‘ಬಸು- ಕೃತಿ ಅನಾವರಣ
ಪ್ರಜಾವಾಣಿ ವಾರ್ತೆ

ಬೆಂಗಳೂರು: `ಅಧಿಕಾರಿ ಎನ್ನುವ ಅಹಂಕಾರವನ್ನು ತೆಗೆದು ಹಾಕುವ ರಾಜ್ಯವದು. ಅಧಿಕಾರಿಗಳು ಭ್ರಷ್ಟರಾಗುವುದಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ಪರಸ್ಪರ ಗೌರವ, ಸಮಾನತೆ ಅಲ್ಲಿಯ ಬೇರುಮಟ್ಟದ ಸಂಪ್ರದಾಯ. ಬಾಡಿಗೆ ಮನೆಯಲ್ಲಿ ಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದ ರಾಜಕಾರಣಿ `ಬಾಬು’ಗಳು ರೈಲು-ಟ್ರಾಮ್‌ಗಳಲ್ಲಿ ಓಡಾಡಿಕೊಂಡಿರುತ್ತಿದ್ದರು…’

ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರು ಪಶ್ಚಿಮ ಬಂಗಾಳದ ತಮ್ಮ ಹಳೆಯ ನೆನಪುಹಂಚಿಕೊಳ್ಳಲು ಚಿಂತನ ಪುಸ್ತಕ ಪ್ರಕಾಶನ ವೇದಿಕೆ ಕಲ್ಪಿಸಿಕೊಟ್ಟಿತು.ನಗರದ ಸುಬ್ಬಯ್ಯ ವೃತ್ತದ ಬಳಿ ಇರುವ ಎಸ್‌ಸಿಎಂ ಸಭಾಂಗಣದಲ್ಲಿ ದಿ. ಜ್ಯೋತಿ ಬಸು ಅವರ ಅನುವಾದಿತ ಜೀವನ ಚರಿತ್ರೆಯ ಕೃತಿ ಬಿಡುಗಡೆ ಕಾರ್ಯಕ್ರಮ ಗುರುವಾರ ನಡೆಯಿತು. `ಐಎಎಸ್ ಮುಗಿದ ನಂತರ 1994ರಲ್ಲಿ ಪ್ರೊಬೇಶನರಿ ಅವಧಿಗೆಂದು ಪಶ್ಚಿಮ ಬಂಗಾಳದ ಬುರ್‌ದ್ವಾರ್ ಜಿಲ್ಲೆಗೆ ತೆರಳಿದೆ. ಜ್ಯೋತಿ ಬಸು ಅವರ ಆಡಳಿತಾವಧಿಯಲ್ಲಿ 12 ವರ್ಷ ಅಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೆ’ ಎಂದು ಮಂಜುನಾಥ ಪ್ರಸಾದ್   ಹೇಳಿದರು.

`ಎರಡು ವರ್ಷದ ಪ್ರೊಬೇಶನರಿ ಅವಧಿಯಲ್ಲಿ ಕ್ಷೇತ್ರಕಾರ್ಯಕ್ಕೆಂದು ಪಶ್ಚಿಮ ಬಂಗಾಳದ ಹಳ್ಳಿಹಳ್ಳಿಗಳಿಗೆ ಹೋದ ಅನುಭವ ನಿಜಕ್ಕೂ ಅವಿಸ್ಮರಣೀಯ. ಅಲ್ಲಿಯ ಜನಸಾಮಾನ್ಯರ ಉಭಯ ಕುಶಲೋಪರಿ ವಿಚಾರಿಸುತ್ತ… ಜೀವನಕ್ಕೆ ಏನು ಮಾಡಿಕೊಂಡಿದ್ದೀರಿ? ಎಂದು ಕೇಳಿದಾಗ ಅವರು ಸಿಪಿಎಂ ಮಾಡ್ತಿದಿನಿ, ಕಾಂಗ್ರೆಸ್ ಮಾಡ್ತಿದಿನಿ… ತೃಣಮೂಲ್…

ಎಂದು ಹೇಳುತ್ತಿದ್ದಂತೆ ಆಶ್ಚರ್ಯವಾಗುತ್ತಿತ್ತು… ಇದರರ್ಥ ಅವರು ರಾಜಕೀಯ ಪಕ್ಷಗಳಲ್ಲಿ ತೊಡಗಿಸಿಕೊಳ್ಳುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು. ಈ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದ ಆ ಸಾಮಾನ್ಯ ಜನರಲ್ಲಿ ರಾಜಕೀಯ ಪ್ರಜ್ಞೆ ಸ್ಥಿರವಾಗಿತ್ತು’ ಎಂದು ನೆನಪಿಸಿಕೊಂಡರು.ಚಿಂತಕ ಡಾ. ಜಿ. ರಾಮಕೃಷ್ಣ, ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಸುರಭಿ ಬ್ಯಾನರ್ಜಿ ರಚಿಸಿದ ಜ್ಯೋತಿ ಬಸು ಅವರ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದ ಪ್ರೊ. ಆರ್.ಕೆ. ಹುಡಗಿ, ಸಿಪಿಎಂನ ಬೆಂಗಳೂರು ಘಟಕದ ಕಾರ್ಯದರ್ಶಿ ಕೆ. ಪ್ರಕಾಶ್ ಉಪಸ್ಥಿತರಿದ್ದರು.

Advertisements