1tif

ಇತ್ತೀಚೆಗೆ ಬಿಡುಗಡೆಯಾದ ಕೆ ಎಸ್ ರವಿಕುಮಾರ್ ಅವರ ಮಿನಿ ಕತೆಗಳ “ಬಿ- ನೆಗೆಟೀವ್”  ಮಿನಿ ಪುಸ್ತಕಕ್ಕೆ ಜಿ ಎನ್ ಮೋಹನ್ ಬರೆದ ಗಮನಾರ್ಹ ಮುನ್ನುಡಿ.

ಅವು ಎಳೆಯ ಕಾಲುಗಳು. ಅವುಗಳಿಗೆ ಕುಣಿಯುವುದಷ್ಟೇ ಗೊತ್ತು. ಆಟ ಬೇಕೆಂದಾಗ ಹತ್ತಾರು ಜನರ ಗುಂಪಿರಬೇಕು. ರಸ್ತೆ ತುಂಬಾ ಕೇಕೆ ಹಾಕಿ ಮೈ ದಣಿಯ ಲಗೋರಿ, ಜೂಟಾಟ, ಕಣ್ಣಾಮುಚ್ಚಾಲೆ ಆಡಬೇಕು. ಈ ಎಳೆಯ ಕಾಲುಗಳಿಗೆ, ಕೇಕೆ ಹಾಕುತ್ತಿದ್ದ ದನಿಗಳ ಮಧ್ಯೆ ಇವರು ಹಿಂದೂ ಮನೆಯವರು, ಇವರು ಮುಸ್ಲಿಂ ಮನೆಯವರು ಎಂಬ ಗೋಡೆ ಎದ್ದು ನಿಂತಿತಲ್ಲಾ ಅದಕ್ಕೇ

***

ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಅವರ ಲಗಾನ್, ಕಾಮೋಶಿ, ಸ್ವದೇಸ್ ನೋಡಿ ಅವರೊಳಗೊಂದಾಗಿ ಹೋಗುತ್ತಿದ್ದಾಗ ಅವರು ನಮ್ಮವರಲ್ಲ ಎಂದು ಡಂಗುರ ಸಾರಿ ಹೃತಿಕ್ ರೋಷನ್ ನನ್ನು ಬಿಂಬಿಸಿದರಲ್ಲಾ, ಅದಕ್ಕೆ-

***

ಹೃತಿಕ್ ರೋಷನ್ ನ ಆ ಮುಗ್ಧತೆ, ಆ ಸೆಳೆಯುವ ಕಣ್ಣು ಒಂದೇ ಏಟಿಗೆ ಚಿತ್ ಮಾಡುವ ಕುಣಿತದತ್ತ ಮಾರುಹೋಗುತ್ತಿದ್ದಾಗ ಅವನನ್ನು ಯಾವುದೋ ಒಂದು ಧರ್ಮಕ್ಕೆ ಮಾತ್ರ ಕಟ್ಟಿ ಹಾಕಿಬಿಟ್ಟರಲ್ಲಾ, ಅದಕ್ಕೆ-

***

ಶಾರುಖ್ ಮದುವೆಯಾಗಿದ್ದು ಗೌರಿಯನ್ನು, ಮಗನ ಹೆಸರು ಇಬ್ಬರೂ ಇಷ್ಟಪಟ್ಟು ಇಟ್ಟ ಆರ್ಯನ್ ಎಂಬುದನ್ನು ಮರೆತು ಹೋದರಲ್ಲಾ, ಅದಕ್ಕೆ-

***

ಹೃದಯ ಮಾತ್ರ ಮಾತಾಡಿ, ಇಬ್ಬರೂ ಜೊತೆಯಾಗಿ ಕನಸುಗಳ ಟಕಿಸಿಕೊಳ್ಳಲು ಹೊರಟಿದ್ದಾಗ ಅವ ಹಿಂದೂ, ಈಕೆ ಮುಸ್ಲಿಂ ಎಂಬ ಪಟ್ಟ ಕಟ್ಟ್ಟಿಬಿಟ್ಟರಲ್ಲಾ, ಅದಕ್ಕೆ-

***

ಜಾತಿಯನ್ನು ಧಿಕ್ಕರಿಸಿದ್ದ ವಚನಕಾರರ ಮೋಡಿಗೆ ಒಳಗಾಗಿ, ವಚನದ ಸಾಲು ಸಾಲುಗಳನ್ನೂ ಎದೆಯಾಳಕ್ಕೆ ಇಳಿಸಿPÉÆAಡು, ಹೋದೆಡೆಯಲ್ಲಾ ಜನರ ಮನದೊಳಗೆ ಕೂಡಿಸಲು ಪ್ರಯತ್ನ ಮಾಡುತ್ತಿದ್ದಾಗ ಸಾಬಿ, ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾನೆ ನೋಡಿ ಎಂದರಲ್ಲಾ, ಅದಕ್ಕೆ-

***

ಗೆದ್ದಾಗ ಗೆದ್ದೆತ್ತಿನ ಬಾಲ ಹಿಡಿದು, ಸೋತಾಗ ಹಣ್ಣಾಗುವಂತೆ ಬಡಿದಾಗ ಅಜರುದ್ದೀನ್ ಪಾಕಿಸ್ತಾನದ ವಿರುದ್ಧ ಒಂದು ಸಿಕ್ಸರ್ ಎತ್ತಲಾಗದೆ ಔಟಾದಾಗ ಪಾಕಿಸ್ತಾನದ ಜೊತೆ ಮಿಲಾಖತ್ ಮಾಡಿಕೊಂಡಿದ್ದಾನೆ ಎಂಬ ಮಾತು ಆಡಿದರಲ್ಲಾ, ಅದಕ್ಕೆ-

***

`ಬೆಣ್ಣೆ ಕದ್ದ ನಮ್ಮ ಕೃಷ್ಣ, ಬೆಣ್ಣೆ ಕದ್ದನಮ್ಮಾ.. ಎಂದು ನಿಸಾರ್ ಅಹ್ಮದ್ ಆ ತುಂಟ, ಕಳ್ಳ ಕೃಷ್ಣನನ್ನು ನಮಗೆ ಇಷ್ಟವಾಗುವಂತೆ ಮಾಡಿದಾಗ `ಎಲ್ಲಿಯ ನಿಸಾರ್, ಎಲ್ಲಿಯ ಕೃಷ್ಣ ಎಂದು ಬಿಟ್ಟರಲ್ಲಾ, ಅದಕ್ಕೆ-

***

`ನಾನು ನಗೀನ್ ಅಹ್ಮದ್, ಕನ್ನಡ ಎಂ ಎ ಅಂದಾಗ `ಹ್ಹಾಂ, ಕನ್ನಡ ಎಂ ಎ ನಾ ಎಂದು ಇಷ್ಟಗಲ ಬಾಯಿ ಬಿಡುವಂತೆ ಮಾಡಿದಿರಲ್ಲಾ, ಅದಕ್ಕೆ-

***

`ಈತ ನನ್ನ ಕ್ಲೋಸ್ ಫ್ರೆಂಡ್, ಇದ್ದದ್ದು ನೇರವಾಗಿ ಹೇಳಿಬಿಡ್ತೀನಿ ಈತ ಮುಸ್ಲಿಂ, ನೀವು ಬೇಡ ಅಂದ್ರೆ ಮನೇನಲ್ಲಿ ನಾನ್ ವೆಜ್ ಮಾಡಲ್ಲ, ಪ್ರಾಮಿಸ್ ಈತ ನಿಜಕ್ಕೂ ಒಳ್ಳೆಯವನು ಅಂತಾ ನಾವು ಶಿಫಾರಸ್ ಮಾಡುವ ಹಾಗೆ ಮಾಡಿದ್ರಲ್ಲಾ, ಅದಕ್ಕೆ-

***

ಸರ್ ನನ್ನ ಹೆಸರು ಹುಚ್ಚೂಸಾಬ್, ಸರ್ ನಾನು ಮೊಯಿದ್ದೀನ್, ಸರ್ ನಾನು ಶೇಖ್ ಷಾ ವಲಿ, ಸರ್ ನಾನು ಹನೀಫ್, ಸರ್ ನಾನು… ಅಂತ ಇಂಟರ್ ವ್ಯೂ ರೂಂನಲ್ಲಿ ಹೆಸರು ಹೇಳುವುದಕ್ಕೇ ನೂರು ಸಲ ಬೆಚ್ಚುವ ಹಾಗೆ ಮಾಡಿದಿರಲ್ಲ, ಅದಕ್ಕೆ-

***

ನಾನು ಆ ಹುಡುಗೀನ ಮದುವೆ ಆದೆ. ಆದ್ರೆ ಕೆಟ್ಟ ಟೈಂ ಮಸೀದಿ ಬೀಳಿಸಿದಾಗಲೇ ಆಗಿಬಿಟ್ಟೆ, ಎಲ್ಲಾ ಕಡೇನೂ ನಮ್ಮನ್ನ ಹಡುಕ್ತಾ ಇದಾರೆ. ನಿಮ್ಮನೇಲಿ ನಾಲ್ಕು ದಿನ ತಲೆಮರೆಸಿ ಕೊಳ್ಳೋಕೆ ಅವಕಾಶ ಕೊಡ್ತೀರಾ ಅಂತ ಆತ ಎರಡು ಹನಿ ಕಣ್ಣೀರು ಹಾಕುವ ಹಾಗೆ ಮಾಡಿದಿರಲ್ಲಾ, ಅದಕ್ಕೆ-

***

`ನಿಮ್ಮದರಲ್ಲಿ ಬಿಡಪ್ಪಾ, ಎಷ್ಟು ಜನಾನೂ ಮದ್ವೆ ಮಾಡ್ಕೋಬೋದು, ಮಜಾಂದ್ರೆ ಮಜಾ ಅಂತ ಬಿಯರು ಹೀರುವಾಗ ಹ ಹ ಹಾ ಅಂತ ನಕ್ರಲ್ಲಾ, ಅದಕ್ಕೆ-

***

ಟಿಪ್ಪು ಸುಲ್ತಾನ್ ತನ್ನ ತಾಯಿ ಮೇಲಿನ ಪ್ರೀತಿಗಾಗಿ ಜಮಾಲಾಬಾದ್ ಕೋಟೆ ಕಟ್ಟಿದಾಗ ಅದು ಜಮಾಲಾಬಾದ್ ಅಲ್ಲ ನರಸಿಂಹಗಢ ಅಂತ ನೂರಾರು ವರ್ಷ ಆದ್ಮೇಲೆ ಕ್ಯಾತೆ ತೆಗೆದರಲ್ಲ, ಅದಕ್ಕೆ-

***

ಹಾಸನದಲ್ಲಿ ಬಸ್ ಹತ್ತಿ ರಾತ್ರಿ 11 ಗಂಟೇ ನಲ್ಲಿ ಉಪ್ಪಿನಂಗಡಿಯಲ್ಲಿ ಆ ಆರು ಜನ ಬಸ್ ಇಳಿದಾಗ `ತಕ್ಷಣ ಬಸ್ ಡಿಪೋಗೆ ಸುದ್ದಿ ಮಟ್ಟಿಸು, ಒಂದು ಕಣ್ಣಿಟ್ಟಿರ್ಲಿಅಂತ ಅಂದ್ರಲ್ಲ, ಅದಕ್ಕೆ-

ಈ ಎಲ್ಲಾ ಕಾರಣಕ್ಕಾಗಿಯೇ ಈ ಪುಸ್ತಕ `ಬಿ ನೆಗೆಟಿವ್ ಹೊರಬಂದಿದೆ.

ಆತನೊಬ್ಬನಿದ್ದ ಮಾಂಟೋ. ನೇರ ಕರುಳಿಗೇ ಕೈ ಹಾಕಿ ಕಥೆ ಹೇಳಿದಾತ. ಈಗ ರವಿಕುಮಾರ್. ಮಾಂಟೋನಿಂದ ಹಿಡಿದು ರವಿಕುಮಾರ್ ವರೆಗೆ ಎಲ್ಲರೂ ಹೇಳುತ್ತಿರುವುದು ನೋವಿನಕಥೆಗಳನ್ನೇ

ಬೆಳಕಿಗೆ ಮಸಿ ಮೆತ್ತಿಕೊಂಡಿದೆ

ಮುಂಜಾವಿಗೆ ಇರುಳ ನಂಜೇರಿದೆ

ಹಂಬಲಿಸಿ ಕಾದ ಬೆಳಗು

ಇದೇ ಏನಯ್ಯ.

ಎಂದು ನೋವಿನಿಂದ ಪ್ರಶ್ನಿಸಿದ್ದು ಫೈಜ್ ಅಹ್ಮದ್ ಫೈಜ್.

ಇದೇನಾ, ನಾವು ಕಾದಿದ್ದ ಬೆಳಗು ಎಂಬ ನಿಟ್ಟುಸಿರು ಹೆಚ್ಚುತ್ತಿರುವ ದಿನಗಳು ಇವು. ಅಂಧಕಾರದಲ್ಲಿ ಕ್ರಿಮಿಗಳ ಸಂತಾನ ಹೆಚ್ಚುತ್ತದೆ. ಕತ್ತಲಿದ್ದರೆ ತಾನೆ ರೋಗ ಹರಡುವ ಮಾತು. ಹಾಗಾದರೆ ಬೆಳಕು ಎಲ್ಲಿಂದ ಬರಬೇಕು? ರವಿಕುಮಾರ್ ಅವರು ಒಂದು ಬೆಳಕಿನ ತುಂಡೊಂದನ್ನು ನಮ್ಮ ಮುಂದಿಟ್ಟಿದ್ದಾರೆ.

ಕಗ್ಗತ್ತಲ ಕಾಲದಲ್ಲಿ

ಹಾಡುವುದು ಉಂಟೆ?

ಹೌದು, ಹಾಡುವುದೂ ಉಂಟು

ಕಗ್ಗತ್ತಲ ಕಾಲವನ್ನು ಕುರಿತು

ಎನ್ನುತ್ತಾನೆ ಬ್ರೆಕ್ಟ್. ರವಿಕುಮಾರ್ ಹಾಗೆ ಕಗ್ಗತ್ತಲ ಕಾಲದಲ್ಲಿ ಬರೆದಿದ್ದಾರೆ, ಕಗ್ಗತ್ತಲಿನ ಬಗ್ಗೆ.

Advertisements