ಹದಿನೈದು ವರ್ಷಗಳ ಹಿಂದೆ ಪುಸ್ತಕಗಳನ್ನು ಜನಸಾಮಾನ್ಯರ ಬಳಿಗೊಯ್ಯುವ ಗುರಿಯೊಂದಿಗೆ ಕನ್ನಡ ಪುಸ್ತಕ ಪ್ರಕಾಶನ ರಂಗದಲ್ಲಿ ಕಾಲಿಟ್ಟ ಚಿಂತನ-ಉತ್ತರ ಕನ್ನಡ, ಸುಮಾರು ಇಪ್ಪತ್ತು ಕಿರುಹೊತ್ತಗೆಗಳ 60 ಸಾವಿರ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿ ಪುಸ್ತಕಪ್ರಿಯರ ನಡುವೆ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿತು. ಐದು ವರ್ಷಗಳ ಹಿಂದೆ ಪ್ರೊ. ಡಿ.ಡಿ.ಕೊಸಾಂಬಿಯವರ “ಪುರಾಣ ಮತ್ತು ವಾಸ್ತವ” ಕೃತಿಯ ಕನ್ನಡ ಅನುವಾದದ ಪ್ರಕಟಣೆಯೊಂದಿಗೆ ಈ ಪ್ರಯತ್ನ ಒಂದು ಹೊಸ ಹಂತವನ್ನು ಆರಂಭಿಸಿತು. ಈಗ ಅದರ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಜನಪರ-ಪ್ರಗತಿಪರ ಕೃತಿಗಳ ರಚನೆ-ಪ್ರಕಾಶನ, ಮತ್ತು ಕರ್ನಾಟಕದ ಸಾಂಸ್ಕೃತಿಕ ಲೋಕದ ಆರೋಗ್ಯಕರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕನಸಿನೊಂದಿಗೆ “ಚಿಂತನ ಪುಸ್ತಕ” ಆರಂಭಿಸಿದ್ದೇವೆ.

ಕರ್ನಾಟಕದ ಬದುಕಿನಲ್ಲಿ ಜನ-ಪರ, ಪ್ರಗತಿಪರ ಮೌಲ್ಯಗಳನ್ನು ಎತ್ತಿ ಹಿಡಿಯುವ ಉತ್ತಮ ಅಭಿರುಚಿಯ ಕೃತಿಗಳ ಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುವುದು; ಕನ್ನಡ ಪುಸ್ತಕ ಪ್ರಕಾಶನ ಲೋಕವನ್ನು ಪುಸ್ತಕಗಳ ವಿಷಯ, ಶೈಲಿ, ಮುದ್ರಣ, ವಿನ್ಯಾಸಗಳಲ್ಲಿ ಇನ್ನಷ್ಟು ಹೊಸ, ಸಾಮಯಿಕ ಮತ್ತು ಸೃಜನಶೀಲ ಬೆಳವಣಿಗೆಗಳಿಂದ ಶ್ರೀಮಂತಗೊಳಿಸುವುದು, ಕನ್ನಡ ಮತ್ತು ಕರ್ನಾಟಕದ ಓದುಗರ ಸಾಮಾಜಿಕ ನೆಲೆ, ಕೃತಿಗಳಲ್ಲಿ ಬರುವ ಅನುಭವ ಲೋಕ ಮತ್ತು ಬರಹಗಾರರ ವಲಯವನ್ನು ಗಣನೀಯವಾಗಿ ವಿಸ್ತರಿಸುವುದು; ಹಾಗೂ ಈಗ ಕನ್ನಡದಲ್ಲಿ ಬರದ, ಆದರೆ ಅಗತ್ಯ ಇರುವ ವೈವಿಧ್ಯಮಯ ವಿಷಯದ ಪುಸ್ತಕಗಳನ್ನು ಕನ್ನಡದ ಓದುಗರಿಗೆ ನೀಡುವುದು ನಮ್ಮ ಉದ್ದೇಶ.

ಭಾರತದ ಪ್ರಸಿದ್ಧ ಇತಿಹಾಸಕಾರರಾದ ಪ್ರೊ. ಇರ್ಫಾನ್ ಹಬೀಬ್ ವರ, ನಮ್ಮ ದೇಶದ ಪ್ರಾರಂಭಿಕ ಮಾನವ ಜೀವನವನ್ನು ಪ್ರಸ್ತುತ ಪಡಿಸುವ “prehistory” ಯ ಕನ್ನಡ ಅನುವಾದ ಈಗ ನಿಮ್ಮ ಕೈಯಲ್ಲಿದೆ. ಶ್ರೀಯುತ ಪ್ರದೀಪ್ ಬೆಳಗಲ್ ಸುಂದರವಾಗಿ ಇದನ್ನು ಕನ್ನಡಿಸಿ ಕೊಟ್ಟಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಪ್ರೊ. ರಾಜಾರಾಮ ಹೆಗಡೆ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆದುಕೊಟ್ಟಿದ್ದಾರೆ. ನಮ್ಮ ಈ ಪ್ರಯತ್ನದಲ್ಲಿ ಆರಂಭದಿಂದಲೂ ಅಸಕ್ತಿ ವಹಿಸಿ ಪ್ರೋತ್ಸಾಹಿಸಿರುವ ಹಂಪಿ ವಿಶ್ವವಿದ್ಯಾಲಯದ ಡಾ. ವಿಜಯ ಪೂಣಚ್ಚ ತಂಬಂಡ ಇದಕ್ಕೆ ಬೆನ್ನುಡಿಯನ್ನು ನೀಡಿದ್ದಾರೆ. ಇವರೆಲ್ಲರಿಗೂ ನಮ್ಮ ಹಾರ್ದಿಕ ಕೃತಜ್ಞತೆಗಳು.

ಎಂ. ರಾಮು ಪುಸ್ತಕದ ಸುಂದರ ಮುಖಪುಟ ಮತ್ತು ವಿನ್ಯಾಸ ಮಾಡಿದ್ದಾರೆ. `ಚಿಂತನ ಪುಸ್ತಕದ ಪ್ರಧಾನ ಸಂಪಾದಕರಾಗಿ ವೇದರಾಜ ಎನ್.ಕೆ. ಸಂಪಾದನೆ, ನಿರ್ವಹಣೆ, ಪ್ರಕಟಣೆಯ ಸಂಯೋಜನೆಯ ಹೊಣೆ ಹೊತ್ತಿದ್ದಾರೆ. ಬೆಂಗಳೂರಿನ ಕ್ರಿಯಾ ಪ್ರಕಾಶನದ ಸಂಗಾತಿಗಳು ಜಿ.ಚಂದ್ರಶೇಖರ್ ನೇತೃತ್ವದಲ್ಲಿ ಇದರ ವಿನ್ಯಾಸ ಮತ್ತು ಮುದ್ರಣದ ಹೊಣೆಯನ್ನು ಪ್ರೀತಿಯಿಂದ ನಿರ್ವಹಿಸಿದ್ದಾರೆ. ಅವರಿಗೂ ನಮ್ಮ ಹಾರ್ದಿಕ ಕೃತಜ್ಞತೆಗಳು.

ಪ್ರೊ. ಇರ್ಫಾನ್ ಹಬೀಬ್ ವರ ಈ ಕೃತಿ `ಅಲಿಗರ್ ಹಿಸ್ಟೋರಿಯನ್ಸ್ ಸೊಸೈಟಿ`ಎ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ‘ (ಭಾರತದ ಜನ ಇತಿಹಾಸ) ಯೋಜನೆಯ ಮೊದಲ ಪ್ರಕಟಣೆ. ಈಗಾಗಲೇ ಈ ಮಾಲಿಕೆಯಲ್ಲಿ ಇನ್ನೂ 5 ಕೃತಿಗಳು ಪ್ರಕಟವಾಗಿದ್ದು ಇವೆಲ್ಲವನ್ನು ಕನ್ನಡದಲ್ಲಿ ನಿಮಗೆ ತಲುಪಿಸುವ ಆಶಯ ನಮ್ಮದು. ನೀವೂ ಇದಕ್ಕೆ ಸ್ಪಂದಿಸುವಿರೆಂದು ನಂಬಿದ್ದೇವೆ. ಈ ಮಾಲಿಕೆಯ ಎಲ್ಲಾ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸಲು ಆಲಿಗರ್ ಹಿಸ್ಟೋರಿಯನ್ಸ್ ಸೊಸೈಟಿ `ಚಿಂತನ ಪುಸ್ತಕಕ್ಕೆ ಅನುಮತಿ ನೀಡಿದೆ.

* * *

`ಅಲಿಗರ್ ಹಿಸ್ಟೋರಿಯನ್ಸ್ ಸೊಸೈಟಿ ಹಲವು ವರ್ಷಗಳಿಂದ ಇತಿಹಾಸದ ಬಗ್ಗೆ ವೈಜ್ಞಾನಿಕ ಮತ್ತು ಜಾತ್ಯಾತೀತ ಕಣ್ಣೋಟವನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಕೋಮುವಾದಿ ಮತ್ತು ಸಂಕುಚಿತವಾದೀ ವ್ಯಾಖ್ಯೆಗಳನ್ನು ಪ್ರತಿರೋಧಿಸುತ್ತಿರುವ ಒಂದು ಸಂಸ್ಥೆ. ಅದೀಗ People’s History of India (ಭಾರತದ ಜನ ಇತಿಹಾಸ)ವನ್ನು ಸಂಕಲಿಸುವ ಒಂದು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ಈ ಯೋಜನೆಯ ಅಡಿಯಲ್ಲಿ ಆರು ಕೃತಿಗಳು ಪ್ರಕಟವಾಗಿವೆ.

1. ಪೂರ್ವೇತಿಹಾಸ 2. ಸಿಂಧೂ ನಾಗರಿಕತೆ 3. ವೈದಿಕ ಯುಗ 3ಎ. ಕಬ್ಬಿಣ ಮತ್ತು ಧಾರ್ಮಿಕ ಕ್ರಾಂತಿಗಳ ಯುಗ 4. ಮೌರ್ಯ ಕಾಲದ ಭಾರತ ಹಾಗೂ 28. ಭಾರತೀಯ ಆಥರ್ಿಕ 1858-1914.

ಪ್ರೊ. ಇರ್ಫಾನ್ ಹಬೀಬ್, ಭಾರತದ ಪ್ರಖ್ಯಾತ ಇತಿಹಾಸಕಾರರು ಮತ್ತು ಈ ಹಿಂದೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದು ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಇವರ ಸಂಪಾದಕತ್ವದಲ್ಲಿ ಈ ಯೋಜನೆಯ ಸಂಪುಟಗಳು ಪ್ರಕಟವಾಗುತ್ತಿವೆ.

ಪ್ರದೀಪ ಬೆಳಗಲ್ ಎಂದೇ ಗುರುತಿಸಿಕೊಂಡಿರುವ ಬಿ.ಎಮ್.ಪ್ರದೀಪಕುಮಾರ್ ಇವರ ಜನನ 1957 ಆಗಸ್ಟ್ 19 ಬಳ್ಳಾರಿಯಲ್ಲಿ. ಇವರ ತಂದೆಯವರಾದ ಬಿ.ಎಂ. ಮರುಳಸಿದ್ದಯ್ಯ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಪ್ರದೀಪ್ ಓದಿದ್ದು ಬಿ.ಎಸ್ಸಿ.(ಕೃಷಿ). ಕಳೆದ 26 ವರ್ಷಗಳಿಂದ ಆಂಧ್ರ ಬ್ಯಾಂಕ್ನಲ್ಲಿ ಕೃಷಿ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಆಸಕ್ತಿ ಇತಿಹಾಸ ಹಾಗೂ ವಿಜ್ಞಾನ. `ಹೊಸತುಮಾಸಿಕದಲ್ಲಿ ಇವರ ಕೆಲವು ಲೇಖನಗಳು ಪ್ರಕಟವಾಗಿವೆ.

ಕನ್ನಡ ಪುಸ್ತಕಗಳೂ ಅಂತರ್ಜಾಲದಲ್ಲ್ಲಿ ಲಭ್ಯವಾಗಬೇಕೆಂಬ ಹಂಬಲದಿಂದ ಪ್ರಾರಂಭವಾದ “ಅರಿವು ಆನ್ ಲೈನ್” ಎಂಬ ಕನ್ನಡದ ಪ್ರಥಮ ಆನ್ ಲೈನ್ ಪುಸ್ತಕ ಮಳಿಗೆಗೆ ಪ್ರೇರಕರು. ಹಲವಾರು ವರ್ಷಗಳಿಂದ ಸಮುದಾಯ ನಾಟಕ ರಂಗದಲ್ಲಿ ಬಳ್ಳಾರಿ, ರಾಯಚೂರುಗಳಲ್ಲಿ ಸಕ್ರಿಯ ಭಾಗೀದಾರರೂ ಕೂಡಾ.

Advertisements