ಕರ್ನಾಟಕದಲ್ಲಿ ನಾನು ಸದಾ ಗೌರವಿಸುವ ಮತ್ತು ಮೆಚ್ಚುವ ಅನೇಕ ದಿಟ್ಟ ಮಹಿಳೆಯರಿದ್ದಾರೆ. ಅವರಲ್ಲಿ ಗುಲಬರ್ಗೆಯ ಕೆ. ನೀಲಾ ಹಾಗೂ  ಮೀನಾಕ್ಷಿ ಬಾಳಿ ಅವರೂ ಸೇರಿದ್ದಾರೆ. ಯಾವಾಗಲೂ ಜೊತೆಯಲ್ಲಿಯೇ ಕಾಣಿಸುವ ಇವರಿಬ್ಬರೂ ಹೋರಾಟಗಾರರು, ಒಳ್ಳೆಯ ಮಾತುಗಾರರು ಹಾಗೂ ಲೇಖಕಿಯರು.  ಈ ಮೂರೂ ಗುಣಗಳು ಒಟ್ಟಿಗೆ ಸೇರುವುದು ಅಪರೂಪ. ಇವರ ಪ್ರಾಮಾಣಿಕತೆ, ಖಚಿತವಾಗಿ ಚಿಂತಿಸುವ ಗುಣ, ನೇರನುಡಿ, ನೈತಿಕ ವ್ಯಕ್ತಿತ್ವ ಇವೆಲ್ಲವೂ ನನಗೆ ಹಿಡಿಸಿದೆ.

ಇವರಲ್ಲಿ ಒಬ್ಬರಾದ ಡಾ. ಮೀನಾಕ್ಷಿ ಬಾಳಿ ಅವರು ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರು. ಅವರು ತರಗತಿಗಳಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವ ಕೆಲಸ ಮಾಡುತ್ತಿರುವುದು ಸರಿಯೇ ಸರಿ. ಆದರೆ ಇದಕ್ಕಿಂತಲೂ ಮಹತ್ವದ ಎರಡು ಕೆಲಸಗಳನ್ನು ಅವರು ಮಾಡುತ್ತ ಬಂದಿದ್ದಾರೆ. ಅವೆಂದರೆ, ತಮ್ಮ ಪರಿಸರದಲ್ಲಿ ಎಲ್ಲಿಯಾದರೂ ಅಸಹಾಯಕರ ನೋವೊಂದು ಕೇಳಿಸಿದರೆ, ಅಲ್ಲಿಗೆ ಧಾವಿಸಿ ಹೋಗಿ ಅದಕ್ಕೆ ಮಾನವೀಯ ಕಳಕಳಿಯಿಂದ ಮಿಡಿಯುವುದು; ದುರ್ಬಲರನ್ನು ದಮನಿಸುವ ಎಲ್ಲ ಬಗೆಯ ಶಕ್ತಿಗಳ ಎದುರು ಗಟ್ಟಿಯಾದ ದನಿಯನ್ನು  ಮೊಳಗಿಸುವುದು. ಸಮಾಜದ ಮನಸ್ಸಿನ ಒಳಗೆ ಇರುವ ಹಲವು ಬಗೆಯ  ಸೂತಕಗಳನ್ನು ಕಳೆಯುವುದಕ್ಕೆ ಈ ಬಗೆಯ ಮಿಡಿತ ಮತ್ತು ಮೊಳಗು ಆವಶ್ಯಕವಾಗಿವೆ.

ಮೂಲತಃ ಆಕ್ಟವಿಸ್ಟ್ ಆಗಿರುವ ಬಾಳಿ ಅವರು, ದಶಕಗಳ ಕಾಲ ಮಾಡಿದ ಚಳುವಳಿ, ಅಧ್ಯಯನ ಹಾಗೂ ಉಪನ್ಯಾಸಗಳ ಫಲವೆಂಬಂತೆ ಇಲ್ಲಿನ ಬರೆಹಗಳು ಮೂಡಿವೆ. ಶರಣ ಸಂಸ್ಕೃತಿಯೂ ಮಾರ್ಕ್ಸ್‌ವಾದವೂ ಹದವಾಗಿ ಬೆರೆತ ಪ್ರಜ್ಞೆಯುಳ್ಳ ಬಾಳಿಯವರು, ವಚನ ಚಳುವಳಿಯ ಅತ್ಯುತ್ತಮ ಆದರ್ಶಗಳನ್ನು ಇಟ್ಟುಕೊಂಡು, ಜಗತ್ತನ್ನು ನೋಡಲು ಯತ್ನಿಸಿದ್ದಾರೆ. ಇಲ್ಲಿನ ಬರೆಹಕ್ಕೆ ಅಧ್ಯಯನಕ್ಕಿಂತ ಬೀದಿ ಅನುಭವಗಳೇ ಹೆಚ್ಚಿನ ಕಸುವನ್ನು ಕೊಟ್ಟಿವೆ ಎಂದು ಹೇಳಬಹುದು. ಸಾಹಿತ್ಯದ ವಿಶ್ಲೇಷಣೆಗೆ ಚಳುವಳಿಯ ಅನುಭವಗಳಿಂದಲೂ ಚಳುವಳಿಗೆ ಸಾಹಿತ್ಯದ ಅಧ್ಯಯನದಿಂದಲೂ ಶಕ್ತಿ ಹಾಯಿಸಿಕೊಳ್ಳುವ ಕೆಲವೇ ಸಾಮಾಜಿಕ ಕಾರ್ಯಕರ್ತರಲ್ಲಿ ಬಾಳಿಯವರೂ ಒಬ್ಬರು. ಹೀಗಾಗಿಯೇ ಇಲ್ಲಿನ ಚಿಂತನೆಗಳು ಮೂರ್ತವಾಗಿದೆ. ಸ್ಪಷ್ಟವಾಗಿವೆ. ನೇರವಾಗಿವೆ. ಸರಳವಾಗಿವೆ. ಪುರುಷವಾದ ಕೋಮುವಾದ ಜಾತಿವಾದ ಹೀಗೆ ನಮ್ಮ ಬಾಳನ್ನು ಕುಬ್ಬಮಾಡಿರುವ ಎಲ್ಲ ವಿಕಾರಗಳಿಗೆ ಅವರು  ಇಲ್ಲಿ ತೋರಿರುವ ಸಿಟ್ಟು ಮತ್ತು ಪ್ರತಿರೋಧಗಳು ಓದುಗರಿಗೆ ತಟ್ಟುತ್ತವೆ. ಈ ಸಿಟ್ಟು ಮತ್ತು ಪ್ರತಿರೋಧಗಳ ಹಿಂದೆ ಹೊಸ ಸಮಾಜ ಕಟ್ಟುವ ಕನಸಿದೆ ಎನ್ನುವುದು ಈ ಬರೆಹಗಳನ್ನು ಓದುವ ಯಾರಿಗೂ ಹೊಳೆಯುತ್ತದೆ.

ಇಲ್ಲಿನ ಬರೆಹಗಳು ಸಾಮಾನ್ಯವಾಗಿ ಮಾಹಿತಿಯನ್ನು ಜೋಡಿಸಿ ಕೊಡುತ್ತ, ಚಾರಿತ್ರಿಕ ಸಮೀಕ್ಷೆ ಮಾಡುತ್ತ ವಿಧಾನವನ್ನು ಅನುಸರಿಸಿವೆ. ಇದರಿಂದ ವರ್ತಮಾನದ ಘಟನೆಗೆ ಕಾರಣವಾಗಿರುವ ಗತಕಾಲದ ಭಿತ್ತಿಯ ನೋಟಗಳೇನೊ ಸಿಕ್ಕುತ್ತಿವೆ. ಆದರೆ ಚಾರಿತ್ರಿಕ ನೋಟಗಳ ಹೆಚ್ಚಳದಿಂದಾಗಿ, ಲೇಖಕಿಗೆ ತನ್ನ ಚಿಂತನೆ ಕಲ್ಪನೆಗಳನ್ನು ಕೂಡಿಸಿ ಹೊಸ ಕಥನಗಳನ್ನು ಕಟ್ಟುವ ಸಾಧ್ಯತೆಗಳು ಕಡಿಮೆಯಾಗಿವೆ. ಬಾಳಿಯವರ ಬಾಯಿಯಲ್ಲಿ ಅನೇಕ ಹೋರಾಟದ ಮಾನವೀಯ ಕತೆಗಳನ್ನು ಕೇಳಿರುವ ಹಿನ್ನೆಲೆಯಲ್ಲಿ ಈ ಮಾತನ್ನು ನಾನು ಬರೆಯುತ್ತಿದ್ದೇನೆ. ಬಾಳಿ ಅವರು ತಮ್ಮ ಅನುಭವಕ್ಕೆ ಬಂದ ನಿರ್ದಿಷ್ಟ ಘಟನೆಯನ್ನು ಇಟ್ಟುಕೊಂಡು ಅದಕ್ಕೆ ಸಂಬಂಧಿಸಿದ ಎಲ್ಲ  ಸೂಕ್ಷ್ಮವಾದ ಬಿಡಿ ವಿವರಗಳನ್ನು ಕೂಡಿಸುತ್ತ ಹೊಸ ಕಥನವನ್ನೇ ಕಟ್ಟಿತೋರುವ ವಿಧಾನವನ್ನು ಹಿಡಿಯುವುದು ಸಾಧ್ಯವಾಗಬೇಕು ಎಂದು ಸಹ ನಾನು  ಆಶಿಸುತ್ತೇನೆ. ಇದು ಸಾಧ್ಯವಾದರೆ, ಬೇರೊಂದು ವಿನ್ಯಾಸದ ಬರೆಹಗಳೇ ಹುಟ್ಟುವ ಸಾಧ್ಯತೆಯಿದೆ. ಇಲ್ಲಿರುವ  ಲೇಖನವೊಂದರಲ್ಲಿ ಬರುವ ಇರುವೆಯ ರೂಪಕದ ವಿಶ್ಲೇಷಣೆಯಲ್ಲಿ ಅಂತಹ ವಿನ್ಯಾಸದ ಸಣ್ಣ ಝಲಕು ಬಂದಿದೆ. ಮಹಿಳೆಯು ತಾಯಿಯಾಗುವ ಪಡುವ ಜೈವಿಕ ಅನುಭವದ ಕಥನದಲ್ಲಿ ಆ ಝಲಕು ಮೈದೋರಿದೆ. ಸಾಮಾನ್ಯವಾಗಿ ವೈಚಾರಿಕ ಪ್ರಜ್ಞೆಯಿಂದ ತಾರ್ಕಿಕವಾಗಿ ಬರೆಯುವ ಬಾಳಿಯವರು, ಕೆಲವು ವಿಷಯಗಳಲ್ಲಿ ಅಂತರ್ಮುಖಿಯಾಗಿದ್ದು, ಭಾವನಾತ್ಮಕವಾಗಿಯೂ ಕಾವ್ಯಾತ್ಮಕವಾಗಿಯೂ ಬರೆಯಬಲ್ಲರು ಎಂಬುದಕ್ಕೆ ಮೇಲೆ ಉಲ್ಲೇಖಿಸಿದ  ಎರಡು ನಿರ್ದಶನಗಳು ಸಾಕ್ಷಿಯಾಗಿವೆ.

ಗುಲಬರ್ಗ ಭಾಷೆಯಲ್ಲಿ ಗುಂಡುಹೊಡೆದಂತೆ ಉಪನ್ಯಾಸ ಮಾಡುವ ಬಾಳಿಯವರನ್ನು ಕೇಳಿರುವ ಯಾರಿಗಾದರೂ, ಅವರ  ಮಾತಿನ ಪರಿಣಾಮ ಬರೆಹದಲ್ಲಿ ಅಷ್ಟಾಗಿ ಇಲ್ಲವೆಂದು ಅನಿಸಿದರೆ ಸೋಜಿಗವಿಲ್ಲ. ಆದರೂ ಬಾಳಿಯವರು ತಮ್ಮ ಚಿಂತನಶೀಲ ಬರೆಹಗಳ ಮೂಲಕ ಹೆಚ್ಚು ಜನರಿಗೆ ತಲುಪುವುದು ಅಗತ್ಯವಾಗಿದೆ. ಹೊಸತಲೆಮಾರಿನ ತರುಣ ತರುಣಿಯರು ಈ ಪುಸ್ತಕವನ್ನು ಓದಿ ಅವರ ಸಿಟ್ಟು ಜೀವನಪ್ರೀತಿ ಕ್ರಿಯಾಶೀಲತೆಗಳನ್ನು ತಮಗೂ ಆವಾಹಿಸಿಕೊಳ್ಳಬೇಕು ಎಂದು ನಾನು ಆಶಿಸುತ್ತೇನೆ.

ರಹಮತ್ ತರೀಕೆರೆ (ಮುನ್ನುಡಿಯಿಂದ)

Advertisements