ಕನ್ನಡದಲ್ಲಿ ನನಗೆ ತಿಳಿದಂತೆ ಜಗತ್ತಿನ ಒಳ್ಳೆ ಸಿನಿಮಾಗಳ ಬಗ್ಗೆ ಬಂದ ಪುಸ್ತಕಗಳು ತೀರಾ ಕಡಿಮೆ. ವಾಸ್ತವವಾಗಿ ಕನ್ನಡದಲ್ಲಿ ಚಿತ್ರರಂಗ ಬಹಳಷ್ಟು ಬೆಳೆದಿದ್ದರೂ ಆ ಸಿನಿಮಾ ಭಾಷೆಯನ್ನು ಅರ್ಥೈಸುವ ಕೃತಿಗಳೂ ಬೆರಳೆಣಿಕೆಯಷ್ಟು.

ಆ ಲೆಕ್ಕದಲ್ಲಿ ಹೇಳುವುದಾದರೆ, ಪ್ರತಿರಂಗವೂ ತನ್ನ ಪ್ರೇಕ್ಷಕರನ್ನು ಸೃಷ್ಟಿಸಿಕೊಳ್ಳಬೇಕು, ತರಬೇತುಗೊಳಿಸಬೇಕು ಹಾಗೂ ಒಬ್ಬ ಸೃಜನಶೀಲ ಪ್ರೇಕ್ಷಕನಾಗಿಯೋ, ಶ್ರೋತೃವಾಗಿಯೋ ಮಾಡಿಕೊಳ್ಳಬೇಕು. ಆದರೆ ನಮ್ಮ ಚಿತ್ರರಂಗ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದು ಎಲ್ಲೂ ತೋರಬರುವುದಿಲ್ಲ.

ಬೆಂಗಳೂರಿನಂಥ ಮಹಾನಗರಗಳಲ್ಲಿ ಚಿತ್ರ ಸಮಾಜ (ಫಿಲಂ ಸೊಸೈಟಿ) ಗಳು ಕೆಲವೆಡೆಯಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಉದಾಹರಣೆಗೆ ಸುಚಿತ್ರಾ ಫಿಲಂ ಸೊಸೈಟಿ ಇತ್ಯಾದಿ. ಇತ್ತೀಚೆಗೆಷ್ಟೇ ಆರಂಭವಾದ ಕರ್ನಾಟಕ ಚಲನಚಿತ್ರ ಅಕಾಡೆಮಿ `ಬೆಳ್ಳಿಮಂಡಲ’ ಮತ್ತು `ಬೆಳ್ಳಿ ಸಾಕ್ಷಿ’ ಎಂಬ ಪರಿಕಲ್ಪನೆಗಳ ಮೂಲಕ ರಾಜ್ಯಾದ್ಯಂತ ಚಿತ್ರ ಸಮಾಜಗಳ ಆಂದೋಲನ ಆರಂಭಿಸಲು ಮುಂದಾಗಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ, ಇಂಥ ಚಿತ್ರ ಸಮಾಜಗಳು ಕಾರ್ಯ ನಿರ್ವಹಿಸಲು ಪೂರಕವಾಗುವಂಥ ಚಿತ್ರ ಪುಸ್ತಕಗಳೇ ಇಲ್ಲ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲೀ, ನಿರ್ದೇಶಕರ ಸಂಘಗಳಾಗಲೀ ಯಾರೂ ಇಂಥದೊಂದು ಹೊಣೆಯನ್ನು ತೆಗೆದುಕೊಳ್ಳಲು ತಯಾರಿಲ್ಲ. ಅದಕ್ಕೆ ಕಾರಣಗಳು ಬೇಕಾದಷ್ಟಿವೆ. ತಾನು ನಿರ್ವಹಿಸುವ ಮಾಧ್ಯಮದ ಬಗ್ಗೆ ಅದನ್ನು ಬಳಸುವವರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕಾದುದು ಅವರ ಕರ್ತವ್ಯ. ಆದರೆ, ಸಿನಿಮಾವನ್ನು ಒಂದು ಕಲೆ, ಒಂದು ಮನರಂಜನೆ…ಹೀಗೆ ಹತ್ತು ಹಲವು ವಿಧಗಳಲ್ಲಿ ಗೌರವಸ್ಥಾನಗಳನ್ನು ನೀಡಿರುವುದರಿಂದ ಅದಕ್ಕೆ ಯಾರೂ ದಿಕ್ಕಿಲ್ಲ. ನನಗೆ ಸದಾ ತಮಾಷೆ ಎನಿಸುವ ಸಂಗತಿಯೂ ಇದು.

ಒಂದು ಸಣ್ಣದೊಂದು ಬಾಚಣಿಗೆಯನ್ನೂ ಮಾರುವ ಕಂಪನಿಯೂ ತನ್ನ ಉತ್ಪನ್ನದ ಬಳಕೆಯ ವಿಧಾನ ಮತ್ತು ಅದರಿಂದ ತೃಪ್ತಿಯನ್ನು ಪಡೆಯುವ ವಿಧಾನ ಕುರಿತು ಪ್ರಚಾರ ಮಾಡುತ್ತದೆ. ನಮ್ಮ ಸಿನಿಮಾದ ಮಂದಿ ಪ್ರಚಾರವಲ್ಲ, ಆ ಕುರಿತು ಅರಿವಿನ ಅಭಿಯಾನವನ್ನು ಮಾಡಬೇಕು. ನಮ್ಮ ನಿರ್ಮಾಪಕರಿಗೆ ಪುರಸೊತ್ತಿಲ್ಲ, ಬೇಕಾಗಿಯೂ ಇಲ್ಲ. ಹಾಗಾಗಿ ಮತ್ತೇನೂ ಆಗುತ್ತಿಲ್ಲ. ಒಂದು ಬೃಹತ್ ಸಮೂಹ ಮಾಧ್ಯಮದ ದುರ್ಬಳಕೆಯಾಗುತ್ತಿದೆ.

ಇಂಥ ಮಾತುಗಳನ್ನು ಆಡುತ್ತಿರುವ ಸಂದರ್ಭದಲ್ಲೇ ಲೇಖಕ ಎ.ಎನ್. ಪ್ರಸನ್ನ ಅವರು ಬರೆದ `ಚಿತ್ರ-ಕಥೆ’ (ಪ್ರಕಟಣೆ : 2008, ಸಂಸ್ಥೆ : ಚಿಂತನ ಪುಸ್ತಕ, ಬೆಂಗಳೂರು, ಪುಟಗಳು : 260) ಪುಸ್ತಕ ಬಹಳ ಉಪಯುಕ್ತ. 32 ಲೇಖನಗಳಿವೆ. ಇರಾನ್, ಪಾಕಿಸ್ತಾನ, ಜರ್ಮನ್, ಫ್ರಾನ್ಸ್, ಅರ್ಜೆಂಟೈನಾ, ಟರ್ಕಿ, ಅಮೆರಿಕ, ಪೋಲೆಂಡ್ ಹೀಗೆ ಬೇರೆ ಬೇರೆ ದೇಶಗಳ ಒಟ್ಟೂ 32 ಚಲನಚಿತ್ರಗಳ ಬಗ್ಗೆ ಬರಹಗಳಿವೆ.

ಇಲ್ಲಿಯ ಬರಹಗಳು ನೀಡುವ ಖುಷಿಯ ಬಗ್ಗೆ ಉಲ್ಲೇಖಿಸಬೇಕು. ಈ ಬರಹಗಳು ಬರಿದೇ ಬರಹಗಳಾಗುವುದಿಲ್ಲ. ಒಂದು ಚಿತ್ರದ ವಿಶ್ಲೇಷಣೆ ಅತ್ಯಂತ ನಯವಾದ ಧ್ವನಿಯಲ್ಲೇ ಮೂಡಿಬಂದಿದೆ. ಇಡೀ ಬರಹವನ್ನು ಓದಿದ ಮೇಲೆ ಆ ಚಿತ್ರವನ್ನು ನೋಡಬಹುದಾದ ಮತ್ತು ಗ್ರಹಿಸಬಹುದಾದ ನೆಲೆ ಸ್ಪಷ್ಟಗೊಳ್ಳುತ್ತದೆ. ಈ ಮಾತಿಗೆ ಉದಾಹರಣೆ ಎಂಬಂತೆ ಉಲ್ಲೇಖಿಸಲು ಬಹಳಷ್ಟು ವಾಕ್ಯವೃಂದಗಳಿವೆ. ಹಾಗಾಗಿ, ಅವುಗಳನ್ನು ಉಲ್ಲೇಖಿಸುವುದಿಲ್ಲ.

ಛಾಯಾಗ್ರಹಣದ ಹಲವು ತಾಂತ್ರಿಕ ಸಂಗತಿಗಳನ್ನೂ ಬಹಳ ಸರಳವಾಗಿ ಕೆಲವೆಡೆ ಪ್ರಸ್ತಾಪಿಸುವ ಲೇಖಕರು, ಆ ಚಿತ್ರ ನೋಡಬೇಕೆಂಬ ಬಯಕೆಯನ್ನು ಓದುಗರಲ್ಲಿ ಮೂಡಿಸುತ್ತಾರೆ. ವಾಸ್ತವವಾಗಿ, ದೃಶ್ಯ ಮಾಧ್ಯಮದ ಸಾಧ್ಯತೆಯನ್ನು ಅಕ್ಷರಗಳಲ್ಲಿ ಹೇಳುವುದು ಕಷ್ಟವೇ. ಅಂಥ ಪ್ರಯತ್ನವನ್ನು ನಿರಾಯಾಸವಾಗಿ ಮಾಡಿದ್ದಾರೆ. `ಚಿತ್ರವನ್ನು ನೋಡುವುದಕ್ಕಿಂತ ಓದುವ ಅಭ್ಯಾಸ ಒಳ್ಳೆಯದು’ ಎಂಬ ಅವರ ಹೇಳಿಕೆ ಅರ್ಥಪೂರ್ಣ. ನಾವೆಲ್ಲರೂ ಸಿನಿಮಾವನ್ನು ನೋಡುವುದನ್ನೇ ರೂಢಿಸಿಕೊಂಡ ಮಂದಿ. ಆದರೆ ಅದನ್ನು ಓದುವ, ಆ ಮೂಲಕ ಅರ್ಥ ಮಾಡಿಕೊಳ್ಳುವ ಹಾಗೂ ಪ್ರತಿಯೊಂದಕ್ಕೂ ಇರಬಹುದಾದ ತರ್ಕ ಸಾಧ್ಯತೆಯನ್ನು ತಿಳಿದುಕೊಳ್ಳುವ ಅವಕಾಶ ದಕ್ಕುವುದು ಸಿನಿಮಾವನ್ನು ಓದಿದಾಗಲೇ.

ಮನರಂಜನೆಯ ನೆಲೆಯಲ್ಲಿ ಸಿನಿಮಾವನ್ನು ನೋಡಿದರೂ, ಅದರೊಳಗಿನ ಒಳದನಿಯನ್ನು ಗ್ರಹಿಸಲು ಒಂದು ಚಿಕ್ಕದಾದ ತಯಾರಿ ಬೇಕು. ಅದನ್ನು ಅತ್ಯಂತ ಶಿಸ್ತಿನಿಂದಲೇ ರೂಢಿಸಿಕೊಳ್ಳಬೇಕೆಂದೇನೂ ಇಲ್ಲ. ಅಂಥದೊಂದು ವಾದವಿದೆ. ನಿಧಾನವಾಗಿ ಒಂದೊಂದೇ ಚಿತ್ರವನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡು, ಓದಲು ಶುರುಮಾಡಬೇಕು. ಗೊಂದಲವಿದ್ದರೆ ಅದನ್ನು ಆ ಬಗ್ಗೆ ತಿಳಿದುಕೊಂಡವರಲ್ಲಿ ಚರ್ಚಿಸಿ ಮಾಹಿತಿ ಪಡೆಯಬಹುದು. ಹಾಗೆಯೇ, ಕ್ರಮೇಣ ಅರಿತುಕೊಳ್ಳುತ್ತಾ ಹೋಗಬಹುದು.

ಈ ನೆಲೆಯಲ್ಲಿ ಅತೀವ ಆಸಕ್ತಿ ಮೂಡಿಸುವ ಕೃತಿ, ಪ್ರಸ್ತಾವನೆ ಇಡೀ ಸಿನಿಮಾ ಜಗತ್ತಿನ ಹಲವು ಮಾದರಿಗಳು, ಶೈಲಿಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಒದಗಿಸುತ್ತದೆ. ಆ ಪ್ರಸ್ತಾವನೆಯನ್ನು ಓದದೇ, ಲೇಖನಗಳನ್ನು ಓದಿದರೆ ಬಿಡಿ ಬಿಡಿ ಚಿತ್ರಗಳಂತೆ ತೋರಬಹುದು. ಇಡೀ ಪುಸ್ತಕಕ್ಕೆ ಒಟ್ಟಂದ ಕಲ್ಪಿಸುವಂಥ ಶಕ್ತಿ ಇರುವುದು ಪ್ರಸ್ತಾವನೆಗೆ.

ಆಯಾ ಚಿತ್ರದ ನಿರ್ದೇಶಕನ ಬಗ್ಗೆಯೂ ಒಂದಿಷ್ಟು ಮಾಹಿತಿ ಒದಗಿಸಿದ್ದು, ಪೂರಕ ಸಾಮಗ್ರಿಯಂತಾಗಿದೆ. ಬಹಳಷ್ಟು ಬಾರಿ, ಚಿತ್ರವನ್ನು ನೋಡಿರುತ್ತೇವೆ, ಕಥೆಯನ್ನು ಹೇಳಬಲ್ಲೆವು. ಆದರೆ ಅದಕ್ಕೆ ದುಡಿದವರನ್ನು ನೆನಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಂಥ ಸಂಕಷ್ಟದಿಂದ ಲೇಖಕರು ಪಾರು ಮಾಡಿದ್ದಾರೆ.

ಪ್ರಸ್ತಾವನೆಯಲ್ಲಿ ಸಿನಿಮಾ ಒಂದು ಭಾಷೆಯೇ ಹೇಗೆ ? ಎಂಬ ಪ್ರಶ್ನೆ ಹಾಕಿಕೊಂಡು, ಭಾಷೆಯ ರೀತಿ ಅದಕ್ಕೊಂದು ನಿಶ್ಚಿತ ವ್ಯಾಕರಣವಿಲ್ಲ. ತನಗೆ ಅಗತ್ಯವಾದದ್ದನ್ನು ಆವಿಷ್ಕರಿಸಿಕೊಳ್ಳುತ್ತಾ ಹೋಗುತ್ತದೆ ಎಂದಿದ್ದಾರೆ. ಅದು ಭಾಗಶಃ ಸತ್ಯ. ಆದರೆ, ನನಗೆ ತೋರುವಂತೆ ಒಂದು ನಿಶ್ಚಿತ ವ್ಯಾಕರಣವಿರದಿದ್ದರೂ ಚೌಕಟ್ಟಿದೆ. ಅದಕ್ಕೆ ನಾವು ಗ್ರಾಮರ್ ಎಂಬ ವ್ಯಾಖ್ಯಾನ ಕೊಡಲಾಗದೇನೋ. ಜಾಗತಿಕವಾಗಿ ಒಳ್ಳೆ ಚಿತ್ರಗಳೆಂದು (ಲೇಖಕರೇ ನೀಡಿದ 32 ಚಿತ್ರಗಳಲ್ಲಿ) ಖ್ಯಾತಿ ಗಳಿಸಿದವೆಲ್ಲಾ ಒಂದು ನೆಲೆಯಲ್ಲೇ ಸೂತ್ರಬಂಧಿತವಾಗಿವೆ. ಇಂದಿನ ವಾಣಿಜ್ಯ ನೆಲೆಯ ಚಿತ್ರಗಳೂ `ಫಾರ್ಮುಲಾ’ ಕ್ಕೆ ಮೊರೆ ಹೋಗಿವೆ.

ಇದೇ ಸಂದರ್ಭದಲ್ಲಿ ಅಂದಿನ ಅಗತ್ಯಕ್ಕೆ ತಕ್ಕಂತೆ ದೃಶ್ಯ ಮಾಧ್ಯಮ ತೆರೆದುಕೊಳ್ಳುತ್ತಾ, ಹೊಸದನ್ನು ಒಳಗೊಳ್ಳುತ್ತಾ ಹೋಗುತ್ತದೆ. ಹಾಗಾಗಿಯೇ ಅದು ಬಹಳಷ್ಟು ಮಟ್ಟಿಗೆ ಬೆಳೆದದ್ದು. ನಮ್ಮ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದರೂ, ದೃಶ್ಯ ಮಾಧ್ಯಮಕ್ಕೆ ನೂರು ವರ್ಷದಷ್ಟು ಇತಿಹಾಸವಿದೆ. ಅದು ಇಡೀ ಜಗತ್ತನ್ನು ಆವರಿಸಿಕೊಂಡ ರೀತಿ ಗಮನಿಸಿದರೆ, ಅದಕ್ಕಿರುವ ಅಗಾಧತೆ, ಪ್ರಯೋಗಶೀಲತೆಯೇ ಅಂಥದೊಂದು ಆವರಿಸಿಕೊಳ್ಳುವ ಶಕ್ತಿ ನೀಡಿದ್ದು.

ಇಂದಿನ ಅತ್ಯಂತ ಅನಿವಾರ್ಯ ಮಾಧ್ಯಮವಾಗಿ ದೃಶ್ಯ ಮಾಧ್ಯಮ ಮಾರ್ಪಡುತ್ತಿರುವ ದಿನಗಳಲ್ಲಿ ಪ್ರತಿಯೊಬ್ಬರೂ ಇಂಥ ಬೃಹತ್ ಸಾಧ್ಯತೆಯನ್ನು ಅರ್ಥ ಮಾಡಿಕೊಳ್ಳಲೆಬೇಕಿದೆ. ಅದರಲ್ಲೂ ಮುಂದಿನ ತಲೆಮಾರಿನವರಿಗೆ ಮನರಂಜನಾ, ಮನೋವಿಕಾಸ ಎಲ್ಲ ಬಗೆಯಲ್ಲೂ ಈ ಮಾಧ್ಯಮವೇ ಮಾರ್ಪಾಡಾಗುವ ಸಂಭವವೇ ಹೆಚ್ಚು. ಅಂಥ ಹೊತ್ತಿನಲ್ಲಿ ಅವರಿಗೆ ಆ ಮಾಧ್ಯಮದ ಗೊತ್ತು-ಗುರಿ, ಸಾಧ್ಯಾಸಾಧ್ಯತೆ, ಮಿತಿಗಳೆಲ್ಲವನ್ನೂ ಹೇಳುವ ಹೊಣೆ ಅವರ ಹಿಂದಿನ ತಲೆಮಾರಿನದ್ದು, ಅಂದರೆ ನಮ್ಮದು. ಹಾಗಾಗಿ ಒಂದು ಪೂರ್ವ ತಯಾರಿ ಪಡೆಯಬೇಕು. ಆ ನಿಟ್ಟಿನಲ್ಲಿ ಈ ಪುಸ್ತಕ ಸಾಕಷ್ಟು ಪ್ರಯೋಜನಕಾರಿ.

ಇಂಥದೊಂದು ವಿಶಿಷ್ಟ ಕೃತಿಯನ್ನು ಪ್ರಕಟಿಸಿರುವ ಚಿಂತನ ಪುಸ್ತಕಕ್ಕೂ ಧನ್ಯವಾದ ಸಲ್ಲಿಕೆಯಾಗಬೇಕು. ಕನ್ನಡದಲ್ಲಿ ಬಹಳಷ್ಟು ಕ್ಷೇತ್ರಗಳು ಬೆಳೆದಿವೆ. ಆದರೆ ಅದರ ಜ್ಞಾನವನ್ನು ಕನ್ನಡದಲ್ಲೇ ತಿಳಿದುಕೊಳ್ಳಲು ಸಾಮಗ್ರಿಯಿಲ್ಲ. ಸರಕಾರ, ಜನರೆಲ್ಲಾ ಕೇವಲ ಸಾಹಿತ್ಯ, ಸಂಸ್ಕೃತಿಯೆಂದೇ ಅತಿಯಾದ ಪ್ರಾಶಸ್ತ್ರ ನೀಡಿದ್ದರ ಫಲ ಕನ್ನಡ ಬೇರೆಡೆ ಎಲ್ಲೂ ಬೆಳೆಯಲೇ ಇಲ್ಲ. ಸರಕಾರವೂ ಗಮನಹರಿಸಲಿಲ್ಲ. ಅದರ ಫಲ ಈಗ ಉಣ್ಣುತ್ತಿದ್ದೇವೆ. ಅಂಥದೊಂದು ನಿರ್ವಾತವನ್ನು ತುಂಬುವಲ್ಲಿ ಪ್ರಕಾಶನ ಪ್ರಯತ್ನಿಸಿದ್ದಕ್ಕೆ ಅಭಿನಂದನೆ.

-ಅರವಿಂದ ನಾವಡ

Advertisements