆಯರನ್ನು ಮಾತ್ರ. ಸಮಾಜದ ಈ ಧೋರಣೆಯನ್ನು  ಗುರುಬಾಯಿ ಪ್ರಶ್ನಿಸುವುದು.
ಬದುಕೆಂಬ ಚಕ್ಕೀಯ ಪಾಟಾ – ಕೂಡಾ ಇಂದಿನ ಹಲವು ವಿದ್ಯಮಾನಗಳಿಗೆ ನೇರ ಸವಾಲೇ. ಮನಸ್ಸುಗಳು ಒಂದಾಗುವಲ್ಲಿ ಜಾತಿ-ಧರ್ಮಗಳ ಭೇದವಿಲ್ಲ ಎಂಬುದನ್ನು ತೋರಿಸುತ್ತಲೇ, ಪಾಳೇಯಗಾರೀ ವ್ಯವಸ್ಥೆಗೂ ಕನ್ನಡಿ ಹಿಡಿಯುತ್ತದೆ. ಪ್ರತಿಷ್ಠೆಯ ಪರಂಪರೆ ಒಂದು ಹೊಸ ಸಮುದಾಯವನ್ನೇ ಹುಟ್ಟು ಹಾಕಿದೆ. ಶಿಶುನಾಳ ಷರೀಫರ ಗೀತೆಗಳಲ್ಲಿ ಬರುವ `ಹಾಡಲು ಬಂದ ಪಾತರದವಳ’ದ ಪಾತರದವರು ಈ ಸಮುದಾಯದವರು. ಧಾರ್ಮಿಕವಾಗಿ ಇಸ್ಲಾಂ, ಆದರೆ ಸಾಂಸ್ಕೃತಿಕವಾಗಿ ಸ್ಥಳೀಯರೊಂದಿಗೆ ಬೆರೆತು ದೀಪಾವಳಿ ಹಬ್ಬ ಆಚರಿಸುವುದು, ಕಾಂತಿಲಾಲ `ಛೋಟೀ ಮಾ’ಳ ಹೆಣ್ಣು ಮಕ್ಕಳನ್ನು ಜತನದಿಂದ ನೋಡಿಕೊಳ್ಳುವುದು, ಅವರನ್ನು ಮುಸ್ಲಿಂ ಮನೆತನಕ್ಕೆ ಕೊಟ್ಟು ಮದುವೆ ಮಾಡುವುದು ಇವು ಈ ನೆಲದ ಕೂಡಿ ಬಾಳುವ ದೃಷ್ಟಾಂತಗಳು. ಅವರನ್ನು ವೈಭವೀಕರಿಸುವ ನಮ್ಮ ಹಿರಿಯರಿಗೆ, ಅವರ ಹೃದಯ ಸಂಪುಟದ ಆಳಗಳನ್ನು ಬಗೆಯಲಾದೀತೇ? ಎಂಬ ಗುಮಾನಿಯ ಮೂಲಕ ನಮ್ಮ ಸಮಾಜ ಸಹೃದಯತೆಯಿಂದ ಸಂಕುಚಿತತೆಗಳು ಅವಜ್ಞೆಗೆ ಗುರಿಯಾಗಿರುವುದನ್ನು ಗುರುತಿಸುತ್ತಲೇ ತಮ್ಮ ಮೂಲ ಕುಲ ಮುಸ್ಲಿಂ ಸಮುದಾಯದಿಂದಲೂ ಉಚ್ಛಾಟಿಸಲ್ಪಟ್ಟು ಸ್ಥಳೀಯ ಜಮೀನ್ದಾರಿ ಕುಟುಂಬಗಳಿಂದಲೂ ಪರಕೀಯತೆ ಅನುಭವಿಸುವ ಆ ಕುಟುಂಬಗಳ ಕುರಿತು ಸಮಾಜಕ್ಕಿರಬೇಕಾದ ಕಳಕಳಿಯನ್ನು ಸೂಚಿಸುತ್ತದೆ.
ಅಜೀಬ್ ತಮಾಷ್ಯಾದ ಪೋರಿ ಚನ್ನಮ್ಮ ಮಾಡಿದ್ದು ಮೌನ ಕ್ರಾಂತಿ. ಲೈಂಗಿಕತೆಯ ಕುರಿತು ಬಿಚ್ಚು ಮಾತನ್ನಾಡುತ್ತಾಳೆ. ಅದರಾಗರೇ ಅಂಥಾದೇನದಾನ ಪೋರಿ . . . ಸಂಗ್ತಿ ಎಂಬುದು ಒಂದಿನಾ ಮಾಡದ್ರೂ ಅಷ್ಟೇ. ಪೂರಾ ಜಿಂದಗೀ ಮಾಡದ್ರೂ ಅಷ್ಟೇ ಎನ್ನುವ ಮಾತಿನ ಮೂಲಕ ದೇಹ ಸುಖವೇ ಸರ್ವ ಸುಖ ಅಲ್ಲ ಎನ್ನುವುದಕ್ಕೂ ಸಾಕ್ಷಿ ಎನಿಸುತ್ತಾಳೆ.
ಹೀಗೆ ಹಲವು ಹತ್ತು ಸಂಗತಿಗಳನ್ನು Look at the world through women’s eyes ಎಂಬಂತೆ ಮೀನಕ್ಕ ತೆರೆದಿಡುತ್ತಾರೆ.
ಚನ್ನಮ್ಮ, ರಾಚವ್ವ ಮೂಲಕ ಮಹಿಳೆಯರಿಗೆ ಕುಟುಂಬದಲ್ಲಿ, ಸಮಾಜದಲ್ಲಿ ಸಿಗಬೇಕಾದ ಅಧಿಕಾರ, ಸ್ಥಾನಮಾನಗಳಷ್ಟೇ ಬಸ್ಸಿನಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಆಸನಗಳು ಮತ್ತು ಅದನ್ನು ಪಡೆಯಲು ಬೆಳೆಸಿಕೊಳ್ಳಬೇಕಾದ ಗಟ್ಟಿತನದ ಕುರಿತೂ ಮಾತನಾಡುತ್ತಾರೆ. ಹೆಣ್ಣಿಗಿಲ್ಲದ ಮೀಸೆ ತನಗಿದೆ ಎಂಬುದೇ ಗಂಡಸಿನ ಅಹಂಕಾರಕ್ಕೆ ಕಾರಣವಾದರೆ ಪುಗ್ಸಟ್ಟೆ ಬೆಳೆದ ಮೀಸೆ ಒಜ್ಜೆಯಾದ್ರೆ ಬೋಳಿಸ್ಕೊ ಎನ್ನುವ ಮೂಲಕ ಪುರುಷ ಪ್ರತಿಷ್ಠೆಗೆ ಸವಾಲು ಹಾಕುತ್ತಾರೆ.
ಅಂಕಣ ಬರಹಗಳಿಗಿರುವ ಸಕಾರಾತ್ಮಕ ಗತಿಯನ್ನು ಡಾ. ಮೀನಾಕ್ಷಿ ಬಾಳಿ ಸರಿಯಾಗಿಯೇ ಹಿಡಿದಿದ್ದಾರೆ. ಅಂಕಣ ಬರಹಗಳಿಗೆ ಕೆಲವು ಮಿತಿಗಳೂ ಇರುತ್ತವೆ. ಆದರೆ ಬಾಳಿಯವರು ಸಿಗುವ ಅಲ್ಪ ಜಾಗವನ್ನೇ ಬಳಸಿಕೊಂಡು ಬಾನಾವತಿಯಂತಹ ಕಂದಾಚಾರವನ್ನೂ ಪ್ರಶ್ನಿಸಿದ್ದಾರೆ. ರೇಗಾದಂತಹ ಕಾನೂನುಗಳನ್ನು ಹಗುರಾಗಿ ಪರಿಗಣಿಸದಂತೆ ಎಚ್ಚರಿಕೆ ನೀಡುವ ಸ್ತ್ರೀಭ್ರೂಣ ಹತ್ಯೆಯಂತಹ ಸಮಾಜವನ್ನೆ ನಿಧಾನವಾಗಿ ನಿನರ್ಾಮಿಸುವ ಪಿಡುಗಿನತ್ತಲೂ ಗಮನ ಸೆಳೆದಿದ್ದಾರೆ.
ಧರ್ಮಶಾಸ್ತ್ರವನ್ನು ಆಧರಿಸಿ ನ್ಯಾಯ ನೀಡುವ ವ್ಯವಸ್ಥೆ ಜಾರಿಗೆ ಬರಬೇಕೆನ್ನುವ, ಮನುಸ್ಮೃತಿಯೇ ಸಂವಿಧಾನವಾಗಿ, ಜ್ಯೋತಿಷ್ಯವೇ ವಿಜ್ಞಾನವಾಗಿ ಬಿಡುವ ಪ್ರಯತ್ನಗಳತ್ತಲೂ  ಓದುಗರನ್ನು ಎಚ್ಚರಿಸುತ್ತಾರೆ. ವೈದಿಕ ಪರಂಪರೆಯನ್ನು ಮೆರೆಸುವ ತವಕದಲ್ಲಿ ಸಂವಿಧಾನವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಅವಸರದಲ್ಲಿ ರಾಮಾ ಜೋಯಿಸರು ಅಂಬೇಡ್ಕರರನ್ನೇ ಮರೆತು ಬಿಟ್ಟರೆಂಬುದನ್ನು ನಾವ್ಯಾರೂ ಮರೆಯದಂತೆ ನೆನಪಿನಲ್ಲಿ ಉಳಿಸುತ್ತಾ ಈ ತೆರನ ಬೌದ್ಧಿಕ ಬಾಂಬ್ಗಳ ಬಗ್ಗೆ ಗಮನಸೆಳೆದಿದ್ದಾರೆ. ಒಟ್ಟಾರೆಯಾಗಿ ಪುರುಷ ನಿರ್ಮಿತ, ಪುರುಷ ಪ್ರೇರಿತ, ಪುರುಷ ಪೂಜಿತ ಸಮಾಜದ ಪ್ರತೀ ಹಂದರದಲ್ಲಿ ಮಹಿಳೆಯ ನೋವಿನ ಕತೆಯಿದೆ. ಮಹಿಳೆಯ ಗಟ್ಟಿತನವಿದೆ. ಎಲ್ಲಾ ಯಾತನೆಗಳ ಮಧ್ಯೆಯೂ ಬದುಕು ಕಟ್ಟಿಕೊಳ್ಳುವ ಛಲವಿದೆ.
ಸಾಹಿತ್ಯ ಲೋಕದಲ್ಲಿ ಆಗಲೇ ಮಾಸದ ಹೆಸರು ಮೂಡಿಸಿರುವ ವಚನ ಕ್ರಾಂತಿಯ ಮೂಸೆಯಲ್ಲೆ ಬೆಳೆದ ಮೀನಕ್ಕಳ ಲೇಖನ ಸಂಗ್ರಹಕ್ಕೆ ಮುನ್ನುಡಿ ಬರೆದ ಸಂಭ್ರಮ ನನಗೆ.

ಮುನ್ನುಡಿಯಿಂದ

ವಿಮಲಾ ಕೆ. ಎಸ್.

Advertisements